ವರ್ತಕರ ವಿರುದ್ಧ ಕಠಿಣ ಕ್ರಮ: ಜಿಎಸ್ಬಿ ಗುಡುಗು
ಕ.ಪ್ರ.ವಾರ್ತೆ , ತುಮಕೂರು , ಜು.30
ರೈತರ ಹೆಸರಿನಲ್ಲಿ ವರ್ತಕರು ಕೊಬ್ಬರಿ ಮಾರಾಟಕ್ಕೆ ಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಂಸದ ಜಿ.ಎಸ್. ಬಸವರಾಜು ಎಚ್ಚರಿಕೆ ನೀಡಿದ್ದಾರೆ.
ಅವರು ತುಮಕೂರಿನ ಎಪಿಎಂಸಿಯಲ್ಲಿ ನೂತನ ನಫೆಡ್ ಕೇಂದ್ರ ಉದ್ಘಾಟಿಸಿದ ಬಳಿಕ ಮಾತನಾಡಿದರು. ರೈತರು ವರ್ತಕರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಕೊಬ್ಬರಿ ಮಾರಾಟ ಮಾಡಲು ವರ್ತಕರಿಗೆ ಸಹಕರಿಸಿದರೆ ಇಬ್ಬರ ಮೇಲೂ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಇದಕ್ಕೆ ಪ್ರತ್ಯೇಕ ಕಾನೂನನ್ನೇ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಗುಬ್ಬಿಯಲ್ಲಿ ಇಂಥ ಅಕ್ರಮ ನಡೆದಿರುವುದು ಗೊತ್ತಾಗಿ ಸರಿ ಮಾಡಲಾಗಿದೆ ಎಂದು ಇದೇ ವೇಳೆ ಹೇಳಿದರು. ಜಿಲ್ಲೆಯ ಹಲವೆಡೆ ನಫೆಡ್ ಕೇಂದ್ರವಿದ್ದರೂ ಕೂಡ ಜಿಲ್ಲಾ ಕೇಂದ್ರವಾದ ತುಮಕೂರಿನಲ್ಲಿ ಇರಲಿಲ್ಲ. ತುಮಕೂರು, ಕುಣಿಗಲ್, ಕೊರಟಗೆರೆ ತಾಲೂಕಿನ ರೈತರು ಬೇರೆ ಬೇರೆ ತಾಲೂಕುಗಳ ನಪೆಡ್ ಕೇಂದ್ರಕ್ಕೆ ಹೋಗಿ ಕೊಬ್ಬರಿ ಮಾರಬೇಕಿತ್ತು. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲೂ ಕೇಂದ್ರ ಸ್ಥಾಪಿಸಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ತೆರೆಯಲಾಗಿದೆ ಎಂದರು.
ಎಪಿಎಂಸಿ ಸದಸ್ಯರು, ನಿರ್ದೇಶಕರು, ಆಡಳಿತ ಮಂಡಳಿ ನಫೆಡ್ ಖರೀದಿ ಕೇಂದ್ರದ ಮೇಲೆ ನಿಗಾ ಇಡಬೇಕು. ವರ್ತಕರು ಅಕ್ರಮವಾಗಿ ರೈತರ ಹೆಸರಿನಲ್ಲಿ ಮಾರಾಟಕ್ಕೆ ಕೊಬ್ಬರಿ ತರದಂತೆ ಎಚ್ಚರಿಕೆ, ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಲಾಭ ಪಡೆಯಿರಿ: ಅಲ್ಲದೇ, ಎಪಿಎಂಸಿ ಸದಸ್ಯರು ರೈತರಲ್ಲಿ ಅರಿವು ಮೂಡಿಸಿ, ರೈತರಿಗೆ ಮಾಹಿತಿಗಳು ಸರಿಯಾಗಿ ತಲುಪುವಂತೆ ಮಾಡಿ, ರೈತರೇ ಕೊಬ್ಬರಿ ಮಾರಾಟ ಮಾಡಿ, ನಫೆಡ್ ಕೇಂದ್ರದ ಲಾಭ ಪಡೆಯುವಂತೆ ಮಾಡಬೇಕು ಎಂದು ಹೇಳಿದರು.
ನಫೆಡ್ ಕೇಂದ್ರದಲ್ಲಿ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕೊಬ್ಬರಿ ಕೊಂಡುಕೊಳ್ಳದಂತೆ ವರ್ತಕರಿಗೆ ಬೆಲೆ ನಿರ್ಧಾರ ಮಾಡುವ ಪದ್ಧತಿಯೂ ಜಾರಿಗೆ ಬರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ದಿಲ್ಲಿಯಲ್ಲಿ 80ರಿಂದ 90 ರು.ಗೆ ಒಂದು ಕೆಜಿ ಕೊಬ್ಬರಿ ಮಾರಾಟವಾಗುತ್ತದೆ. ಆದರೆ ಕೊಬ್ಬರಿ ಬೆಳೆಯುವ ರೈತ ಜಿಲ್ಲೆಯಲ್ಲಿ ಕೊಬ್ಬರಿ ಮಾರಾಟಕ್ಕೆ ತಂದರೆ 40-45 ರು. ಕೆಜಿಯಂತೆ ವರ್ತಕರು ಖರೀದಿಸುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ವರ್ತಕರು ರೈತರನ್ನು ಶೋಷಿಸುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು.
ತುಮಕೂರು ನಫೆಡ್ ಕೇಂದ್ರದಲ್ಲಿ ರೈತರು ಕೊಬ್ಬರಿ ಮಾರಿ ಒಂದು ವಾರದಲ್ಲಿ ಹಣ ಸಿಗಲಿದೆ ಎಂದು ಸಹ ಇದೇ ವೇಳೆ ಭರವಸೆ ನೀಡಿದರು. ರೈತರು ಸಹ ಉತ್ತಮ ಕೊಬ್ಬರಿಯನ್ನು ಮಾರಾಟಕ್ಕೆ ತರಬೇಕು ಎಂದರು.
ಎಪಿಎಂಸಿ ಅಧ್ಯಕ್ಷೆ ತಾರಾದೇವಿ, ಉಪಾಧ್ಯಕ್ಷ ಡಿ. ಶಿವಕುಮಾರ್, ನಿರ್ದೇಶಕ ಆರ್. ಕಾಮರಾಜು, ಧನಿಯಾಕುಮಾರ್, ಕಾರ್ಯದರ್ಶಿ ರಾಜಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ನಾರಾಯಣಮೂರ್ತಿ ಸೇರಿದಂತೆ ಆಡಳಿತ ಮಂಡಳಿಯ ಎಲ್ಲರೂ ಪಾಲ್ಗೊಂಡಿದ್ದರು.
ಮುಂಗಡ ಟೋಕನ್ ವಿತರಣೆಗೆ ಆಕ್ಷೇಪ: ರೈತರ ಕೊಬ್ಬರಿ ಕೊಳ್ಳಲು ಮುಂಚಿತವಾಗಿ ಟೋಕನ್ ವಿತರಿಸುವ ಪದ್ಧತಿ ಇದೆ. ಆದರೆ ಇಲ್ಲಿ ಕೇಂದ್ರ ಆರಂಭಕ್ಕೆ ಮುನ್ನವೇ ಅಂದರೆ ಜು.24 ರಿಂದಲೇ ರೈತರಿಗೆ ಟೋಕನ್ ವಿತರಿಸಿರುವುದು ಎಪಿಎಂಸಿ ನಿರ್ದೇಶಕರು, ಆಡಳಿತ ಮಂಡಳಿಯ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ನಫೆಡ್ ಕೇಂದ್ರ ಆರಂಭವಾಗುತ್ತಿದೆ ಎಂದು ಎಪಿಎಂಸಿ ಆಹ್ವಾನ ನೀಡಿದೆಯೇ ವಿನಾ ಟೋಕನ್ ಅನ್ನು ರೈತರಿಗೆ ಮುಂಚಿತವಾಗಿ ವಿತರಿಸುತ್ತೇವೆ ಎಂದು ನಮಗೆ ತಿಳಿಸಿಲ್ಲ ಎಂದು ಕಾರ್ಯಕ್ರಮದ ವೇಳೆ ನಫೆಡ್ ಕೇಂದ್ರದ ಅಧಿಕಾರಿಗಳು, ಮಾರುಕಟ್ಟೆ ಫೆಡರೇಷನ್ ಅಧಿಕಾರಿಗಳು ಹಾಗೂ ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಎಪಿಎಂಸಿ ಆಡಳಿತ ಮಂಡಳಿ ತಕರಾರು ಎಬ್ಬಿಸಿತು. ಅಧ್ಯಕ್ಷೆ ತಾರಾದೇವಿ, ನಿರ್ದೇಶಕರಾದ ಆರ್. ಕಾಮರಾಜು, ಧನಿಯಾಕುಮಾರ್, ಉಪಾಧ್ಯಕ್ಷ ಶಿವಕುಮಾರ್ ಎಲ್ಲರೂ, ಟೋಕನ್ ವಿತರಣೆ ವಿಚಾರ ತಿಳಿಸದೇ ಟೋಕನ್ ವಿತರಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆಗಸ್ಟ್ 20 ರ ವರೆಗೆ ಕೊಬ್ಬರಿ ತರಲು ರೈತರಿಗೆ ಸರತಿಯಂತೆ ಟೋಕನ್ ವಿತರಿಸಲಾಗಿದೆ, ಆಗಸ್ಟ್ 20 ರ ಬಳಿಕ ಕೊಬ್ಬರಿ ಖರೀದಿಸಲು ಟೋಕನ್ ಕೊಡಲು ಮೇಲಧಿಕಾರಿಗಳಿಂದ ಅನುಮತಿ ಬೇಕು ಎಂದು ನಫೆಡ್ ಮತ್ತು ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿಗಳು ಹೇಳುತ್ತಿದ್ದಂತೆ ಎಪಿಎಂಸಿ ನಿರ್ದೇಶಕರು ಗದ್ದಲವನ್ನೇ ಎಬ್ಬಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

