ತಾಪಂ ಕಚೇರಿ ಬಳಿ ವಾಮಾಚಾರ ಶಂಕೆ
ಕ.ಪ್ರ.ವಾರ್ತೆ, ಕುಣಿಗಲ್, ಜು. 20
ತಾಪಂ ಕಾರ್ಯಾಲಯದ ಅವರಣದಲ್ಲಿನ ಇಒ, ತಾಪಂ ಅಧ್ಯಕ್ಷರ ಕೊಠಡಿಗಳ ಹಿಂಬದಿಗೆ ಬರುವ ಬೇವಿನ ಮರದ ಬುಡದಲ್ಲಿ ವಾಮಾಚಾರ ನಡೆಸಿರುವ ಕುರುಹು ಕಂಡು ಬಂದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತಾಲೂಕು ಪಂಚಾಯಿತಿ ಕಾರ್ಯಾಲಯವು ಎರಡು ಅಂತಸ್ತಿನ ಕಟ್ಟಡವಿದ್ದು, ಮೇಲಂತಸ್ತಿನಲ್ಲಿ ಶಾಸಕರ ಕೊಠಡಿ, ಕಂಪ್ಯೂಟರ್ ಕೊಠಡಿಗಳಿದ್ದರೆ, ಕೆಳಗೆ ತಾಪಂ ಇಒ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಗಳಿವೆ. ಕಟ್ಟಡದ ಹಿಂಬದಿಯಲ್ಲಿ ಬೇವಿನ ಮರ ಸೇರಿದಂತೆ ವಿವಿಧ ಜಾತಿ ಮರಗಳಿವೆ. ತಾಪಂ ಕಾರ್ಯಾಲಯದ ಅವರಣದಲ್ಲಿ ಶೌಚಾಲಯವಿಲ್ಲ. ಬಹುತೇಕರು ಕಟ್ಟಡದ ಹಿಂಭಾಗಕ್ಕೆ ತೆರಳುವ ಅನಿವಾರ್ಯತೆ ಇದೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಮಂಜುನಾಥ ಎಂಬಾತ, ಮೂತ್ರ ವಿಸರ್ಜನೆಗೆ ಕಟ್ಟಡದ ಹಿಂಬದಿಗೆ ತೆರಳಿದಾಗ, ತಾಪಂ ಇಒ, ಅಧ್ಯಕ್ಷರ ಕೊಠಡಿಯ ಹಿಂಬದಿಗೆ ಬರುವ ಜಾಗಕ್ಕಿರುವ ಬೇವಿನ ಮರದ ಬುಡದಲ್ಲಿ ವಾಮಾಚಾರ ನಡೆಸಿರುವ ಕುರುಹುಗಳಾದ ಬಾಳೆ ಎಲೆ ಮೇಲೆ ಅರಿಶಿಣ, ಕುಂಕುಮ ಮಿಶ್ರಿತ ಅನ್ನವನ್ನು ಚೆಲ್ಲಲಾಗಿದೆ. ಬಾಳೆಹಣ್ಣಿಟ್ಟು ಪೂಜೆ ನಡೆಸಿ ಕೋಳಿ ಕೊಯ್ದು ಕತ್ತನ್ನು ಬೇರ್ಪಡಿಸಿ ಎಲೆಯ ಮೇಲಿಟ್ಟಿದ್ದು, ಸುತ್ತಲೂ ಅನ್ನವನ್ನು ಎರೆಚಾಡಿದ್ದು ಕಂಡು ಬಂದು ಹೌಹಾರಿದರು.
ಕೂಡಲೆ ವಾಮಾಚಾರ ಮಾಡಿರುವುದನ್ನು ಇತರರಿಗೆ ತಿಳಿಸಿದರು. ಈ ಹಂತದಲ್ಲಿ ಬಹುತೇಕರು ಜಮಾವಣೆಗೊಂಡು ಗೊಂದಲ ವಾತಾವರಣ ನಿರ್ಮಾಣವಾಯಿತು.
ಸ್ಥಳಕ್ಕಾಗಮಿಸಿದ ತಾಪಂ ಸ್ಥಾಯಿ ಸಮಿತಿಯ ಬೆಂಬಲಿಗರಾದ ಬೆನವಾರಶೇಷ, ಬಾಂಬೆಮೋಹನ್, ಮೊದೂರು ಸುರೇಶ್, ಹರೀಶ್ ಇತರರು ಘಟನೆಯನ್ನು ಖಂಡಿಸಿ, ಸದರಿ ವಾಮಾಚಾರವನ್ನು ತಮ್ಮ ನಾಯಕರಾದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಹಾಗೂ ಶಾಸಕ ಡಿ.ನಾಗರಾಜಯ್ಯನವರ ವಿರುದ್ಧ ಮಾಡಿದ್ದಾರೆಂದು ಆರೋಪಿಸಿ, ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಶಾಸಕರ ಜನಪರ ಕಾರ್ಯವೈಖರಿಯನ್ನು, ಅವರ ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ ತಾಪಂ ಕಟ್ಟಡಕ್ಕೆ ರಾತ್ರಿ ಪಾಳಿ ಕಾವಲುಗಾರರನ್ನು ನೇಮಿಸಿ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

