ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಕ.ಪ್ರ. ವಾರ್ತೆ ತುಮಕೂರು ಜೂ.17
ಅಧಿಕಾರಕ್ಕೆ ಬಂದಾಗಿನಿಂದಲೂ ಸಮರ್ಪಕ ಆರ್ಥಿಕ ನೀತಿಗಳನ್ನು ಜಾರಿಗೊಳಿಸದೆ ಜನಹಿತ ಮರೆತ ಕೇಂದ್ರದ ಯುಪಿಎ ಸರಕಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿಂದಲೂ ಸಾಮಾನ್ಯ ಜನರ ನಿತ್ಯೋಪಯೋಗಿ ವಸ್ತುಗಳ ಬೆಲೆಗಳು ಏರುತ್ತಲೇ ಇದೆ. ಯುಪಿಎ ಸರಕಾರದ ಅವಧಿಯಲ್ಲಿ ಅಭಿವೃದ್ಧಿಯ ಸೂಚ್ಯಂಕ ಕೆಳಗೆ ಇಳಿಯುತ್ತಿದ್ದರೆ, ಹಣದುಬ್ಬರ ಏರುತ್ತಲೇ ಇದೆ. ಸಮರ್ಪಕ ಆರ್ಥಿಕ ನೀತಿಗಳನ್ನು ಅಳವಡಿಸಕೊಳ್ಳದ ಪರಿಣಾಮ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಾಮಾನ್ಯ ಸಂಗತಿಯನ್ನು ಸ್ವತಃ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ತಿಳಿಯದಿರುವುದು ದೇಶದ ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ನಿರಂತರ ಏರಿಕೆ: ಈಗಾಗಲೇ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ನಿರಂತರವಾಗಿ ಏರಿಸುತ್ತಾ ದಾಖಲೆ ಮಾಡಿದ ಯುಪಿಎ ಸರಕಾರ ಮತ್ತೊಮ್ಮೆ ಬೆಲೆ ಏರಿಕೆಯನ್ನು ಮಾಡಿದೆ. ಈ ಬೆಲೆ ಏರಿಕೆಯಿಂದಾಗಿ ದಿನನಿತ್ಯದ ಬಳಕೆ ವಸ್ತುಗಳ ಬೆಲೆಗಳೂ ಏರಿಕೆಯಾಗಲಿದ್ದು ಜನರ ಜೀವನ ದುರ್ಬರವಾಗಲಿದೆ. ಸಾಗಾಣಿಕೆ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದೆ. ರೈತರ ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ರೈತರಿಗೆ ಸರಬರಾಜಾಗುವ ರಾಸಾಯನಿಕ ಗೊಬ್ಬರಗಳ ಸಾಗಾಣಿಕೆ ವೆಚ್ಚವೂ ಏರಲಿದ್ದು ಇದು ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಆರೋಪಿಸಿದ್ದಾರೆ.
ಸಾರಿಗೆ ಸಂಸ್ಥೆ ದರದ ಏರಿಕೆ: ಇದರ ಜೊತೆಗೆ ಡೀಸೆಲ್ ಬೆಲೆ ಏರಿಸಿದ ಕೆಲವೇ ಕ್ಷಣಗಳಲ್ಲಿ ರಾಜ್ಯ ಸರಕಾರ ಸಾರಿಗೆ ಸಂಸ್ಥೆಯ ಪ್ರಯಾಣ ದರವನ್ನು ಏರಿಸಿರುವುದನ್ನು ಬಿಜೆಪಿ ಖಂಡಿಸುತ್ತದೆ. ಖಾಸಗಿಯವರು ಇನ್ನೂ ಈ ಬಗ್ಗೆ ತಮ್ಮ ನಿಲುವನ್ನು ಪ್ರಕಟಿಸುವ ಮುನ್ನವೇ ಸರಕಾರವೇ ಪ್ರಯಾಣ ದರ ಏರಿಸಿ ಖಾಸಗಿಯವರಿಗೆ ಪರೋಕ್ಷವಾಗಿ ದರ ಏರಿಸಲು ಕುಮ್ಮಕ್ಕು ನೀಡಿದೆ. ಇವರಿಗೆ ಜನಹಿತಕ್ಕಿಂತ ಸಂಸೆಯ ಲಾಭ ನಷ್ಟಗಳೇ ಪ್ರಾಮುಖ್ಯವಾಗಿದೆಯೆಂಬುದು ಈ ಸಂಗತಿಯಿಂದ ಸಾಬೀತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮೊದಲು ಪ್ರತಿ ಬಡ ಕುಟುಂಬಮೊಂದಕ್ಕೆ 30 ಕೆಜಿ ಅಕ್ಕಿ ಕೊಡುತ್ತೇನೆಂದು ಘೋಷಿಸಿದ ಸರಕಾರ ಅದನ್ನು ಕುಟುಂಬದಲ್ಲಿನ ವ್ಯಕ್ತಿಗಳ ಸಂಖ್ಯೆಗೆ ಅನುಗುಣವಾಗಿ ವಿತರಿಸುವುದಾಗಿ ತನ್ನ ನಿಲುವನ್ನು ಬದಲಾಯಿಸಿತು. ಇದನ್ನೂ ಜಾರಿಗೆ ತರಲು ಸಾಧ್ಯವಾಗದೆ ಸಬೂಬು ಹೇಳುತ್ತಿದೆ. ಆದರೆ ಜನಸಾಮಾನ್ಯರ ಜೀವನದ ಮೇಲೆ ಭಾರೀ ಪರಿಣಾಮ ಬೀರುವ ಪ್ರಯಾಣ ದರವನ್ನು ಏರಿಸುವ ಬಗ್ಗೆ ಅತಿ ಹೆಚ್ಚು ಆಸಕ್ತಿ ತೋರಿತ್ತಿದೆ. ಇದು ಕಾಂಗ್ರೆಸ್ ಸರಕಾರಕ್ಕೆ ಜನತೆಯ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಹಿಂತೆಗೆದುಕೊಳ್ಳಲಿ: ಏರಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಕೂಡಲೇ ಕೇಂದ್ರದ ಯುಪಿಎ ಸರಕಾರ ಹಿಂತೆಗೆದುಕೊಳ್ಳಬೇಕು ಹಾಗೂ ಪ್ರಯಾಣ ದರ ಏರಿಸಿರುವ ರಾಜ್ಯ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಆಗ್ರಹವನ್ನು ಬಿಜೆಪಿ ಮಾಡುತ್ತದೆ. ಇಲ್ಲದಿದ್ದಲ್ಲಿ ಕಾಂಗ್ರೆಸ್ ಸರಕಾರಗಳ ವಿರುದ್ಧ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

