ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸದೇ ಶಾಲೆಗೆ ಕಳಿಸಿ
ಕ.ಪ್ರ. ವಾರ್ತೆ ಮಧುಗಿರಿ ಜೂ.13
ಬಡತನವನ್ನೇ ನೆಪ ಮಾಡಿಕೊಂಡು ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸದೇ ಶಾಲೆಗೆ ಕಳಿಸುವ ನಿಟ್ಟಿನಲ್ಲಿ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಿ.ನಾರಾಯಣ ಆಚಾರ್ಯ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾ.ಕಾನೂನು ಸೇವಾ ಸಮಿತಿ, ತಾ. ಆಡಳಿತ, ವಕೀಲರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸುವ ಮೂಲಕ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಿಯಲ್ಲ: ಇಂದಿನ ಆಧುನಿಕ ಪ್ರಪಂಚದಲ್ಲಿ ಮೊದಲು ಮಕ್ಕಳು ಶಿಕ್ಷಣ ಕಲಿಕೆ ಆದ್ಯತೆ ನೀಡಬೇಕು ಎಂದ ಅವರು,ಬಡತನ ನೆಪ ಮಾಡಿ ದುಡಿಯುತ್ತಾರೆ ಎಂಬ ಕಾರಣಕ್ಕೆ ಕೂಲಿ ಕೆಲಸಕ್ಕೆ ಹಚ್ಚುವುದು ಸರಿಯಲ್ಲ. ತನ್ನಲ್ಲಿರುವ ಮೃಗೀಯ ಭಾವನೆ ಬದಿಗೊತ್ತಿ ಮೊದಲು ಮನುಷ್ಯನಾಗಿ ಬದುಕು ಸಾಗಿಸಬೇಕು.
ಬೆಳೆಯುವ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ನೂಕದೇ ಈ ದೇಶದ ಉತ್ತಮ ನಾಗರಿಕನನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದ ಅವರು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೇವಲ ಕಾನೂನಿನಿಂದ ಮಾತ್ರ ಸರಿಪಡಿಸಲು ಸಾಧ್ಯ ಎಂಬ ಮನೋಭಾವ ಬದಲಾಗಬೇಕು.
ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು ಭಾರತೀಯ ಪರಂಪರೆಯ ಸನಾತನ ಸಂಸ್ಕೃತಿ, ಸಂಸ್ಕಾರ ಬಿತ್ತುವ ಜೊತೆಗೆ ಶಾಂತಿ, ಶಿಸ್ತು, ಸಂಯಮದಿಂದ ಸಮಾಜದಲ್ಲಿ ಸಾಮರಸ್ಯದಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕು.
ಇತ್ತಿಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಸುಶಿಕ್ಷಿತರೆ ಹೆಚ್ಚು ಭಾಗಿಯಾಗುತ್ತಿರುವುದು ಕಂಡು ಬರುತ್ತಿರುವುದು ವಿಷಾದನೀಯ. ಹಾಗಾಗಿ ದುಡಿಮೆಗೆ ಮಕ್ಕಳನ್ನು ತಳ್ಳದೇ ಶಾಲೆಗೆ ಕಳಿಸಿ ಜ್ಞಾನ ಸಂಪಾದನೆಗೆ ಅಧಿಕ ಒತ್ತು ಕೊಡುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಪಾಲಸಬೇಕು ಎಂದರು.
ಜಾಥಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಡಿ.ಕೆ. ವೇಲ, ಡಿ.ಸುರೇಶ್, ಕೆ.ಲಕ್ಷ್ಮೀ, ಕಸನಪ್ಪನಾಯ್ಕ್, ವಕೀಲರ ಸಂಘದ ಅಧ್ಯಕ್ಷ ಜಯರಾಮ್, ಕಾಯದರ್ಶಿ ಅಶೋಕ್, ಬಿಇಓ ವೈ.ಎನ್. ರಾಮಕೃಷ್ಣಯ್ಯ, ವಕೀಲ ಪಿ.ಸಿ.ನಾಗಭೂಷಣ್, ಎಸ್. ರಘುನಾಥರೆಡ್ಡಿ, ಉಪ ಪ್ರಾಂಶುಪಾಲ ಮಂಜುನಾಥಸ್ವಾಮಿ, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್ ಇನ್ನು ಅನೇಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

