ತುಮಕೂರು

ಜೀತ ಪದ್ಧತಿ ಶಂಕೆ; ತಹಸೀಲ್ದಾರ್ ಪರಿಶೀಲನೆ

Published On :

ಕ.ಪ್ರ. ವಾರ್ತೆ   ಕುಣಿಗಲ್   ಜು.18
ತಾಲೂಕಿನ ವಿವಿಧೆಡೆ ಜೀತಪದ್ಧತಿ ಜಾರಿಯಲ್ಲಿದ್ದು, 11 ಮಂದಿಯನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಪ್ರಭಾರ ತಹಸೀಲ್ದಾರ್ ಸಿದ್ದಪ್ಪ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು, ಗುರುವಾರ ಭೇಟಿ ನೀಡಿ, ದೂರು ನೀಡಿದ್ದ ವ್ಯಕ್ತಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು.
ತಾಲೂಕಿನ ಬೋರಲಿಂಗನಪಾಳ್ಯದ ರಂಗಸ್ವಾಮಿ, ಗಂಗಣ್ಣ ಎಂಬವರ ಆಲೆಮನೆಗಳಲ್ಲಿ ಆರು ಮಂದಿ, ಪಟ್ಟಣದ ಕೆಆರ್ಎಸ್ ಅಗ್ರಹಾರದಲ್ಲಿ ನಡೆಯುತ್ತಿರುವ ಸೀನಪ್ಪ ಎಂಬಾತನಿಗೆ ಸೇರಿದ ಇಟ್ಟಿಗೆ ಭಟ್ಟಿಯಲ್ಲಿ ಐವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆಂದು, ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ಜೀತವಿಮುಕ್ತಿ ಹೋರಾಟಗಾರನೆಂದು ಹೇಳಿಕೊಂಡು ಬಂದಿದ್ದ ರಂಗಸ್ವಾಮಿ ಎಂಬ ವ್ಯಕ್ತಿ, ಕುಣಿಗಲ್ ಪಟ್ಟಣದ ನಕಲಿ ವಿಳಾಸ ನೀಡಿ, ವಿವಿಧ ವ್ಯಕ್ತಿಗಳ ಹೆಸರಲ್ಲಿ ದೂರು ಸಲ್ಲಿಸಿದ ಮೇರೆಗೆ, ಗುರುವಾರ ಬೆಳಗ್ಗೆ ಗುಬ್ಬಿ ತಹಸೀಲ್ದಾರ್, ಕುಣಿಗಲ್ ಪ್ರಭಾರ ಅಧಿಕಾರವಹಿಸಿಕೊಂಡಿರುವ ಸಿದ್ದಪ್ಪ, ಗುಬ್ಬಿ- ಕಸಬಾ ರಾಜಸ್ವ ನಿರೀಕ್ಷಕ ನರಸಿಂಹರಾಜು, ಕುಣಿಗಲ್ ಸಿಬ್ಬಂದಿಗಳಾದ ಮಹೇಶ್, ನಟರಾಜ್, ಮುರುಳಿ, ಲಕ್ಷ್ಮೀಕಾಂತ್, ಬೋರಲಿಂಗನಪಾಳ್ಯದ ರಂಗಸ್ವಾಮಿ ಎಂಬವರ ಆಲೆಮನೆಗೆ ಭೇಟಿ ನೀಡಿದಾಗ ದೂರು ನೀಡಿದ ನಿರ್ಮಲಬಾಯಿಯನ್ನು ಪ್ರಶ್ನಿಸಿದಾಗ, ತಮಗೆ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಬಂದು ನಿಮಗೆ ತಿಂಗಳಿಗೆ ಸಾವಿರ ಪೆನ್ಶನ್ ಹಾಗೂ ವಾಸಕ್ಕೆ ಮನೆ ಬರುವ ಹಾಗೆ ಮಾಡುತ್ತೇನೆಂದು ಈ ಅರ್ಜಿಗೆ ಸಹಿ ಹಾಕಿಸಿಕೊಂಡ. ತಾನು ಜೀತಕ್ಕಿಲ್ಲ, ದಿನಗೂಲಿ ಆಳಾಗಿ ದುಡಿಯುತ್ತಿದ್ದೇನೆ ಎಂಬುದಾಗಿ ಮಾಹಿತಿ ನೀಡಿದರು. ಆದರೆ, ಗಂಗಣ್ಣ ಅವರ ಆಲೆಮನೆಯಲ್ಲಿ ಮೊದಲು ಪರವಾಗಿ ಹೇಳಿಕೆ ನೀಡಿದ ದೂರುದಾರನಾದ ರಾಮನಾಯ್ಕ, ನಂತರ ಕಂದಾಯ ಇಲಾಖೆ ಸಿಬ್ಬಂದಿ ಹೆಚ್ಚಿನ ವಿಚಾರಣೆ ವೇಳೆ ಆತನು ಜೀತಕ್ಕಿಲ್ಲ ಎಂಬುದು ವ್ಯಕ್ತವಾಯಿತು.
ನಂತರ ಪಟ್ಟಣದ ತುಮಕೂರು ರಸ್ತೆಯ ಮಹಾವೀರ ನಗರದ ಸ್ಲಂ ಪ್ರದೇಶದಲ್ಲಿ ಭೇಟಿ ನೀಡಿದಾಗ ದೂರುದಾರ ಪ್ರಕಾಶ್, ತಾನು ಚಿಕ್ಕಂದಿನಿಂದಲೂ ಇಟ್ಟಿಗೆ ಭಟ್ಟಿ ಸೀನಪ್ಪನ ಹತ್ತಿರ ಜೀತಕ್ಕಿದ್ದುದು ನಿಜ. ಇತ್ತೀಚೆಗೆ ಆನಂದಸ್ವಾಮಿ ಎಂಬವರು ಸೀನಪ್ಪನಿಗೆ ಹಣ ನೀಡಿ ಅವರ ಹತ್ತಿರ ಕೆಲಸಕ್ಕೆ ಇಟ್ಟುಕೊಂಡಿದ್ದಾರೆಂದು ತಿಳಿಸಿದ. ಈ ಮದ್ಯೆ ಇತರೆ ದೂರುದಾರರಾದ ಅನಿಲ, ಶಾಂತರಾಜು, ಹುಚ್ಚಪ್ಪ ಬುಧವಾರ ರಾತ್ರಿಯೇ ಕಂದಾಯ ಇಲಾಖೆ ಸಿಬ್ಬಂದಿ ಆಗಮಿಸಿ, ಗುರುವಾರ ಬೆಳಗ್ಗೆ ತಹಸೀಲ್ದಾರ್ ಬರುತ್ತಾರೆ ಎಂಬ ವಿಷಯ ತಿಳಿಸಿ, ಹೆಚ್ಚಿಗೆ ಮಾತನಾಡದಂತೆ ಸೂಚಿಸಿದ ಮೇರೆಗೆ, ಯಾಕೆ ತೊಂದರೆ ಎಂದು ಅವರೆಲ್ಲಾ ಕೆಲಸಕ್ಕೆ ಹೋಗಿದ್ದಾರೆಂದು ಸಂಬಂಧಪಟ್ಟ ಮನೆಯವರು ತಿಳಿಸಿದರು.
ಬೆಳಗ್ಗೆಯಿಂದ ದೂರುದಾರರ ಅರ್ಜಿ ಹಿಡಿದು, ದೂರುದಾರರ ಮನೆಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸಿದ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗೆ ತಾಲೂಕಿನಲ್ಲಿ ಜೀತಪದ್ಧತಿ ಜೀವಂತವಾಗಿವೆ ಎಂಬ ದಾಖಲೆ ಲಭ್ಯವಾಗದೆ, ಅಗತ್ಯ ಮಾಹಿತಿ ಸಂಗ್ರಹಿಸಿ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.