ತುಮಕೂರು

ಸಂಜೀವಿನಿ ಸಿದ್ಧರಬೆಟ್ಟದಲ್ಲಿ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲಿ

Published On :

ಕ.ಪ್ರ.ವಾರ್ತೆ   ಕೊರಟಗೆರೆ   ಜೂ.3
ರಾಜ್ಯದಲ್ಲಿಯೇ ವಿಶೇಷವಾದ ಔಷಧಿ ಗುಣವನ್ನು ಹೊಂದಿರುವ ಸಸ್ಯ ಸಂಜೀವಿನಿ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಸರ್ಕಾರವು ಹೈಟೆಕ್ ಆಯುರ್ವೇದ ಆಸ್ಪತ್ರೆ, ಆಯುರ್ವೇದ ಕಾಲೇಜು ಸ್ಥಾಪಿಸಿದರೆ ಲಕ್ಷಾಂತರ ಮಂದಿಗೆ ಉಪಯೋಗವಾಗಲಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಅವರು ತಾಲೂಕಿನ ಸಿದ್ದರಬೆಟ್ಟದ ರಂಭಾಪುರಿ ಬಾಳೆಹೊನ್ನೂರು ಖಾಸಾ ಶಾಖಾ ಮಠದ 7 ನೇ ವಾರ್ಷಿಕೋತ್ಸವದ ಅಂಗವಾಗಿ 51 ಜೋಡಿಗಳ ಸಾಮೂಹಿಕ ಆದರ್ಶ ವಿವಾಹ ಹಾಗೂ ಜನಜಾಗೃತಿ ಭಾವೈಕ್ಯ ಸಮಾವೇಶ ಸಮಾರಂಭದಲ್ಲಿ ಮಾತನಾಡಿದರು. ಕ್ಷೇತ್ರ ಸಿದ್ಧರಬೆಟ್ಟದಲ್ಲಿ ಅನೇಕ ಋಷಿ ಮುನಿಗಳು ಸಾಧಕರು ತಪಸ್ಸಿನಿಂದ ಸಿದ್ಧಿ ಪಡೆಯುವುದರೊಂದಿಗೆ ಇಲ್ಲಿಯ ಔಷಧಿ ಗಿಡಮೂಲಿಕೆಗಳಿಂದ ಅನೇಕ ಜನರ ರೋಗಗಳನ್ನು ಗುಣ ಪಡಿಸುತ್ತಿದ್ದರು ಎಂದು ತಿಳಿದು ಬಂದಿದ್ದು ಇಲ್ಲಿನ ಮಹತ್ವವಾದ ಔಷದಿಗಳ ಉಪಯೋಗವನ್ನು ಸಾರ್ವಜನಿಕರು ಪಡೆಯ ಬೇಕಾದರೆ ಸರ್ಕಾರವು ಇಲ್ಲಿ ಆಯುರ್ವೇಕ್ ಹೈಟೆಕ್ ಆಸ್ಪತ್ರೆ ಹಾಗೂ ಕಾಲೇಜನ್ನು ಸ್ಥಾಪಿಸಬೇಕಾದ ಅವಶ್ಯಕತೆ ಇದೆ. ಇದರಿಂದ ಇಲ್ಲಿನ ಔಷಧಿಗುಣ ಉಳ್ಳ ಸಸ್ಯಗಳನ್ನು ಸಂರಕ್ಷಿಸಿ ಪೋಷಿಸಿದಂತಾಗುತ್ತದೆ ಎಂದರು.
ಗುಳೆ ಹೋಗಬೇಕಾಗುತ್ತೆ: ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು ಎತ್ತಿನಹೊಳೆ ಅಥವಾ ನೇತ್ರಾವತಿ ನದಿ ತಿರುವಿನ ಯೋಜನೆಗೆ ಹೋರಾಟ ನಡೆಸದೆ ಇದ್ದಲ್ಲಿ ಈ ಭಾಗದ ರೈತರು ಮುಂದೆ ರಾಜಧಾನಿಗೆ ಕೆಲಸಕ್ಕಾಗಿ ಗುಳೆ ಹೋಗಬೇಕಾಗುತ್ತದೆ. ಆದ್ದರಿಂದ ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜಿಲ್ಲೆಗೆ ಮಹತ್ವವಾದ ಶಾಶ್ವತ ನೀರಾವರಿ ಯೋಜನೆ ತಂದಲ್ಲಿ ಜಿಲ್ಲೆಯ ಹಲವಾರು ಕೆರೆಗಳಿಗೆ ವರ್ಷವಿಡೀ ನೀರು ಬರುವುದರೊಂದಿಗೆ ಇತರ 9 ಜಿಲ್ಲೆಗಳ 46 ತಾಲೂಕುಗಳಿಗೂ ನೀರು ಹರಿಯಲಿದೆ ಎಂದರು. ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮದುವೆಯ ಆಡಂಬರಕ್ಕೆ ಒತ್ತು ನೀಡಿ ಜನರು ಅದ್ಧೂರಿತನಕ್ಕೆ ಮಾರುಹೋಗಿ ಸಂಪ್ರದಾಯವನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಜನರ ವೈವಾಹಿಕ ಜೀವನವು ಸಾಮರಸ್ಯವಿಲ್ಲದೆ ನ್ಯಾಯಾಲಯದ ಮೆಟ್ಟಿಲೇರುತ್ತಿದೆ. ಯುವ ಪೀಳಿಗೆಯಲ್ಲಿ ವಿವಾಹದ ಮಹತ್ವವನ್ನೆ ತಿಳಿಯದಾಗಿದೆ. ಸಮಾಜದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನರಿಗೆ ಸಾಮೂಹಿಕ ವಿವಾಹ ವರದಾನವಾಗಿದ್ದು ವಿವಾಹದ ಮಹತ್ವವನ್ನು ಸಾರುವಂತಾಗಿದೆ ಎಂದರು.
ಸಂಕಷ್ಟದಿಂದ ಪಾರು: ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಭಕ್ತರ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದು ಇದರಿಂದ ಹಲವಾರು ಬಡ ಕುಟುಂಬಗಳು ಮದುವೆ ಮಾಡುವ ಸಂಕಷ್ಟದಿಂದ ಪಾರಾಗುತ್ತಿವೆ. ಇನ್ನು ಮುಂದೆಯೂ ಭಕ್ತರ ಸಹಕಾರದಿಂದ ಈ ರೀತಿಯ ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಶಾಸಕ ಸುಧಾಕರಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆಡಂಭರ ಮದುವೆಗಳನ್ನು ತೊರೆದು ಈ ರೀತಿಯ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಸಾಮೂಹಿಕ ವಿವಾಹಗಳು ಬಡಜನರ ಆರ್ಥಿಕ ಸಂಕಷ್ಟವನ್ನು ಹೋಗಲಾಡಿಸುತ್ತಿವೆ. ಆದ್ದರಿಂದ ಇಂತಹ ಕಾರ್ಯಗಳಿಗೆ ಜನತೆಯ ಸಹಕಾರ ಅಗತ್ಯ ಎಂದ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಸದಾ ಸಿದ್ಧನಿದ್ದು ನೀರಾವರಿ ಹೋರಾಟಕ್ಕೆ ಮುಂಚೂಣಿಯಲ್ಲಿರುತ್ತೇನೆ ಹಾಗೂ ಈ ಕ್ಷೇತ್ರಕ್ಕೆ ಹೈಟೆಕ್ ಆಯುರ್ವೇದ ಆಸ್ಪತ್ರೆ ತರಲು ಪ್ರಯತ್ನ ಪಡುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.