ತುಮಕೂರು

ಜಿಲ್ಲಾ ಬಿಜೆಪಿಗೆ ಹೊಸ ಸಾರಥಿ

Published On :

ಕ.ಪ್ರ. ವಾರ್ತೆ   ತುಮಕೂರು   ಜು.20
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸುರೇಶ್ಗೌಡ ಶನಿವಾರ ಅಧಿಕೃತವಾಗಿ ಜಿಲ್ಲಾ ಬಿಜೆಪಿ ನೂತನ ಸಾರಥಿಯಾಗಿ ಅವಿರೋಧವಾಗಿ ಆಯ್ಕೆಯಾದರು.
ತುಮಕೂರಿನ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಶಿವಪ್ರಸಾದ್ ಅವರು ಸುರೇಶ್ಗೌಡರಿಗೆ ಪಕ್ಷದ ಬಾವುಟ ಹಸ್ತಾಂತರಿಸಿದ್ದರು.
ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸೊಗಡು ಶಿವಣ್ಣ, ಮಂಗಳೂರು ಸಂಸದ ನಳಿನಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಶ್ವಥನಾರಾಯಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಮಾಜಿ ಶಾಸಕ ಬಿ.ಸಿ. ನಾಗೇಶ್ ಇತರರ ಸಮ್ಮುಖದಲ್ಲಿ ಸುರೇಶ್ಗೌಡರು ಬಿಜೆಪಿ ನೂತನ ಸಾರಥಿಯಾಗಿ ಆಯ್ಕೆಯಾದರು. ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಅರವಿಂದ ಲಿಂಬಾವಳಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಮೊದಲಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಸುರೇಶ್ಗೌಡರ ಹೆಸರನ್ನು ಸೂಚಿಸಿದರು. ಮಾಜಿ ಶಾಸಕ ಬಿ.ಸಿ. ನಾಗೇಶ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗಂಗರಾಜು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕಿರಣಕುಮಾರ್ ಅನುಮೋದಿಸಿದರು.
ಅರವಿಂದ ಲಿಂಬಾವಳಿ ಅವರು ಸುರೇಶ್ಗೌಡರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸುವ ಮೂಲಕ ಆಯ್ಕೆ ಪ್ರಕ್ರಿಯೆಗೆ ತೆರೆ ಎಳೆದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಸುರೇಶ್ಗೌಡ, ತಮಗೆ ಪಕ್ಷದ ಹೊರೆ ಹೊರುವ ಜವಾಬ್ದಾರಿ ನೀಡಿದ್ದಾರೆ. ಇದು ತಮಗೆ ಸವಾಲಿನ ಕೆಲಸವಾಗಿದೆ. ಪಕ್ಷ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಜವಾಬ್ದಾರಿ ವಹಿಸಲಾಗಿದೆ. ತಾವು ಮೈಯೆಲ್ಲಾ ಕಣ್ಣಾಗಿಕೆಲಸ ಮಾಡಬೇಕಾಗಿದೆ. ಪಕ್ಷದ ಹೆಸರಿಗೆ ಯಾವುದೇ ಧಕ್ಕೆ, ಚ್ಯುತಿ ಬಾರದ ಹಾಗೆ ಕೆಲಸ ಮಾಡುವ ಭರವಸೆ ನೀಡಿದರು. ತಾವು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮೊದಲಿಗೆ ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಒಂದು ಬಾರಿ ಸೋತಿದ್ದೆ ಕೂಡ. ನಂತರ ಕಾರಣಾಂತರಗಳಿಂದ ಕ್ಷೇತ್ರದ ಸಮಸ್ಯೆ ಉದ್ಭವಿಸಿದಾಗ ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರು ಗ್ರಾಮಾಂತರಕ್ಕೆ ಪಕ್ಷದ ಹೈಕಮಾಂಡ್ ಮುಂದೆ ಒತ್ತಡ ಹೇರಿ ಟಿಕೆಟ್ ಕೊಡಿಸಿದರು. ನಂತರ ಗೆದ್ದೆ. ಸೊಗಡು ಶಿವಣ್ಣ ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.
ತಾವು ಅಧ್ಯಕ್ಷರಾಗಿರುವ ಸಂದರ್ಭದಲ್ಲೇ ಸಂಸತ್ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಕೂಗು ಈಗ ದೇಶದೆಲ್ಲೆಡೆ ಎದ್ದಿದೆ. ತುಮಕೂರು ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುವಂತೆ ಕೆಲಸ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ. ಕಾರ್ಯಕರ್ತರು ಹಾಗೂ ಮುಖಂಡರು ತಮಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.