ಎಸ್ಡಿಸಿ ಡಿ.ಎಂ.ಸಂದೀಪ್ ಅಮಾನತು
ಕ.ಪ್ರ. ವಾರ್ತೆ ಕುಣಿಗಲ್ ಜು.19
ತಾಲೂಕು ಪಂಚಾಯಿತಿಯಲ್ಲಿ ಎಸ್ಜೆಎಸ್ಆರ್ವೈ ಯೋಜನೆಯಲ್ಲಿ ನಡೆದಿದ್ದ ಕೋಟ್ಯಂತರ ರು.ಹಗರಣಕ್ಕೆ ಸಂಬಂಧಿಸಿದಂತೆ ದ್ವಿತೀಯದರ್ಜೆ ಸಹಾಯಕ ಡಿ.ಎಂ.ಸಂದೀಪ್ ಅವರನ್ನು ಅಮಾನತು ಪಡಿಸಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ತಾ.ಪಂ.ನಲ್ಲಿ 2009-10, 2010-11, 2011-12ನೇ ಸಾಲಿನ ಎಸ್ಜೆಎಸ್ಆರ್ವೈ ಯೋಜನೆಯಡಿಯಲ್ಲಿ 1,11,45,087 (ಒಂದು ಕೋಟಿ ಹನ್ನೊಂದು ಲಕ್ಷದ ನಲವತ್ತೈದು ಸಾವಿರದ ಎಂಬತ್ತೇಳು ರು.) ಗಳ ಹಗರಣಕ್ಕೆ ಸಂಬಂಧಿಸಿದಂತೆ ತಾಪಂ ಇಒ ಅವರು 26-11-2012ರಂದು ಪತ್ರ ಬರೆದಿದ್ದು, ಇದಕ್ಕೆ ಪೂರಕ ಕ್ರಮವಾಗದ ಹಿನ್ನೆಲೆಯಲ್ಲಿ ತಾಲೂಕಿನ ಕುವೆಂಪು ವೇದಿಕೆಯ ರಮೇಶ್ ಎಂಬುವವರು, ಸದರಿ ಹಗರಣದ ಬಗ್ಗೆ ಕೂಲಂಕುಶ ತನಿಖೆ ನಡೆಸುವಂತೆ ಮನವಿ ಮಾಡಿ ಉಪಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಪಂ ಅಧಿಕಾರಿಗಳು, ಪ್ರಕರಣದ ಬಗ್ಗೆ ಕೂಲಂಕಷ ವಿವರಗಳನ್ನು ಸಂಗ್ರಹಿಸಿ, ಎಸ್ಜೆಎಸ್ಆರ್ವೈ ಯೋಜನೆಯನ್ನು ಕಳೆದ ಮೂರು ವರ್ಷಗಳಿಂದಲೂ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದ ದ್ವಿತೀಯದರ್ಜೆ ಸಹಾಯಕ ಡಿ.ಎಂ. ಸಂದೀಪ್ ಅವರು, ಯೋಜನೆಯ ಮಾರ್ಗಸೂಚಿಯ ಪ್ರಕಾರ ಕ್ರಮ ಕೈಗೊಳ್ಳದೆ, ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ, ಗುಂಪು ಚಟುವಟಿಕೆಗಳ ಬಗ್ಗೆ ಆದ್ಯತೆ ನೀಡದೆ, ಯೋಜನೆಯ ಮಾರ್ಗದರ್ಶಿ ಹಣವನ್ನು ಮಾರ್ಗಪಲ್ಲಟ ಮಾಡಿ, ಯೋಜನೆಯ ಅನುದಾನ ವೆಚ್ಚದ ಬಗ್ಗೆ ಸಮರ್ಪಕ ನಗದು ಪುಸ್ತಕ ನಿರ್ವಹಿಸದೆ, ಜಿಪಂ ಲೆಕ್ಕಪತ್ರ ಸಮಿತಿಗೆ ಸಮರ್ಪಕ ದಾಖಲೆ ನೀಡದೆ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ, ವಿಚಾರಣೆ ಕಾಯ್ದಿರಿಸಿ, ಮುಂದಿನ ಆದೇಶದವರೆಗೂ ಡಿ.ಎಂ. ಸಂದೀಪ್ ಅವರನ್ನು ಅಮಾನತು ಪಡಿಸಿ ಜಿಪಂ ಸಿಇಒ ಇದೇ 16 ರಂದು ಆದೇಶ ಹೊರಡಿಸಿದ್ದಾರೆ.
ಮತ್ತಷ್ಟು ಅಧಿಕಾರಿಗಳ ತಲೆದಂಡ: ಕಳೆದ ಮೂರು ವರ್ಷಗಳಲ್ಲಿ ಎಸ್ಜೆಎಸ್ಆರ್ವೈ ಯೋಜನೆಯಲ್ಲಿ ನಡೆದಿರುವ ಕೋಟ್ಯಂತರ ರು. ಹಗರಣದ ಹಿನ್ನೆಲೆಯಲ್ಲಿ, ಶುಕ್ರವಾರ, ಜಿಪಂನಿಂದ ಆಗಮಿಸಿದ್ದ ಅಧಿಕಾರಿಗಳ ತಂಡವು, ಕಳೆದ ಮೂರು ವರ್ಷಗಳಲ್ಲಿ ತಾಪಂ ಇಒಗಳಾಗಿ ಕಾರ್ಯನಿರ್ವಹಿಸಿದ್ದ ನಾಲ್ಕು ಇಒಗಳು, ಲೆಕ್ಕಾಧಿಕಾರಿಗಳಾಗಿರುವ ಇಬ್ಬರು ಹಾಗೂ ವಿಷಯ ನಿರ್ವಹಣೆ ಮಾಡಿದ ಮತ್ತೊಬ್ಬ ದ್ವಿತೀಯ ದರ್ಜೆ ಸಹಾಯಕರ ಅವಧಿಯಲ್ಲಿ ನಡೆದಿರುವ ವಿವಿಧ ವಹಿವಾಟಿಗೆ ಸಂಬಂಧಿಸಿದಂತೆ ಬಹುತೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಸದರಿ ಯೋಜನೆಯಲ್ಲಿ ನಡೆದಿರುವ ಹಗರಣಕ್ಕೆ ಲೆಕ್ಕಾಧಿಕಾರಿಗಳ ಕೈಚಳಕ ಹೆಚ್ಚಾಗಿದ್ದು ಮತ್ತಷ್ಟು ಅಧಿಕಾರಿ ಹಾಗೂ ಸಿಬ್ಬಂದಿಗಳ ತಲೆದಂಡವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

