ಸುದ್ದಿ ಸಂಕ್ಷೇಪ
ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ
ತುಮಕೂರು: ಇಲ್ಲಿಗೆ ಸಮೀಪದ ಊರುಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧಾನ್ ಫೌಂಡೇಷನ್ನಿಂದ ರಚಿತವಾಗಿರುವ ಚಿಲುಮೆ ಮಹಿಳಾ ಕಳಂಜಿಯಂ ಒಕ್ಕೂಟ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಆಶ್ರಯದಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷ ಎ.ಬಿ. ಮಂಜುನಾಥ್ ನೆರವೇರಿಸಿ ಮಾತನಾಡಿ ಸಮಾಜದಲ್ಲಿ ಸಮಸ್ಯೆಗಳು ಅನೇಕ ತರ ಇರುತ್ತದೆ. ಆದರೆ ಕಣ್ಣಿನ ಕಾಯಿಲೆಯಿಂದ ಉಂಟಾಗುವ ಸಮಸ್ಯೆ ಮಾತ್ರ ಊಹಿಸಿಕೊಳ್ಳಲು ಕಷ್ಟ ಎಂದರು. ಇಂತಹ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಧಾನ್ ಪೌಂಡೇಷನ್ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಇದೇ ಸಂದರ್ಭದಲ್ಲಿ ಪ್ರಶಂಸಿಸಿದರು. ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಿಚಾ ಶರ್ಮ ಮಾತನಾಡಿ ದೃಷ್ಟಿ ಎನ್ನುವುದು ಮಾನವನ ಕಲಿಕೆಯ ಅವಿಭಾಜ್ಯ ಅಂಗವಾಗಿದೆ. ಪ್ರಪಂಚದಲ್ಲಿನ ವಿಸ್ಮಯಗಳನ್ನು ಆಸ್ವಾಧಿಸುವಲ್ಲಿ ತನ್ನದೇ ಪಾತ್ರ ವಹಿಸುತ್ತದೆ. ದೃಷ್ಟಿಯನ್ನು ಹೆಚ್ಚಿಸಿಕೊಳ್ಳಲು ಹಸಿರುಭರಿತ ತರಕಾರಿ ಸೊಪ್ಪು, ಮೊಳಕೆ ಭರಿತ ಧಾನ್ಯಗಳು ಮತ್ತು ಎ ವಿಟಮಿನ್ ಉಳ್ಳ ಆಹಾರ ವಸ್ತುಗಳ ಸೇವನೆ ಅತ್ಯವಶ್ಯ ಎಂದರು. ಪೆರಿಗಮ್, ಕ್ಯಾಟರಾಕ್ಟ್, ಗ್ಲಾಕೋಮಾದಂತಹ ಕಾಯಿಲೆಗಳು, ಇತರೆ ಕಣ್ಣಿನ ಯಾವುದೇ ಸಮಸ್ಯೆಗಳಿಗೆ ಜನರು ಮೌಢ್ಯಯುಕ್ತ ಚಿಕಿತ್ಸೆ ನೀಡದೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಎಂದರು. 99 ಅರ್ಹ ರೋಗಿಗಳನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ಉಚಿತ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು. ಶಿಬಿರದ ಅಧ್ಯಕ್ಷತೆಯನ್ನು ಚಿಲುಮೆ ಮಹಿಳಾ ಕಳಂಜಿಯಂ ಒಕ್ಕೂಟದ ಅಧ್ಯಕ್ಷೆ ರೇಖಾ ವಹಿಸಿದ್ದರು. ದಾನ್ ಸಿಬ್ಬಂದಿ ಶಶಿಧರ್ ನಿರೂಪಿಸಿದರು. ಪುಟ್ಟರಾಜು ಟಿ.ಎನ್. ಸ್ವಾಗತಿಸಿದರು. ಸತೀಶ್ ವಂದಿಸಿದರು. ಶಂಕರ ಕಣ್ಣಿನ ಆಸ್ಪತ್ರೆಯ ಅಧಿಕಾರಿ ಶಿವಪ್ರಕಾಶ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ, ಚಿಲುಮೆ ಮಹಿಳಾ ಕಳಂಜಿಯಂ ಒಕ್ಕೂಟದ ಉದ್ಯಮ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಹಲ್ಲೆ ಮಾಡಿದ್ದಕ್ಕೆ ದಂಡ ಆದೇಶ
ತುರುವೇಕೆರೆ: ತಾಲೂಕಿನ ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ನೀರಗುಂದದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಎಂಎಫ್ಸಿ ನ್ಯಾಯಾಲಯ ಆಪಾದಿತರಿಗೆ ದಂಡ ವಿಧಿಸಿದೆ. ನೀರಗುಂದದ ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ ಇಂದ್ರಕುಮಾರ್ ಹಾಗೂ ಅವರ ಕುಟುಂಬದ ಮೇಲೆ ಕಳೆದ 9-1-11 ರಂದು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸತೀಶ್, ಅರುಣ್, ಕಾಂತರಾಜು, ದೊಡ್ಡಮ್ಮ, ಕೃಷ್ಣಪ್ಪ, ಬಸವರಾಜು, ಮಹೇಶ್, ರಮೇಶ್ ಎಂಬುವರು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದು ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ಇಂದ್ರಕುಮಾರ್ ಅವರ ಮೇಲೆ ಹಲ್ಲೆ ಮಾಡಲಾಗಿತ್ತು.
ಈ ಪ್ರಕರಣ ಸಂಬಂಧ ವಿಚಾರಣೆ ನಡೆದು ಮೇಲ್ಕಂಡ ಆರೋಪಿಗಳು ಹಲ್ಲೆ ಮಾಡಿದ್ದು ಸಾಕ್ಷಾಧಾರ ಸಹಿತ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪುಟ್ಟಸ್ವಾಮಿಯವರು ಆರೋಪಿಗಳಿಗೆ ತಲಾ 2000 ರು.ಗಳ ದಂಡವನ್ನು ವಿಧಿಸಿ ಆದೇಶಿದ್ದಾರೆ. ದಂಡ ತೆರಲು ವಿಫಲವಾದಲ್ಲಿ 2 ತಿಂಗಳು ಸಾದಾ ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ಲಕ್ಷ್ಮೀದೇವಿ ತಿಳಿಸಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿರುವವರಲ್ಲಿ ಈರ್ವರು ಶಿಕ್ಷಕರು ಇದ್ದಾರೆ. ದಂಡಿನಶಿವರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಸಾದ್ ಪ್ರಕರಣ ದಾಖಲಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

