ತುಮಕೂರು

ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದವರ ವಿರುದ್ಧ ಕ್ರಮ: ಪೊಲೀಸರಿಂದ ತಕ್ಕಡಿ ವಶ

Published On :

ಕ.ಪ್ರ. ವಾರ್ತೆ   ಕುಣಿಗಲ್   ಜೂ. 4
ಪಟ್ಟಣದಲ್ಲಿ ಪುಟ್ಪಾತ್ ವ್ಯಾಪಾರದ ನೆಪದಲ್ಲಿ ಸಾರ್ವಜನಿಕ ರಸ್ತೆ ಅತಿಕ್ರಮಿಸಿ, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೀವ್ರ ಕಿರಿಕಿರಿ ಉಂಟು ಮಾಡಿದ್ದ, ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದವರ ವಿರುದ್ಧ ಮಂಗಳವಾರ ಮಧ್ಯಾಹ್ನ ಕುಣಿಗಲ್ ಪಿಎಸೈ ಗುರುಪ್ರಸಾದ್ ಮತ್ತು ಸಿಬ್ಬಂದಿ, ದಿಢೀರ್ ಕಾರ್ಯಾಚರಣೆ ನಡೆಸಿ, ತಳ್ಳುವಗಾಡಿ, ಸಮರ್ಪಕ ದಾಖಲೆ ಇಲ್ಲದ ತಕ್ಕಡಿಗಳನ್ನು ವಶಪಡಿಸಿಕೊಂಡರು.
ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತ, ಗ್ರಾಮದೇವತ ವೃತ್ತದ ಸುತ್ತಮುತ್ತಲ ಪ್ರದೇಶದಲ್ಲಿ, ತುಮಕೂರು ರಸ್ತೆಯ ಇಕ್ಕೆಲ, ಹಳೇ ರಾಹೆ 48ರಿಂದ ಸಂತೇಮೈದಾನಕ್ಕೆ ತೆರಳುವ ಕೋಟೆ ಮುಖ್ಯರಸ್ತೆ, ತುಮಕೂರು ರಸ್ತೆಯಿಂದ ಕೋಟೆ ಪ್ರದೇಶಕ್ಕೆ ತೆರಳುವ ಕೋಟೆ ದ್ವಾರಬಾಗಿಲು ಆಂಜನೇಯಸ್ವಾಮಿ ರಸ್ತೆ, ಹಾಗೂ ಸಂತೇಮೈದಾನಕ್ಕೆ ತೆರಳುವ ಕೋಟೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ, ಪುಟ್ಪಾತ್ ವ್ಯಾಪಾರದ ನೆಪದಲ್ಲಿ, ಕೆಲವರು ಸಾರ್ವಜನಿಕ ರಸ್ತೆಗೆ ತರಕಾರಿ, ಹೂವಿನ, ಹಣ್ಣಿನ ಮಂಕರಿಗಳನ್ನಿಟ್ಟುಕೊಂಡರೆ, ಮತ್ತೆ ಕೆಲವರು ಮುಖ್ಯರಸ್ತೆಗೆ ಪಾನ್ ಬೀಡಾ ಅಂಗಡಿಯನ್ನು, ಇನ್ನು ಕೆಲ ಮಳಿಗೆಯವರು ತಮ್ಮ ಅಂಗಡಿ ಪ್ರಚಾರಕ್ಕಾಗಿ ಬ್ಯಾನರ್‌ಗಳನ್ನು, ಪ್ರಚಾರ ಫಲಕಗಳನ್ನು ಸಾರ್ವಜನಿಕ ರಸ್ತೆಗೆ ಇಟ್ಟುಕೊಂಡು ಸುಗಮ ಸಂಚಾರಕ್ಕೆ ತೊಂದರೆ ನೀಡುತ್ತಿದ್ದರು.
ಗ್ರಾಹಕರ ಶೋಷಣೆ: ಬಹುತೇಕ ಫುಟ್ಪಾತ್ ಮಳಿಗೆಯವರು ತೂಕದ ಯಂತ್ರಗಳನ್ನು ಇಟ್ಟುಕೊಂಡಿದ್ದು, ಅವುಗಳಿಗೆ ನಿಯಮಾನುಸಾರವಾಗಿ ಮಾಪನಶಾಸ್ತ್ರ ಇಲಾಖಾಧಿಕಾರಿಗಳಿಂದ ಮಾನ್ಯತೆ ಪಡೆಯದೆ, ಮಾನ್ಯತೆ ಇಲ್ಲದ ತೂಕದ ಯಂತ್ರಗಳನ್ನಿಟ್ಟುಕೊಂಡು, ಗ್ರಾಹಕರ ಶೋಷಣೆ  ಮಾಡುತ್ತಿದ್ದರಲ್ಲದೆ, ನಿಗದಿತ ತೂಕದ ಸಾಮಗ್ರಿಗಳನ್ನು ನೀಡುತ್ತಿರಲಿಲ್ಲ, ತೂಕ ಪ್ರಶ್ನಿಸಲು ಹೋದ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದ, ರಸ್ತೆ ಅತಿಕ್ರಮಮಣಕಾರರನ್ನು ಪ್ರಶ್ನಿಸಲು ಹೋದರೆ, ಗುಂಪುಗೂಡಿ ಗ್ರಾಹಕರ ಮೇಲೆಯೇ ಮುಗಿಬಿದ್ದು ಗಲಾಟೆ ಮಾಡುತ್ತಿದ್ದುದರ ಬಗ್ಗೆ ಕುಣಿಗಲ್ ಪೊಲೀಸರಿಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಗ್ರಾಮದೇವತೆ ವೃತ್ತದಿಂದ ದಿಢೀರ್ ಕಾರ್ಯಾಚರಣೆ ಪ್ರಾರಂಭಿಸಿ ಹತ್ತಕ್ಕೂ ಹೆಚ್ಚು ಸಮರ್ಪಕ ದಾಖಲೆ ಇಲ್ಲದೆ ತಕ್ಕಡಿಗಳನ್ನು, ರಸ್ತೆಯಲ್ಲಿ ನಿಲ್ಲಿಸಿಕೊಂಡು ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದ ಐದಕ್ಕೂ ತಳ್ಳುವ ಗಾಡಿಗಳನ್ನು ವಶಕ್ಕೆ ಪಡೆದು, ಫುಟ್ಪಾತ್‌ನ ಒಂದು ಬದಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ಮಾಡುವಂತೆ, ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಕಳೆದ ಹಲವು ತಿಂಗಳಿನಿಂದ ಮೇಲ್ಕಂಡ ರಸ್ತೆಗಳಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ಇದ್ದು, ಮಂಗಳವಾರ ಕೈಗೊಂಡ ಪೊಲೀಸ್ ಕಾರ್ಯಚರಣೆಯನ್ನು ನಾಗರಿಕರು ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.