ತುಮಕೂರು

ಗುಟ್ಕಾ ನಿಷೇಧ: ಅಡಕೆ ಬೆಳೆ ನಂಬಿರುವ ಕುಟುಂಬ ಕಂಗಾಲು

Published On :

ಕ.ಪ್ರ. ವಾರ್ತೆ ,   ಕುಣಿಗಲ್ ,   ಜೂ. 5   
ಗುಟ್ಕಾ ನಿಷೇಧ ಸರಿಯೋ ತಪ್ಪೋ ಎಂಬ ತರ್ಕ ದೇಶ ಸೇರಿದಂತೆ ರಾಜ್ಯಾದಾದ್ಯಂತ ಇನ್ನು ಚರ್ಚೆಯಲ್ಲಿರುವಾಗಲೆ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದ ನೂತನ ಸರ್ಕಾರ ಗುಟ್ಕಾ ನಿಷೇಧಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅಡಕೆ ಬೆಳೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿರುವ ತಾಲೂಕಿನ ಸಾವಿರಕ್ಕೂ ಹೆಚ್ಚು ಕುಟುಂಬಗಳು ಕಂಗಾಲಾಗಿವೆ.
ತಾಲೂಕಿನಾದ್ಯಂತ ಪ್ರತ್ಯಕ್ಷವಾಗಿ ಸುಮಾರು ನಾಲ್ಕು ನೂರು ಕುಟುಂಬಗಳು ನೇರವಾಗಿ, ಪರೋಕ್ಷವಾಗಿ ಸಾವಿರದ ಇನ್ನರಕ್ಕೂ ಹೆಚ್ಚು ಕುಟುಂಬಗಳು  ಅಡಕೆ ಬೆಳೆಯನ್ನು ಆಧರಿಸಿ, ತಮ್ಮ ಜೀವನ ನಿರ್ವಹಣೆಮಾಡುತ್ತಿವೆ.  
ಅಡಕೆ ಬೆಳೆಯನ್ನಾಶ್ರಯಿಸಿರುವವರು ವರ್ಷದ ಎಲ್ಲಾ ದಿನಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ, ತಮ್ಮ ಜೀವನ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದು, ಇದೀಗ ಸರ್ಕಾರ ಜೂನ್ 1ರಿಂದ ಗುಟ್ಕಾ ನಿಷೇಧ ಜಾರಿಗೊಳಿಸಿದಾಗಿನಿಂದಲೂ ಆತಂಕಗೊಂಡಿದ್ದಾರೆ. ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಕ್ವಿಂಟಾಲ್ ಅಡಕೆಗೆ ಎರಡರಿಂದ ಮೂರುವರೆ ಸಾವಿರ ರು.ದರ ಕುಸಿತ ಕಂಡಿದೆ. ನಿಷೇಧ ಹೀಗೆಯೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತ ಕಂಡು ಅಡಕೆಬೆಳೆ ಅವಲಂಬಿತರ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬೀಳುವ ದಿನ ದೂರ ಇಲ್ಲ ಎನ್ನುತ್ತಾರೆ ಅಡಕೆ ಬೆಳೆಗಾರ ಕೃಷ್ಣ.
15-20 ಕೋಟಿ ಮೌಲ್ಯದ ವಹಿವಾಟು: ಒಟ್ಟಾರೆ ಅಡಿಕೆಯ ಉತ್ಪಾದನೆಯಲ್ಲಿ ಶೇಕಡಾ ಎಂಬತ್ತರಷ್ಟು ಬೇಡಿಕೆ ಗುಟ್ಕಾ ವಲಯದಿಂದಲೇ. ಈಗ ಸರ್ಕಾರ  ಅಡಕೆ ಖರೀದಿಗೆ ಯಾವುದೇ ಕ್ರಮ ಕೈಗೊಳ್ಳದೆ ಏಕಾಏಕಿ ಗುಟ್ಕಾ ನಿಷೇಧ ಮಾಡಿದರೆ, ಬೆಳೆಗಾರರು ಏನಾಗಬೇಕು, ಇದನ್ನು ಅವಲಂಬಿಸಿರುವ ಜನತೆಯ ಬದುಕಿಗೆ ಭದ್ರತೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ತಾಲೂಕಿನಲ್ಲಿ ವಾರ್ಷಿಕವಾಗಿ 150ರಿಂದ 300ಟನ್ ಅಡಕೆಯನ್ನು ಸಂಸ್ಕರಿಸಿ, ಸ್ವಲ್ಪ ಭಾಗ ಸಂಗ್ರಹಿಸಿ ಉಳಿದವನ್ನು ವಿವಿಧೆಡೆಗೆ ಮಾರಾಟ ಮಾಡುವ ಮೂಲಕ, ಒಟ್ಟಾರೆ 15 ರಿಂದ 20 ಕೋಟಿ ರು.ಮೌಲ್ಯದ  ವಹಿವಾಟು ನಡೆಯುತ್ತಿದೆ.
ಆತಂಕ: ಪಟ್ಟಣದ ಕೆಲವಡೆಗಳಲ್ಲಿ, ಕೊತ್ತಗೆರೆ, ಅಮೃತೂರು, ಯಲಗಲವಾಡಿ, ಹೇರೂರು, ಕೆಂಪನಹಳ್ಳಿ ಗ್ರಾಮ ಸೇರಿದಂತೆ ಯಡೆಯೂರು, ಅಮೃತೂರು, ಹುತ್ರಿದುರ್ಗ ಹೋಬಳಿಯ ಕೆಲ ಗ್ರಾಮಗಳಲ್ಲಿ ಅಡಕೆಬೆಳೆ ಅವಲಂಬಿತ ಕುಟುಂಗಳು ಬದುಕು ಸಾಗಿಸುತ್ತಿದ್ದು, ಈಗ ಗುಟ್ಕಾ ನಿಷೇಧದಿಂದ ಈ ಕುಟುಂಬಗಳು ಕಷ್ಟದ ದಿನಗಳನ್ನು ನೋಡುವಂತಾಗಿದೆ. ತಾಲೂಕಿನ ವಿವಿಧೆಡೆಗಳಲ್ಲಿ ಹಾಗೂ ಕೂಡಗು, ಕಾಸರಗೂಡು ಸೇರಿದಂತೆ ಇತರೆ ಭಾಗಗಳಿಂದ ಅಡಕೆ ತಂದು ಸಂಸ್ಕರಿಸುವ ಕಾರ್ಯದಲ್ಲಿ ತೊಡಗಿರುವ ಹಲವು ಅಡಕೆ ಮಾರಾಟಗಾರರು ಈಗಾಗಲೆ ಸಾಲ, ಸೋಲಮಾಡಿ ಕೋಟ್ಯಂತರ ರು. ಬಂಡವಾಳ ಹಾಕಿದ್ದು, ಸರ್ಕಾರದ ಕ್ರಮದಿಂದ, ನಾವು  ಹಾಕಿರುವ ಬಂಡವಾಳ ಕೈ ಸೇರುವುದೆ ಎಂಬ ಅನುಮಾನ ಕಾಡುತ್ತಿದೆ. ನಾವೆಲ್ಲ ಸಂಕಷ್ಟದಲ್ಲಿದ್ದೇವೆಂದು ಅಡಕೆ ಮಾರಾಟಗಾರ ಶ್ರೀನಿವಾಸ್ ಆಂತಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಆರೋಗ್ಯ ಸಂರಕ್ಷಣೆ ಕಾಳಜಿಯಿಂದ ಗುಟ್ಕಾ ನಿಷೇಧಕ್ಕೆ ಸರ್ಕಾರ ಮುಂದಾಗಿದೆ. ಆದರೆ, ಈ ನಿಷೇಧದಿಂದ ಅಡಕೆ ಬೆಳೆಯನ್ನು ನಂಬಿ ಬದುಕುಕಟ್ಟಿಕೊಂಡಿರುವ ಸಾವಿರಾರು ಮಂದಿಯ ಬದುಕಿನ ಸಂರಕ್ಷಣೆ ಹೊಣೆಯ ಕಾಳಜಿ ಯಾರು ವಹಿಸಬೇಕೆಂಬ ಯಕ್ಷಪ್ರಶ್ನೆಗೆ ಸರ್ಕಾರ ಸೂಕ್ತ ಉತ್ತರ ನೀಡಬೇಕಿದೆ.

-ಆನಂದ್ ಸಿಂಗ್ ಟಿ.ಎಚ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.