ತುಮಕೂರು

ಕಾಂಗ್ರೆಸ್ ಸರ್ಕಾರದಿಂದ ಯಶಸ್ವಿನಿ ಕಾರ್ಡ್ ನವೀಕರಿಸದೆ ಕಾಲಹರಣ: ಜೆಡಿಎಸ್ ಆರೋಪ

Published On :

ಕ.ಪ್ರ. ವಾರ್ತೆ   ಗುಬ್ಬಿ   ಜೂ. 3
ರೈತ ವಿರೋಧಿ ನೀತಿ ಪಾಲಿಸುತ್ತಿರುವ ಕಾಂಗ್ರೆಸ್ ಸರ್ಕಾರ ರೈತರ ಆರೋಗ್ಯಕ್ಕೆ ನೀಡಿದ ಯಶಸ್ವಿನಿ ಕಾರ್ಡ್ಗಳನ್ನು ನವೀಕರಿಸದೆ ಕಾಲಹರಣ ಮಾಡಿದೆ ಹಾಗೂ ಸಮಾಜಕ್ಕೆ ಮಾರಕವಾದ ಮಾದಕ ವಸ್ತು ತಯಾರಿಸಿದ ಉದ್ದಿಮೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಗುಟ್ಕಾ ನಿಷೇಧ ಹೆಸರಲ್ಲಿ ಇಡೀ ರೈತ ಸಂಕುಲಕ್ಕೆ ಅನ್ಯಾಯವೆಸಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಆರ್. ಗುರುರೇಣುಕಾರಾಧ್ಯ ಕಿಡಿಕಾರಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಸಿಗರೇಟ್ ಮತ್ತು ಮದ್ಯ ನಿಷೇಧಕ್ಕೆ ಮಾತ್ರ ಧೈರ್ಯ ತೋರುವುದಿಲ್ಲ. ಲಾಭಿ ನಡೆಸುವ ದೊಡ್ಡ ಕೈಗಾರಿಕೋದ್ಯಮಿಗಳ ಎದುರಿಸಲು ಸಾಧ್ಯವಾಗದೆ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದ ಅವರು ಗುಟ್ಕಾ ನಿಷೇಧವನ್ನು ವಿರೋಧಿಸಿ ಜೂ. 10 ರಂದು ತಾಲೂಕಿನ ಎಲ್ಲಾ ಅಡಿಕೆ ಬೆಳೆಗಾರರು ಪಕ್ಷಾತೀತವಾಗಿ ಬೃಹತ್ ಹೋರಾಟ ನಡೆಸುವುದಾಗಿ ತಿಳಿಸಿದರು.
 ಜಿಪಂ ಮಾಜಿ ಉಪಾಧ್ಯಕ್ಷ ಕೃಷ್ಮಮೂರ್ತಿ ಹಾಗೂ ಎಸ್ಸಿ ಘಟಕದ ಅಧ್ಯಕ್ಷ ಜಿ.ವಿ.ಮಂಜುನಾಥ್ ಮಾತನಾಡಿ ಜಿಲ್ಲೆಯ 6 ಲಕ್ಷ ರೈತರ ಪಾಲಿಗೆ ವಾಣಿಜ್ಯ ಬೆಳೆ ಎನಿಸಿಕೊಂಡ ಅಡಿಕೆಯನ್ನು ಕೆಲ ಉದ್ದಿಮೆದಾರರು ಗುಟ್ಕಾ ತಯಾರಿಕೆಯಲ್ಲಿ ಬಳಸಿದ್ದು, ರಾಸಾಯನಿಕ, ತಂಬಾಕು ಮಿಶ್ರಣ ಮಾಡಿದ್ದಾರೆ. ಸಮಾಜಕ್ಕೆ ಮಾರಕವಾದ ಮಾದಕ ವಸ್ತು ತಯಾರಿಸಿದ ಉದ್ದಿಮೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಗುಟ್ಕಾ ನಿಷೇಧದ ಹೆಸರಲ್ಲಿ ಇಡೀ ರೈತ ಸಂಕುಲಕ್ಕೆ ಅನ್ಯಾಯೆಸಗಿದ್ದಾರೆ ಎಂದು ಕಿಡಿಕಾರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ರಾಮಯ್ಯ ಮಾತನಾಡಿ ತರಾತುರಿಯ ನಿರ್ಧಾರ ಕೈಗೊಂಡ ಕಾಂಗ್ರೆಸ್ ಸರ್ಕಾರದ ಕ್ರಮದಿಂದ  ಅಡಿಕೆ ಬೆಳೆಗಾರರು ಅತ್ಮಹತ್ಯೆಗೆ ಶರಣಾಗಬೇಕಿದೆ. ಪರ್ಯಾಯ ವ್ಯವಸ್ಥೆ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದರು. ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ವೆಂಕಟೇಶ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಗಂಗಾಧರ್, ಜೆಡಿಎಸ್ ಉಪಾಧ್ಯಕ್ಷ ರಂಗಾಸ್ವಾಮಿ, ಮಹಮದ್ ಷಫಿ, ರಂಗಸ್ವಾಮಿ, ಮುನಿಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.