ವಾಟರ್ಗ್ರಿಡ್ ಶಂಕುಸ್ಥಾಪನೆಗೆ ಒತ್ತಾಯಿಸಿದ್ದ ಸಿದ್ದು
ಕ.ಪ್ರ.ವಾರ್ತೆ ತುಮಕೂರು ಜೂ. 9
ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಪಕ್ಷ ಭೇದ ಮರೆತು ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಇದು ಸದನದ ಕಡತದಲ್ಲಿ ದಾಖಲಾಗಿದೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ತಾವೇ ಮುಖ್ಯಮಂತ್ರಿಯಾಗಿದ್ದೀರಿ, ಯಾವುದೇ ಒತ್ತಡಕ್ಕೆ ಮಣಿಯದೆ, ಮಧ್ಯ ಕರ್ನಾಟಕದ ಜನ-ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಲು, ಅಂತರ್ಜಲ ಅಭಿವೃದ್ಧಿಗೆ ಅನುಕೂಲವಾಗುವ ಈ ಬೃಹತ್ ಯೋಜನೆಗೆ ತಮ್ಮ ಆಡಳಿತವಾಧಿಯಲ್ಲೇ ಶಂಕುಸ್ಥಾಪನೆ ಮಾಡುವಂತೆ ಹಾಗೂ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಗಮನ ಹರಿಸುವಂತೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
2013-14 ನೇ ಸಾಲಿನ ಮುಂಗಡ ಪತ್ರದಲ್ಲಿ ಎತ್ತಿನ ಹೊಳೆ ಯೋಜನೆಗೆ ರು. 850 ಕೋಟಿ, ಕೆನಾಲ್ನಿಂದ ನೀರುಣಿಸುವ ಯೋಜನೆಗೆ 250 ಕೋಟಿ ರು. ವಾಟರ್ಗ್ರಿಡ್ ಕೆನಾಲ್ಗೆ ಬಾಂಡ್ಗಳ ಮೂಲಕ ರು. 1000 ಕೋಟಿ ರು. ಹಾಗೂ 2012-13 ನೇ ಸಾಲಿನಲ್ಲಿ ನಿಗದಿಪಡಿಸಿದ್ದ 400 ಕೋಟಿ ರು. ಸೇರಿದಂತೆ ಒಟ್ಟು 2450 ಕೋಟಿ ರು. ಕಾಯ್ದಿರಿಸಿ, ಸಚಿವ ಸಂಪುಟದಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡುವ ಮೂಲಕ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದೆ.
ವಿಶ್ವದಾಖಲೆಗೆ ಅವಕಾಶವಿದೆ: ಸುಮಾರು 10 ಸಾವಿರ ಕೆರೆಗಳಿಗೆ ನೀರುಣಿಸುವ ಮೂಲಕ ವಿಶ್ವದಾಖಲೆ ಮಾಡುವ ಅವಕಾಶವೂ ತಮಗಿದೆ ಎಂದು ಜಿಎಸ್ಬಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಗಮನಹರಿಸುವಂತೆ ಪತ್ರ ಬರೆಯುವುದರ ಮೂಲಕ ಕೋರಿದ್ದಾರೆ.
ಕರ್ನಾಟಕ ವಾಟರ್ಗ್ರಿಡ್ ಕೆನಾಲ್ ಕುರಿತಂತೆ 12-3-2013 ರ ಸಚಿವ ಸಂಪುಟದ ನಿರ್ಣಯವನ್ನು ಸರ್ಕಾರಿ ಆದೇಶವಾಗಿ ಪ್ರಕಟಿಸುವುದು. ಹಿಂದಿನ ಸರ್ಕಾರ 2013-14 ನೇ ಸಾಲಿನ ಪೂರಕ ಬಜೆಟ್ನಲ್ಲಿ ರಾಜ್ಯ ವಾಟರ್ಗ್ರಿಡ್ ಕೆನಾಲ್ಗೆ ರು. 1000 ಕೋಟಿ ರು. ಗಳನ್ನು ಬಾಂಡ್ ಮೂಲಕ ಸಂಗ್ರಹಿಸುವುದಾಗಿ ಪ್ರಕಟಿಸಿತ್ತು. ಮುಂಬರುವ ಮುಂಗಡ ಪತ್ರದಲ್ಲಿ ಯೋಜನೆ ಜಾರಿಗೆ ರು. 3000 ಕೋಟಿ ರು. ಮೀಸಲಿಡುವುದು.
ಹಿಂದಿನ ಸರ್ಕಾರ 2013-14 ನೇ ಸಾಲಿನ ಬಜೆಟ್ನಲ್ಲಿ ಎತ್ತಿನ ಹೊಳೆ ಯೋಜನೆಯಿಂದ ನಗರ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರಿಗೆ ಸಂಪರ್ಕ ಒದಗಿಸಲು 200 ಕೋಟಿ ಮೀಸಲಿಟ್ಟಿದ್ದು, ತಾವು ಮಂಡಿಸಲಿರುವ ಮುಂಗಡಪತ್ರದಲ್ಲಿ 500 ಕೋಟಿ ರು. ಮೀಸಲಿಡುವುದು.
ಮೀಸಲಿಡಿ: ಮಧ್ಯಕರ್ನಾಟಕದ ಸುಮಾರು 10 ಸಾವಿರ ಕೆರೆಗಳ ಸಮಗ್ರ ಅಭಿವೃದ್ಧಿ, ರಾಯಗಾಲುವೆಗಳ ಸಮಗ್ರ ಅಭಿವೃದ್ಧಿ ಮತ್ತು ಒತ್ತುವರಿ ತೆರವಿಗಾಗಿ ತಾವು ಮಂಡಿಸಲಿರುವ ಮುಂಗಡ ಪತ್ರದಲ್ಲಿ 3500 ಕೋಟಿ ರು. ಮೀಸಲಿಡುವುದು. ಪರಮಶಿವಯ್ಯ ವರದಿಯಾಧಾರಿತ ಪಶ್ಚಿಮಾಭಿಮುಖವಾಗಿ ಹರಿಯುವ ಯೋಜನೆಯಿಂದ 83.07 ಟಿಎಂಸಿ, ಹೇಮಾವತಿ ಪ್ಲಡ್ ಕೆನಾಲ್ ನಿಂದ 15 ಟಿಎಂಸಿ ಯೋಜನೆಯ ಹೆಡ್ವರ್ಕ್ಸ್ಗೆ ಮುಂಗಡಪತ್ರದಲ್ಲಿ 3000 ಕೋಟಿ ಮೀಸಲಿರಿಸುವುದು.
ಕಾಲಮಿತಿ ನಿಗದಿ: ಪರಮಶಿವಯ್ಯ ವರದಿಯಾಧಾರಿತ ಪಶ್ಚಿಮಾಭಿಮುಖವಾಗಿ ಹರಿಯುವ ಯೋಜನೆಯ ಡಿಪಿಆರ್ನಲ್ಲಿ ಮತ್ತು ಎತ್ತಿನ ಹೊಳೆ ಡಿಪಿಆರ್ನಲ್ಲಿ 2 ಪ್ರತ್ಯೇಕ ಸೇವಾ ಕಾಲುವೆಗಳ ಡಿಪಿಆರ್ನ್ನು ತಯಾರಿಸಲು ಟೆಂಡರ್ ಕರೆಯಲಾಗಿದೆ. ಪ್ರಸ್ತುತ ವಾಟರ್ಗ್ರಿಡ್ ಕೆನಾಲ್ ನಿರ್ಮಿಸಿ, 3 ಯೋಜನೆಗಳ ನೀರನ್ನು ಒಂದೇ ಸಂಯುಕ್ತ ಕಾಲುವೆಯಲ್ಲಿ ಹರಿಸಲು ಉದ್ದೇಶಿಸಿರುದರಿಂದ ವಾಟರ್ಗ್ರಿಡ್ ಕೆನಾಲ್ ಡಿಪಿಆರ್ ತಯಾರಿಸಲು ಒಂದು ಕಂಪನಿಗೆ ವಹಿಸಿ, 3 ತಿಂಗಳೊಳಗೆ ವರದಿ ಪಡೆಯಲು ಕಾಲಮಿತಿ ನಿಗದಿಗೊಳಿಸುವುದು.
ಎಲ್ಲ ನೀರಾವರಿ ಯೋಜನೆಗಳಲ್ಲಿ ಮೊದಲು ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ, ನಂತರ ಕಾಲುವೆ ಮಾಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಮೊದಲು ವಾಟರ್ಗ್ರಿಡ್ ಕೆನಾಲ್ ನಿರ್ಮಿಸಿ, ಕೆರೆಗಳಿಗೆ ನೀರುಣಿಸಲು ಕಾಲುವೆಗಳ ಅಭಿವೃದ್ಧಿ ಪಡಿಸಬೇಕಾಗಿದೆ. ನಂತರ ಹೆಡ್ವರ್ಕ್ಸ್ ಕಾಮಗಾರಿ ಆರಂಭಿಸಿ, ಒಂದೊಂದೇ ಯೋಜನೆಯ ನೀರನ್ನು ಈ ಕಾಲುವೆಗೆ ಹರಿಸಬೇಕಾಗಿರುವುದರಿಂದ ಶೀಘ್ರವಾಗಿ ವಾಟರ್ಗ್ರಿಡ್ ಕೆನಾಲ್ಗೆ ಶಂಕುಸ್ಥಾಪನೆ ನೆರವೇರಿಸುವುದು.
ಕೇಂದ್ರಕ್ಕೆ ಪ್ರಸ್ತಾವನೆ: ಕೇಂದ್ರ ಸರ್ಕಾರ 12 ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಅಂದರೆ 2017 ರ ಒಳಗೆ ವಿವಿಧ ನದಿಗಳ ಪಾತ್ರದಲ್ಲಿನ ನೀರಿನ ಪ್ರಮಾಣದಲ್ಲಿನ ಶೇ. 20 ರಷ್ಟು ನೀರನ್ನು ಬಳಸಲು ಕಾನೂನು ರೂಪಿಸುತ್ತಿದೆ. ಆದ್ದರಿಂದ ಈ ಯೋಜನೆಗೆ ಯಾವುದೇ ಅಡ್ಡಿ-ಆತಂಕಗಳಿರುವುದಿಲ್ಲ. ಹಾಗೂ ಈ ಯೋಜನೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
ಅವಕಾಶವಿದೆ: ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳಲ್ಲಿನ ಸುಮಾರು 2000 ಟಿಎಂಸಿ ನೀರಿದ್ದು, ಇದರಲ್ಲಿ ಶೇ. 20 ರಷ್ಟು ನೀರು ಅಂದರೆ ಸುಮಾರು 400 ಟಿಎಂಸಿ ನೀರಿನ ಯೋಜನೆ ರೂಪಿಸಲು ಅವಕಾಶವಿದೆ. ಆದ್ದರಿಂದ ಈ ನೀರಿನ ಸಾಮರ್ಥ್ಯಕ್ಕೆ ಪೂರಕವಾಗಿ ವಾಟರ್ಗ್ರಿಡ್ ಕೆನಾಲ್ ನಿರ್ಮಿಸಲು ಅಗತ್ಯವಿರುವಷ್ಟು ಭೂ ಸ್ವಾಧೀನಪಡಿಸಿಕೊಂಡು, ಆದ್ಯತೆಗೆ ತಕ್ಕಂತೆ ಗ್ರಿಡ್ ಕೆನಾಲ್ ನಿರ್ಮಿಸುವುದು. ಹಿಂದಿನ ಸರ್ಕಾರ 2013-14 ನೇ ಸಾಲಿನ ಬಜೆಟ್ನಲ್ಲಿ ನೀರಾವರಿ ಕಾಲುವೆಗಳ ಮೇಲೆ ಸೋಲಾರ್ ಯೂನಿಟ್ ಅಳವಡಿಸಲು 75 ಕೋಟಿ ರು. ಮೀಸಲಿಟ್ಟಿದ್ದು, ತಾವು ಮಂಡಿಸಲಿರುವ ಮುಂಗಡ ಪತ್ರದಲ್ಲಿ 200 ಕೋಟಿ ರು. ಮೀಸಲಿಡುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

