ಮಾರುಕಟ್ಟೆ ಮೌಲ್ಯಕ್ಕೆ 4 ರಷ್ಟು ಹೆಚ್ಚಿಗೆ ನೀಡಲು ಶಿಫಾರಸು
ಶಿರಾ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಕಾಲುವೆ ಕಾಮಗಾರಿಯ ವ್ಯಾಪ್ತಿಯಲ್ಲಿ ಬರುವ ಭೂಮಾಲಿಕರಿಗೆ ಪರಿಹಾರ ನಿಗದಿಪಡಿಸುವ ಸಭೆ ನಡೆದು ಎಕರೆಗೆ ಸರ್ಕಾರದ ಮಾರುಕಟ್ಟೆ ಮೌಲ್ಯಕ್ಕೆ 4 ರಷ್ಟು ಹೆಚ್ಚಿಗೆ ನೀಡಲು ಶಿಫಾರಸು ಮಾಡುವುದಾಗಿ ಪ್ರಭಾರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಅಧಿಕಾರಿಗಳು ಹಾಗೂ ಕಾಮಗಾರಿ ವ್ಯಾಪ್ತಿಗೆ ಬರುವ ರೈತರ ಸಭೆಯಲ್ಲಿ ಅವರು ಮಾತನಾಡುತ್ತ, ಈ ಹಿಂದೆ ಮೂರು ಭಾರಿ ಹಣ ನಿಗದಿಪಡಿಸುವ ಸಭೆಗಳು ನಡೆದು ವಿಫಲವಾಗಿದ್ದು ರೈತರ ಒತ್ತಾಯದ ಪ್ರಕಾರ ಹೆಚ್ಚು ಮೌಲ್ಯ ನಿಗದಿಪಡಿಸಿ ಸರ್ಕಾರಕ್ಕೆ ಸಲ್ಲಿಸಿದರೂ ಸರ್ಕಾರ ಅದನ್ನು ಒಪ್ಪಿಲ್ಲ.
ಆದ್ದರಿಂದ ಈಗಿನ ಸರ್ಕಾರದ ಪ್ರಕಾರ ಇರುವ ಮೌಲ್ಯಕ್ಕೆ 4 ರಷ್ಟು ನಿಗದಿಗೊಳಿಸಬಹುದಾಗಿದ್ದು ಇದಲ್ಲದೆ ಜಮೀನಿನಲ್ಲಿ ಇರುವ ಮರವಳಿ ಬೋರ್, ಮತ್ತು ಬೆಳೆಗಳಿಗೆ ಹೆಚ್ಚುವರಿಯಾಗಿ ಹಣ ನೀಡಲಾಗುವುದು. ಇದನ್ನು ರೈತರು ಒಪ್ಪಿಕೊಂಡು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಲು ರೈತರಲ್ಲಿ ವಿನಂತಿಸಿದರು.
ಅನ್ಯಾಯವಲ್ಲವೇ?: ಆದರೆ 17 ಗ್ರಾಮಗಳಿಂದ ಬಂದಿದ್ದ ರೈತರು ಇದಕ್ಕೆ ಆಕ್ಷೇಪಿಸಿ ಕಳ್ಳಂಬೆಳ್ಳ ವ್ಯಾಪ್ತಿಗೆ ಬರುವ ರೈತರಿಗೆ ನೀವು ಹೇಳುವಂತೆ ಎಕರೆಗೆ 8 ಲಕ್ಷ ಬಂದರೆ ಮದಲೂರು ಭಾಗದವರಿಗೆ 4 ಲಕ್ಷ ಬರುತ್ತದೆ. ಇದು ಅನ್ಯಾಯವಲ್ಲವೇ, ಎಲ್ಲರಿಗೂ ಸಮನಾಗಿ ಪರಿಹಾರ ನೀಡಿ. ಈ ತಾರತಮ್ಯವೇಕೆ. ನಾವು ಕೂಡ ಜಮೀನು ನೀಡುತ್ತಿಲ್ಲವೇ. ಆ ಭಾಗದ ರೈತರಿಗೆ ಒಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಇದು ಸರ್ಕಾರದ ನಿಯಮವಾಗಿದ್ದು ಇದನ್ನು ಒಪ್ಪದೇ ಇರುವ ರೈತರು ಕೋರ್ಟ್‌ಗೆ ಹೋಗಬಹುದು. ರೈತರ ಪರವಾಗಿ ಎಷ್ಟು ಹೆಚ್ಚಿಗೆ ಪರಿಹಾರ ಕೊಡಿಸಲು ಸಾಧ್ಯವೋ ಅಷ್ಟನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರ ಅದಕ್ಕೆ ಒಪ್ಪಬೇಕು ಎಂದರು.
ಕೆಲವರಿಂದ ಸಹಿ: ಕೊನೆಗೆ ಸಭೆಗೆ ಬಂದಿದ್ದ ಅರ್ಧದಷ್ಟು ರೈತರು ಈ ತೀರ್ಮಾನಕ್ಕೆ ಒಪ್ಪಿ ಸಹಿ ಮಾಡಿ ಹೋದರೆ ಇನ್ನೂ ಕೆಲವರು ಇದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಜಮೀನು ಕಳೆದುಕೊಂಡು ಇವರು ಕೊಡುವ ಅಲ್ಪ ಸ್ವಲ್ಪ ಹಣಕ್ಕೆ ಬೇರೆ ಕಡೆ ಜಮೀನು ಕೊಳ್ಳಲು ಸಾಧ್ಯವಿಲ್ಲ. ನಮ್ಮ ಜೀವನ ಹೇಗೆ ನಡೆಸುವುದು ಎಂದು ಆಕ್ಷೇಪ ವ್ಯಕ್ತಪಡಿಸಿ ಸಹಿ ಮಾಡದೆ ಇರಲು ನಿರ್ಧರಿಸಿ ಹಿಂತಿರುಗಿದರು.
ಸಚಿವರ ಗೈರಿಗೆ ಅಸಮಾಧಾನ: ಸಭೆಗೆ ಬಂದಿದ್ದ ಹೆಸರು ಹೇಳರು ಇಚ್ಛಿಸದ ಕೆಲ ರೈತರು ಮಾತನಾಡುತ್ತ ಇಂತಹ ಮಹತ್ವದ ಸಭೆಗೆ ಕಾನೂನು ಸಚಿವರು ಆಗಿರುವಂತಹ ಶಾಸಕ ಟಿ.ಬಿ.ಜಯಚಂದ್ರ ಗೈರು ಹಾಜರಾಗಿದ್ದಾರೆ.
ಅವರು ಈ ಸಭೆಗೆ ಬರಬೇಕಾಗಿತ್ತು ಅವರೊಡನೆ ನಾವು ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತಿದ್ದೆವು. ಅವರು ಮನಸ್ಸು ಮಾಡಿದರೆ ಇನ್ನೂ ಹೆಚ್ಚಿನ ಪರಿಹಾರ ದೊರಕಿಸಿ ಕೊಡಬಹುದಾಗಿತ್ತು ಎಂದು ತಿಳಿಸುತ್ತ, ನಾವು ಅವರಿಗೆ ಮತ ನೀಡಿದ್ದೇವೆ. ಅವರು ಇಂತಹ ಮಹತ್ವದ ಸಭೆಗೆ ಬರದೆ ಕೇವಲ ಅಧಿಕಾರಿಗಳೊಂದಿಗೆ ನಾವು ಹೇಗೆ ಒಡಂಬಡಿಕೆ ಮಾಡಿಕೊಳ್ಳಲಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅನಿತಾ, ತಹಸೀಲ್ದಾರ್ ಕುಲಕರ್ಣಿ, ಸಬ್‌ರಿಜಿಸ್ಟಾರ್, ಕಂದಾಯ ನಿರೀಕ್ಷಕ, ಜುಂಜೇಗೌಡ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

