ತುಮಕೂರು

ಎಸ್ಪಿಎಂ ಮತ್ತೆ ಕಾಂಗ್ರೆಸ್ಗೆ?

Published On :

ಕ.ಪ್ರ.ವಾರ್ತೆ  ಕುಣಿಗಲ್   ಜೂನ್ 13
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿ ಫಾರಂ ಸಿಕ್ಕು, ನಂತರ ವಂಚಿತರಾದ ಮುಖಂಡ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರು ಪುನಃ ಕಾಂಗ್ರೆಸ್ ಸೇರಲು ಮುಂದಾಗಿರುವ ವಿದ್ಯಮಾನ ಕಾಂಗ್ರೆಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ.
 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಪ್ರಮುಖರಾಗಿದ್ದ ಎಸ್.ಪಿ. ಮುದ್ದಹನುಮೇಗೌಡರು, 2008ರ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ, ಬೇಸತ್ತು ಜೆಡಿಎಸ್ ಸೇರ್ಪಡೆಗೊಂಡಿದ್ದರು.
 2013ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯನವರಿಗಿಂತ ತುರುಸಿನ ಸ್ಪರ್ಧೆ ನಡೆಸಿ ಮೊದಲ ಹಂತದಲ್ಲಿ ಜೆಡಿಎಸ್ ಬಿ ಫಾರಂ ಪಡೆದು ಯಶಸ್ವಿಯಾಗಿ, ಚುನಾವಣೆ ಪ್ರಚಾರದಲ್ಲಿ ಬಿರುಸಿನಿಂದ ಪಾಲ್ಗೊಂಡಿದ್ದ ಸಮಯದಲ್ಲೆ, ಮಾಜಿ ಸಚಿವ ಡಿ.ನಾಗರಾಜಯ್ಯ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಅಪರೂಪ ಎಂಬಂತೆ ಸಿ ಫಾರಂ ಪಡೆದು, ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು.
ತೀವ್ರ ಅಸಮಾಧಾನ: ಜೆಡಿಎಸ್ ವರಿಷ್ಠರು ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡರಿಗೆ ಬಿ ಫಾರಂ ನೀಡಿ, ಮಾಜಿಸಚಿವ ಡಿ.ನಾಗರಾಜಯ್ಯನವರಿಗೆ ಸಿ ಫಾರಂ ನೀಡುವಾಗ ಸೌಜನ್ಯಕ್ಕೂ ಎಸ್ಪಿಎಂ ಅವರನ್ನು ಸಂಪರ್ಕಿಸದಿರುವುದು ಅವರಿಗೆ ಅಸಮಾಧಾನ ಉಂಟು ಮಾಡಿತ್ತು. ಈ ವಿದ್ಯಾಮಾನಗಳಿಂದ ಬೇಸತ್ತು,  ವಿಧಾನಸಭಾ ಚುನಾವಣೆ ಸಮಯದಲ್ಲಿ ತಟಸ್ಥನೀತಿ ತಳೆದು ಸಕ್ರಿಯ ರಾಜಕಾರಣದಿಂದ ಮುದ್ದುಹನುಮೇಗೌಡ ದೂರ ಉಳಿದಿದ್ದರು. ಈಗ ಕೆಲದಿನಗಳ ಹಿಂದೆ ಹೆಬ್ಬೂರಿನ ತೋಟದ ಮನೆಯಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಎಸ್.ಪಿ.ಎಂ.ಗೆ ಬೆಂಬಲಿಗರು ವಿಶ್ವಾಸದ್ರೋಹ ಎಸಗಿದ ಜೆಡಿಎಸ್ನಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ. ಕಾರಣ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದರು. ಇದಕ್ಕೆ ಶೀಘ್ರದಲ್ಲೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದ ಎಸ್ಪಿಎಂ , ಕೈಪಾಳೆಯವನ್ನು ಸೇರುವ ವದಂತಿ ವ್ಯಾಪಕವಾಗಿ ಹಬ್ಬಿವೆ.
ರಾಮಸ್ವಾಮಿ ಗೌಡರ ಸಭೆ: ಈ ಹಿನ್ನೆಲೆಯಲ್ಲಿ, ಕುಣಿಗಲ್ ಹಾಗೂ ಹುಲಿಯೂರುದುರ್ಗ ಬ್ಲಾಕ್ ಕಾಂಗ್ರೆಸ್ನ ಪ್ರಮುಖ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು, ಗುರುವಾರ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡರ ಅಧ್ಯಕ್ಷತೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯ ನಮ್ಮ ಮನೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎಸ್ಪಿಎಂ ಪರ, ವಿರೋಧ ಬೆಂಬಲಿಗರು ಪಾಲ್ಗೊಂಡಿದ್ದು, ಸಭೆ 11ಗಂಟೆಗೆ ಪ್ರಾರಂಭವಾಗಬೇಕಿದ್ದರೂ ಮಾಜಿ ಶಾಸಕರು ಬೆಂಗಳೂರಿನಿಂದ ಆಗಮಿಸದ ಕಾರಣ ಮಧ್ಯಾಹ್ನ ಒಂದು ಗಂಟೆ ಸಮೀಪಿಸಿದರೂ, ಸಭೆ ಪ್ರಾರಂಭವಾಗುವ ಲಕ್ಷಣಗಳು ಕಾಣಸಲಿಲ್ಲ.
ಈ ಮಧ್ಯೆ ರಿಜಿಸ್ಟರ್ ಪುಸ್ತಕಕ್ಕೆ ಹಿರಿಯ ಮಖಂಡರೊಬ್ಬರು ಹಾಜರಿದ್ದ ಕಾರ್ಯಕರ್ತರು, ಮುಖಂಡರ ಸಹಿ ಸಂಗ್ರಹಸುತ್ತಿದ್ದರು. ಈ ಬಗ್ಗೆ ದಿಢೀರ್ ಆಕ್ರೋಶ ವ್ಯಕ್ತಪಡಿಸಿದ ಎಸ್ಪಿಎಂ ಬೆಂಬಲಿಗರು, ರಿಜಿಸ್ಟರ್ ಪುಸ್ತಕದ ಕಾಲಿ ಹಾಳೆ ಬಿಟ್ಟು ಸಹಿ ಹಾಕಿಸುವ ಅವಶ್ಯಕತೆ ಏನೆಂದು ಪ್ರಶ್ನಿಸಿ, ಸಹಿ ಸಂಗ್ರಹಿಸುತ್ತಿದ್ದ ಹಿರಿಯ ಮುಖಂಡನೊಂದಿಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಅವರೊಂದಿಗೆ ವಾಗ್ವಾದ ನಡೆಸಿ, ರಿಜಿಸ್ಟರ್ ಪುಸ್ತಕ ಕಸಿದು ಸಹಿ ಸಂಗ್ರಹಿಸಿದ್ದ ಹಾಳೆಗಳನ್ನು ಹರಿದು ಕೆಲಕಾಲ ಗೊಂದಲ ವಾತಾವರಣಕ್ಕೆ ಕಾರಣವಾಯಿತು.
ಮಧ್ಯಾಹ್ನ 1.30 ಸಮೀಪಿಸಿದರೂ ಸಭೆ ಪ್ರಾರಂಭವಾಗಲಿಲ್ಲ. ಬ್ಲಾಕ್ ಅಧ್ಯಕ್ಷ ಶಂಕರ್, ಮಾಜಿ ಶಾಸಕರನ್ನು ಸಂಪರ್ಕಿಸಿದಾಗ, ಮಾಜಿ ಶಾಸಕರು ಕಾರ್ಯನಿಮಿತ್ತ ದಿಢೀರ್ ದೆಹಲಿಗೆ ತೆರಳಿದ್ದು ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿ, ಸಭೆಯನ್ನು ಮುಕ್ತಾಯಗೊಳಿಸಿದರು. ಸಭೆಯಲ್ಲಿ ಹಾಜರಿದ್ದ ಕಾರ್ಯಕರ್ತರಿಗೆ ಸಮೀಪದ ಹೋಟೆಲ್ನಲ್ಲಿ ಊಟದ ವ್ಯವಸ್ಥೆ ಏರ್ಪಡಿಸಿದ್ದು, ಅದಕ್ಕೆಂದು ಬಂದವರ ಸಹಿ ಪಡೆಯುತ್ತಿದ್ದುದನ್ನು ಬೇರೆ ಅರ್ಥ ಕಲ್ಪಿಸಿದ ಕೆಲವರು ಹರಿದುಹಾಕಿದ್ದಾರೆಂದು ಸ್ಪಷ್ಟಪಡಿಸಿದರೆ, ಎಸ್ಪಿಎಂ ಬೆಂಬಲಿಗರು ಎಸ್ಪಿಎಂ ವಿರುದ್ಧ ಬರೆದುಕೊಳ್ಳಲು ಸಹಿ ಸಂಗ್ರಹಿಸುತ್ತಿದ್ದರೆಂದು ಆರೋಪಿಸಿದರು.
ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಕಳಸೇಗೌಡ ಇತರರು, ಕಾಂಗ್ರೆಸ್ ಪಕ್ಷ ವಿಶಾಲವಾಗಿದ್ದು, ಪಕ್ಷದಲ್ಲಿದ್ದವರು ಬೇರೆ ಹೋಗಿ ಈಗ ಪುನಃ ವಾಪಸ್ ಬರುತ್ತಿದ್ದಾರೆ. ಇದಕ್ಕೆ ಎಸ್.ಪಿ.ಎಂ ಅವರಿಗೆ ಸ್ವಾಗತ ಕೋರುತ್ತೆವೆ ಎಂದರೆ, ಎಸ್ಪಿಎಂ ತಾಲೂಕಿನ ಕೈಪಾಳೆಯಕ್ಕೆ ಬರುವ ಮುನ್ನವೆ ಗುಂಪುಗಾರಿಕೆ ಚಟುವಟಿಕೆ ಗರಿಗೆದರಿದ್ದು ಮುಂದಿನ ದಿಗಳಲ್ಲಿ ಈ ಚಟುವಟಿಕೆ ಮತ್ತಷ್ಟು ಬಿರುಸುಗೊಂಡು ಪಕ್ಷಕ್ಕೆ ಮಾರಕವಾಗಲಿದೆ ಎಂದು ಹಿರಿಯ ಕಾಂಗ್ರೆಸ್ಸಿಗರಾದ ರಂಗಸ್ವಾಮಿ, ಶರೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.