ಅನಗತ್ಯ ವಿಳಂಬಕ್ಕೆ ಅಸಮಾಧಾನ
ಶಿರಾ: ತಾಲೂಕು ಪ್ರಾಥಮಿಕ ಶಿಕ್ಷಕರ ವರ್ಗಾವಣಾ ಚಾಲನಾ ಆದೇಶ ನೀಡುವಲ್ಲಿ ಬಿ.ಇ.ಓ. ಕಚೇರಿ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಚಾಲನಾ ಆದೇಶಕ್ಕಾಗಿ ಕಾಯುತ್ತಿರುವ ಶಿಕ್ಷಕರು ನೊಂದು ನುಡಿದಿದ್ದಾರೆ.
2013-14 ನೇ ಸಾಲಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ 8-6-2013 ರಿಂದ 10-6-2013 ರವರೆಗೆ ನಡೆದಿದ್ದು ಡಿ.ಡಿ.ಪಿ.ಐ. ಕಚೇರಿಯಿಂದ ತಾಲೂಕು ಬಿ.ಇ.ಓ. ಕಚೇರಿಗೆ ಚಾಲನಾದೇಶ ನೀಡಲು ಅನುಕೂಲವಾಗಲು ವರ್ಗಾವಣೆಗೊಂಡ ಶಿಕ್ಷಕರ ಪಟ್ಟಿ ಕಳುಹಿಸಲಾಗಿದೆ. ಆದರೆ ವರ್ಗಾಯಿತ ಸ್ಥಳಕ್ಕೆ ಹಾಜರಾಗಲು ಶಿಕ್ಷಕರಿಗೆ ಬಿ.ಇ.ಓ. ಅವರು ಚಾಲನಾದೇಶ ನೀಡಲು ವಿಳಂಬ ಮಾಡುತ್ತಿದ್ದಾರೆ. ವರ್ಗಾವಣೆಗೊಂಡ ಶಿಕ್ಷಕರು ಪ್ರತಿದಿನ ಇದಕ್ಕಾಗಿ ಅಲೆದಾಡುವಂತಾಗಿದ್ದು ಈ ಬಗ್ಗೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಗಮನ ಹರಿಸುವಂತೆ ಚಾಲನಾದೇಶಕ್ಕಾಗಿ ಕಾಯುತ್ತಿರುವ ನೊಂದ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ.
ಮನಸ್ಸಿದ್ದರೆ ಎಂತಹ ಕೆಲಸವನ್ನಾದರೂ ಮಾಡಬಹುದು
ತುಮಕೂರು: ಸದೃಢವಾದ ಮನಸ್ಸು ಮತ್ತು ಕಾಳಜಿ ಇದ್ದರೆ ಎಂತಹ ಕೆಲಸವನ್ನಾದರೂ ಮಾಡಬಹುದು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ಬಾಬು ಅಭಿಪ್ರಾಯಪಟ್ಟರು. ಅವರು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ನೇಹ ಮನೋ ವಿಕಾಸ ಕೇಂದ್ರ, ಸೇಜಲ್ ನ್ಯೂ ಲೈಫ್ ಪೌಂಡೇಶನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನರ ಮನೋ ರೋಗ, ಮದ್ಯಪಾನ, ಮಾದಕ ವ್ಯಸನಿಗಳಿಗೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಮನಸ್ಸನ್ನು ಬೇಕಾಬಿಟ್ಟಿಯಾಗಿ ಹರಿ ಬಿಡದೆ ಒಳ್ಳೆಯ ವಿಚಾರದತ್ತ ಕೇಂದ್ರಿಕರಿಸುವಂತೆ ಅವರು ಸಲಹೆ ನೀಡಿದರು. ಇಂತಹ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಸಲು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು. ಸಾನಿಧ್ಯವನ್ನು ಗೋಡೆಕೆರೆ ಮಹಾಸಂಸ್ಥಾನ ಮಠದ ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿ ವಹಿಸಿದ್ದರು. ವಿಶೇಷ ಆಹ್ವಾನಿತರಾದ ಸ್ನೇಹ ಮನೋವಿಕಾಸ ಕೇಂದ್ರದ ನರ ಮನೋವೈದ್ಯ ಡಾ. ಲೋಕೇಶ್ಬಾಬು ಮಾತನಾಡಿ ಈ ಶಿಬಿರದಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಪಡೆದು ಮಾನಸಿಕ ಒತ್ತಡದಿಂದ ಋಣಮುಕ್ತರಾಗಬೇಕು ಎಂದರು.
ದೌರ್ಜನ್ಯ ತಡೆಗೆ ಸಮಾಜದ ಸಹಕಾರ ಮುಖ್ಯ
ತಿಪಟೂರು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ಸಮಾಜದ ಸಹಕಾರ ಅತಿ ಮುಖ್ಯ ಎಂದು ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜು ತಿಳಿಸಿದರು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರ ಮೇಲೆ ನಡೆಯುವ ರ್ಯಾಗಿಂಗ್ ಇತರೆ ದೌರ್ಜನ್ಯಗಳ ಬಗ್ಗೆ ಕಾನೂನಿನ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈಗಿನಿಂದಲೇ ಕಾನೂನಿನ ಬಗ್ಗೆ ತಿಳುವಳಿಕೆಯನ್ನು ಪಡೆದುಕೊಂಡರೆ ಮುಂದೆ ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮಹಿಳೆಯರು ಯಾವುದೇ ಭಯ, ಆತಂಕದಿಂದ ಜೀವನ ನಡೆಸದೆ ಧೈರ್ಯದಿಂದ ಮುನ್ನುಗ್ಗಿದರೆ ಎಂತಹ ಕಠಿಣ ಸಮಸ್ಯೆಗಳನ್ನು ಎದುರಿಸಿ ನಿರ್ಭಯದ ಬದುಕನ್ನು ಸಾಗಿಸಬಹದು ಎಂದರು. ಯಾರಾದರೂ ಅಸಭ್ಯ ರೀತಿ ವರ್ತಿಸಿದರೆ ಅಥವಾ ಕಿಡಿಗೇಡಿಗಳ ಹಾವಳಿ ಕಂಡು ಬಂದರೆ ಕೂಡಲೆ ಪ್ರಾಂಶುಪಾಲರಿಗೆ ಅಥವಾ ಪೊಲೀಸ್ ಇಲಾಖೆಗೆ ತಿಳಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನ್ಯಾಯಾಲಯಕ್ಕೆ ಬಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಚಿಕ್ಕನಾಯಕನಹಳ್ಳಿ: ತಾಲೂಕಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮೊಕದ್ದಮೆಯೊಂದರ ಸಲುವಾಗಿ ಬಂದಿದ್ದ ಶೆಟ್ಟೀಕೆರೆ ಗ್ರಾಮದ ಭೈರೇಶ್ ಎಂಬುವವನನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಶೆಟ್ಟೀಕೆರೆ ಭೈರೇಶ್ ಹೊನ್ನೇಬಾಗಿಯ ಪುಷ್ಪಲತಾ ಎಂಬುವರನ್ನು ಮದುವೆಯಾಗಿ ದಾಂಪತ್ಯದಲ್ಲಿ ವಿರಸವುಂಟಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ಇಂದು ಮೊಕದ್ದಮೆ ಸಂಬಂಧ ವಿಚಾರಣೆ ಇದ್ದು ಭೈರೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಆಗ ಪುಷ್ಪಲತಾಳ ಅಣ್ಣ ಗಂಗಾಧರ ಎಂಬುವನು ತನ್ನ ಭಾವ ಭೈರೇಶನನ್ನು ನ್ಯಾಯಾಲಯದ ಮುಂದೆ ಪೊಲೀಸರು ಮತ್ತು ವಕೀಲರು, ಸಾರ್ವಜನಿಕರ ಎದುರೇ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದುದಲ್ಲದೆ, ಹತ್ತಿರದಲ್ಲಿ ಬಿದ್ದಿದ್ದ ಕಲ್ಲಿನಿಂದ ತಲೆಗೆ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಸಾಕಷ್ಟು ಸಮಯ ಗಂಗಾಧರ ಭೈರೇಶನ ಮೇಲೆ ಹಲ್ಲೆ ಮಾಡುತ್ತಿದ್ದು ಸಮೀಪದಲ್ಲೇ ಇದ್ದ ಪೊಲೀಸರು ಆರೋಪಿಯನ್ನು ಹಿಡಿಯುವುದಿರಲಿ, ಕನಿಷ್ಠ ಆತನನ್ನು ರಕ್ಷಿಸುವ ಕಾರ್ಯಕ್ಕೂ ಸಹ ಮುಂದೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದರಿ ಗಂಗಾಧರನ ಮೇಲೆ ಈಗಾಗಲೇ ಭೈರೇಶನ ಮೇಲೆ ಹಲ್ಲೆ ಮಾಡಿದ ಮತ್ತು ತೊಂದರೆ ನೀಡಿದ ಕಾರಣಕ್ಕೆ ಸಂಬಂಧ ಪಟ್ಟಂತೆ ಪ್ರಕರಣಗಳು ಇದ್ದು, 3 ತಿಂಗಳ ಹಿಂದೆ ಮಾರುತಿ ವಾಹನದಿಂದ ಗುದ್ದಿ ಸಾಯಿಸುವ ಪ್ರಯತ್ನವನ್ನು ಸಹ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶ: ವಿದ್ಯಾರ್ಥಿ ಸಾವು
ತುಮಕೂರು: ನಗರದ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿ ರಾಕೇಶ್. ಎಲ್ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ತುಮಕೂರು ಸಮೀಪದ ಮಂಚಕಲ್ಕುಪ್ಪೆ ನಿವಾಸದಲ್ಲಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿಯ ನಿವಾಸದ ಪಂಪ್ ರಿಪೇರಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಈ ದುರ್ಘಟನೆ ನಡೆದಿದೆ ಎಂದು ಪೋಷಕರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ ಶೇಕಡ 90ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಕಾಲೇಜಿನಲ್ಲಿ ಪ್ರಾಧ್ಯಾಪಕರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಕಾಲೇಜಿನಲ್ಲಿ ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿಗೆ ಸಂತಾಪ ಸೂಚಿಸಿದರು. ಬುಧವಾರ ಕಾಲೇಜಿನ ಎಲ್ಲಾ ತರಗತಿಗಳಿಗೆ ರಜೆ ಘೋಷಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

