ವಿಶೇಷ ರೈಲಿಗಾಗಿ ಪ್ರಯಾಣಿಕರ ಸಭೆ
ಕ.ಪ್ರ. ವಾರ್ತೆ ತುಮಕೂರು ಜೂ. 2
ತುಮಕೂರು ಬೆಂಗಳೂರು ನಡುವೆ ಸ್ಪೆಷಲ್ ರೈಲು ಓಡಿಸಲು ಒತ್ತಾಯಿಸಿ ರೇಲ್ವೇ ಪ್ರಯಾಣಿಕರು ಭಾನುವಾರ ಸಭೆ ನಡೆಸಿದರು. ತುಮಕೂರು ರೇಲ್ವೇ ನಿಲ್ದಾಣದ ಮುಂಭಾಗ ನಡೆದ ಸಭೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಪ್ರಯಾಣಿಕ ಉದ್ಯೋಗಿ ನಾಗರಿಕರು ಭಾಗವಹಿಸಿದ್ದರು.
ಸಭೆಯನ್ನುದ್ದೇಶಿಸಿ ಬಾ. ಹ. ರಮಾಕುಮಾರಿ, ವಕೀಲ ಕುಮಾರಸ್ವಾಮಿ, ಪತ್ರಕರ್ತ ಕರಣಂ ರಮೇಶ್ ಮಾತನಾಡಿ, ತುಮಕೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಸಂಚರಿಸುತ್ತಿದ್ದು, ಇವರಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸೀಸನ್ ಟಿಕೆಟ್ ಹೊಂದಿರುವ ಉದ್ಯೋಗಿ ಪ್ರಯಾಣಿಕರಿದ್ದಾರೆ.
ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಹೊರಡುವ ಸೊಲ್ಲಾಪುರ-ಬಿಜಾಪುರ-ಯಶವಂತಪುರ ರೈಲಿನಲ್ಲಿ ಒಂದು ಸಾವಿರದಷ್ಟು ಉದ್ಯೋಗಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದರಿಂದ ಕಚೇರಿಗೆ ತೆರಳಲು ಅನುಕೂಲವಾಗಿತ್ತು.
ಉದ್ಯೋಗಿ ಪ್ರಯಾಣಿಕರಷ್ಟೇ ಅಲ್ಲದೆ ಕಚೇರಿ, ಸರ್ಕಾರಿ ಕೆಲಸ ಮತ್ತು ನ್ಯಾಯಾಲಯಗಳ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳುವ ನೂರಾರು ಸಾರ್ವಜನಿಕರಿಗೆ 8 ಗಂಟೆಯ ಈ ರೈಲು ಅನುಕೂಲವಾಗಿತ್ತು. ಬರುವ ಜುಲೈ 1 ರಿಂದ ಈ ರೈಲಿನ ವೇಳೆಯನ್ನು ಬದಲಾಯಿಸಿದ್ದು ಬೆಳಗ್ಗೆ 6.30ಕ್ಕೆ ತುಮಕೂರಿಗೆ ಆಗಮಿಸಲಿದ್ದು ಇದರಿಂದ ಈ ರೈಲನ್ನು ಅವಲಂಬಿಸಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಬೆಂಗಳೂರು ನಡುವೆ ಪತ್ಯೇಕ ಎಕ್ಸ್ಪ್ರೆಸ್ ಅಥವಾ ಫಾಸ್ಟ್ ಪ್ಯಾಸೆಂಜರ್ ರೈಲು ಓಡಿಸಬೇಕೆಂದು ಆಗ್ರಹಿಸಿದರು. ಹೊಸ ರೈಲು ಆರಂಭಿಸುವವರೆಗೂ ಸೊಲ್ಲಾಪುರ-ಯಶವಂತಪುರ ನಡುವೆ ಸಂಚರಿಸುವ ರೈಲಿನ ವೇಳೆಯನ್ನು ಈಗಿರುವಂತೆಯೇ ಉಳಿಸಬೇಕೆಂದು ಒತ್ತಾಯಿಸಿದರು.
ಸಭೆಗೆ ಆಗಮಿಸಿದ ತುಮಕೂರು ಶಾಸಕ ರಫೀಕ್ ಅಹಮದ್ ಮನವಿ ಸ್ವೀಕರಿಸಿ ಮಾತನಾಡಿ, ತಾವೂ ಕೂಡ ಹಿಂದೆ ರೈಲಿನಲ್ಲಿ ಪ್ರಯಾಣಿಸಿದ್ದು ಪ್ರತಿನಿತ್ಯ ಉದ್ಯೋಗಕ್ಕಾಗಿ ಬೆಂಗಳೂರಿಗೆ ಓಡಾಡುವ ರೇಲ್ವೇ ಪ್ರಯಾಣಿಕರ ಕಷ್ಟದ ಅನುಭವದ ಬಗ್ಗೆ ತಿಳಿದುಕೊಂಡಿದ್ದೇನೆ. ಸೊಲ್ಲಾಪುರ-ಯಶವಂತಪುರ ರೈಲು ವೇಳೆ ಬದಲಾವಣೆಯಿಂದ ಉದ್ಯೋಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದ್ದು, ಇದಕ್ಕೆ ಪರಿಹಾರವಾಗಿ ತುಮಕೂರು ಬೆಂಗಳೂರು ನಡುವೆ ವಿಶೇಷ ರೈಲು ಓಡಿಸಲು ರೇಲ್ವೇ ಅಧಿಕಾರಿಗಳೊಂದಿಗೆ ಮಾತನಾಡಿ ಒತ್ತಾಯಿಸುವುದಾಗಿ ತಿಳಿಸಿದರು. ಅಲ್ಲದೆ, ದೆಹಲಿಗೆ ತೆರಳಿ ರೇಲ್ವೇ ಸಚಿವರೊಂದಿಗೂ ಮಾತನಾಡಿ ಅನುಕೂಲ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

