ತುಮಕೂರು

ಪಡಿತರ ಕಾರ್ಡ್ ಪಡೆಯಲಾಗದ ಕುರಿತು ಆಕ್ರೋಶ

Published On :

ಕ.ಪ್ರ.ವಾರ್ತೆ ,  ಕುಣಿಗಲ್ ,  ಜು.30  
ಅಹಾರ ಇಲಾಖೆಯ ದ್ವಂದ್ವ ಹಾಗೂ ಗೊಂದಲಕಾರಿ ಕ್ರಮಗಳಿಂದ ನೂರಾರು ಪಡಿತರ ಕಾರ್ಡ್ ಗ್ರಾಹಕರು,  ಹಲವು ತಾಂತ್ರಿಕ ಅಥವಾ ಬೇರೊಂದು ತೊಂದರೆಯಿಂದ ಪಡಿತರ ಕಾರ್ಡ್ ಪಡೆಯಲಾಗದೆ, ತಾಲೂಕು ಕಚೇರಿಯ ಆಹಾರ ಇಲಾಖೆಯ ಮುಂದೆ ಸಾಲುಗಟ್ಟಿ ನಿಂತು, ತೊಘಲಕ್ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯ ಆಹಾರ ಶಾಖೆಯ ಮುಂಬಾಗದಲ್ಲಿ ಜನಸಂದಣಿ ದಿನ, ದಿನದಿನಕ್ಕೆ ಹೆಚ್ಚಾಗುತ್ತಿದ್ದು,  ಕಾರ್ಡ್‌ದಾರರು ತಮ್ಮ ಕಾರ್ಡ್‌ಗಳಲ್ಲಿನ ನ್ಯೂನತೆ ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ, ಕಾರ್ಡ್‌ಗಳಲ್ಲಿನ ನ್ಯೂನತೆ ಸರಿಪಡಿಸಲು ಹೆಚ್ಚಿನದಾಗಿ ಮಹಿಳೆಯರು, ವೃದ್ಧರು ಆಗಮಿಸಿ, ಅತ್ತ ಸರತಿ ಸಾಲಿನಲ್ಲಿ ನಿಲ್ಲಲಾಗದೆ, ಇತ್ತ ಸೂಕ್ತ ಮಾಹಿತಿ ಸಿಗದೆ ಅಸಾಹಯಕ ಸ್ಥಿತಿಯಿಂದ, ಸಂಬಂಧಪಟ್ಟ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುತ್ತಾ ಹಿಂದಿರುಗಬೇಕಾದ ಅನಿವಾರ್ಯತೆ ಎದುರಾಗಿದೆ.
ಸರ್ಕಾರವು ಈ ಹಿಂದೆ ತೆಗೆಸಲಾಗಿರುವ ಪಡಿತರ ಕಾರ್ಡ್‌ನ ಸಕ್ರಮಕ್ಕೆ ಭೂಮಿಯ ಪಹಣಿ, ಗ್ಯಾಸ್ ಸಿಲೆಂಡರ್, ಲೈಟ್‌ಬಿಲ್, ಹೆಬ್ಬೆರಳು ಮುದ್ರೆ ಮ್ಯಾಚಿಂಗ್ ಹೊಂದಾಣಿಕೆಯ ಸುತ್ತೋಲೆಗಳನ್ನು ಹೊರಡಿಸಿದ್ದು, ಈ ನಾಲ್ಕು ವಿಷಯಗಳು ಗ್ರಾಮಾಂತರ ಪ್ರದೇಶದ ಬಹುತೇಕ ಕಾರ್ಡ್‌ದಾರರ ಅರಿವಿಗೆ ಬಾರದ ಕಾರಣ,ವಿತರಿಸಲಾಗಿರುವ ಬಹುತೇಕ ಬಿಪಿಎಲ್ ಕಾರ್ಡ್‌ಗಳ ಪೈಕಿ ಸಾಕಷ್ಟು ಕಾರ್ಡ್ ಫಲಾನುಭವಿಯ ಗಮನಕ್ಕೆ ಬಾರದೆ ವಜಾಗೊಂಡಿದೆ.
ಜನಜಂಗುಳಿ: ಈ ಮಧ್ಯೆ ಕಾರ್ಡ್‌ದಾರರಿಗೆ ತೊಂದರೆಯಾಗಬಾರದೆಂದು ನ್ಯಾಯಬೆಲೆ ಅಂಗಡಿಯವರು ಇರುವ ಅಲ್ಪ ಸ್ವಲ್ಪ ದೋಷಗಳನ್ನು ಪದೆ, ಪದೇ ಸರಿಪಡಿಸಿಕೊಳ್ಳುವಂತೆ ತಿಳಿ ಹೇಳುತ್ತಾ, ಜೂನ್‌ವರೆಗೂ ಪಡಿತರ ನೀಡಿದರು. ಆದರೆ ಸರ್ಕಾರದ ಕಟ್ಟುನಿಟ್ಟಿನ ಆದೇಶದಿಂದ ಜುಲೈ ಮಾಹೆಯಿಂದ ಯಾವುದೆ ಹೊಂದಾಣಿಕೆ ಇಲ್ಲದೆ, ಮಾನ್ಯವಿರುವ ಪಡಿತರ ಕಾರ್ಡ್‌ಗೆ ಮಾತ್ರ ಪಡಿತರ ನೀಡುವ ವ್ಯವಸ್ಥೆ ಜಾರಿಗೆ ಬಂದ ಕಾರಣ, ಬಹುತೇಕ ಫಲಾನುಭವಿಗಳ ಕಾರ್ಡ್‌ಗೆ ಪಡಿತರ ಹಂಚಿಕೆಯಾಗದ ಕಾರಣ, ಸೂಕ್ತ ಮಾಹಿತಿ ಇಲ್ಲದೆ ಕಾರ್ಡ್‌ದಾರರು ನೇರವಾಗಿ ತಾಲೂಕು ಕಚೇರಿಯ ಆಹಾರ ಶಾಖೆಯ ವಿಭಾಗಕ್ಕೆ ಲಗ್ಗೆ ಇಟ್ಟ ಕಾರಣ, ದಿನಂಪ್ರತಿ ಜನಜಂಗುಳಿ ಹೆಚ್ಚಾಯಿತು.
ಕುಂಟುನೆಪ: ಹಂಚಿಕೆಯಾಗಿರುವ ಕಾರ್ಡ್‌ಗಳಿಗೂ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು, ಕುಂಟುನೆಪ ಹೇಳಿ ಅಕ್ಕಿ ನೀಡಲು ನಿರಾಕರಿಸಿದರೆ, ಮತ್ತೆ ಕೆಲ ನ್ಯಾಯಬೆಲೆ ಅಂಗಡಿಯವರು ತಾಲೂಕು ಕಚೇರಿಯ ಆಹಾರ ಶಾಖೆಯಿಂದ ಬರೆಸಿಕೊಂಡು ಬನ್ನಿ ಎಂದು ಹೇಳಿ ಕಳಿಸುತ್ತಿರುವ ಕಾರಣ, ಬಹಳಷ್ಟು ಮಂದಿ ವೃದ್ಧರು, ಮಹಿಳೆಯವರು ಎಡತಾಕುತ್ತಾ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಇನ್ನು ಆಹಾರ ಇಲಾಖೆಯು ತಿಂಗಳಿಗೊಂದು ನೀತಿ ಅಳವಡಿಸಿಕೊಂಡು ಸುತ್ತೋಲೆ ಜಾರಿಗೊಳಿಸುತ್ತಿರುವ ಕಾರಣ ಕಾರ್ಡ್ ವ್ಯವಸ್ಥೆ ಸರಿಯಾಗುತ್ತಿಲ್ಲ. ಇದನ್ನೆ ಕೆಲ ಗ್ರಾಮಾಂತರ ಪ್ರದೇಶದ ನ್ಯಾಯಬೆಲೆ ಅಂಗಡಿಯವರು ಬಂಡವಾಳ ಮಾಡಿಕೊಂಡು ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರುವ ಜಾಲ ವ್ಯವಸ್ಥಿತವಾಗಿದೆ ಎಂದು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಆರೋಪಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ: ಆದರೆ, ಆಹಾರ ಇಲಾಖೆಯ ಮೂಲಗಳ ಪ್ರಕಾರ, ಜುಲೈ ಮಾಹೆಗೆ ತಾಲೂಕಿನಾದ್ಯಂತ 4872 ಅಂತ್ಯೋದಯ ಕಾರ್ಡ್‌ಗೆ 1358.69 ಕ್ವಿಂಟಾಲ್‌ಅಕ್ಕಿ, 34863 ಬಿಪಿಎಲ್ ಕಾರ್ಡ್‌ಗಳಿಗೆ 8433.05 ಕ್ವಿಂಟಾಲ್ ಅಕ್ಕಿಯನ್ನು ಹಂಚಿಕೆಮಾಡಿ, ಆಹಾರಧಾನ್ಯಗಳ ಫಲಾನುಭವಿಗಳಿಗೆ ತಲುಪಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ದುರ್ಬಳಕೆಯಾಗದಂತೆ ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಲಾಗಿದೆ. ಈವರೆಗೂ ಅಹಾರಧಾನ್ಯ ದುರ್ಬಳಕೆ ಬಗ್ಗೆ ದೂರುಗಳು ಬಂದಿಲ್ಲ ಎಂದಿವೆ.
ಈಗಾಗಲೆ ಸಾಕಷ್ಟು ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದರೂ, ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೆ ಇದೆ. ನ್ಯೂನತೆ ಹೊಂದಿರುವ ಬಿಪಿಎಲ್ ಕಾರ್ಡ್ ಫಲಾನುಭವಿಗಳು, ಕಾರ್ಡ್‌ನಲ್ಲಿನ ನ್ಯೂನತೆ ಸರಿಪಡಿಸಲು ದಿನಂಪ್ರತಿ ತಾಲೂಕು ಕಚೇರಿಗೆ ಎಡತಾಕಿ, ಆಹಾರ ಇಲಾಖೆಯ ತೊಘಲಕ್ ಪದ್ಧತಿಗೆ ಅಸಮಾಧಾನ ವ್ಯಕ್ತಪಡಿಸಿ, ನ್ಯೂನತೆ ಸರಿಪಡಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಪಡಿತರ ಕಾರ್ಡ್‌ನ ನ್ಯೂನತೆ ಸರಿಪಡಿಸಿ ಜನ ಸಾಮಾನ್ಯರ ಕಾರ್ಡ್ ಬವಣೆ ತಪ್ಪಿಸುವವರೆ ಎಂದು ಕಾದು ನೋಡಬೇಕಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.