ಸುದ್ದಿ ಸಂಕ್ಷೇಪ
ಸಾಲದ ಬಾಧೆ; ರೈತ ಆತ್ಮಹತ್ಯೆ
ಶಿರಾ: ಸಾಲದ ಬಾಧೆ ತಾಳಲಾರದೆ ತಾಲೂಕಿನ ಮೇಲ್ಕುಂಟೆ ಗೊಲ್ಲಹಳ್ಳಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಯರಾಮರೆಡ್ಡಿ(40) ಮೃತಪಟ್ಟ ದುರ್ದೈವಿ. ಈತ ಮಗಳ ಮದುವೆ ಹಾಗೂ ಬೋರ್ವೆಲ್ಗಳನ್ನು ಕೊರೆಸಲೆಂದು ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದು ವಿಷ ಸೇವಿಸಿದ್ದಾನೆ ಎನ್ನಲಾಗಿದೆ. ಶಿರಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತಹಶೀಲ್ದಾರ್ ಕುಲಕರ್ಣಿ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿ ಸರ್ಕಾರದಿಂದ ಬರುವ ಪರಿಹಾರವನ್ನು ಶೀಘ್ರ ತಲುಪಿಸುವುದಾಗಿ ತಿಳಿಸಿದ್ದಾರೆ.
ಹೊಸ ಮದ್ಯದಂಗಡಿ ಲೈಸೆನ್ಸ್ಗೆ ವಿರೋಧ
ತುಮಕೂರು: ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವ ಸರ್ಕಾರದ ಚಿಂತನೆಗೆ ತಮ್ಮ ವಿರೋಧವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ತುಮಕೂರಿನ ಸಮೀಪದ ಅರೆಗುಜ್ಜನಹಳ್ಳಿ ಹಾಗೂ ಹಿರೇಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ಥಾಪಿಸಲಾಗಿರುವ ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನಾವು ಜನ-ಜಾಗೃತಿ ವೇದಿಕೆಯಿಂದ ಸರ್ಕಾರ ಹೊಸ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಆಗ್ರಹಿಸಿದ್ದೇವೆ. ಬಾರ್, ಹೊಸ ಮದ್ಯದಂಗಡಿಗೆ ಹೊಸದಾಗಿ ಅನುಮತಿ ನೀಡುವುದು ತಪ್ಪು. ಹೊಸ ಮದ್ಯದಂಗಡಿ ತೆರೆಯಲು ಪ್ರೋತ್ಸಾಹಿಸುವ ಸರ್ಕಾರದ ಈ ಚಿಂತನೆ ಮತ್ತೆ ಮದ್ಯಪಾನ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ವಿಶ್ಲೇಷಿಸಿದರು.
ಚೆನ್ನಕಲ್ ಗ್ರಾಮದ ಮೀಸಲು ಅರಣ್ಯದಲ್ಲಿ ಉರುಳಿಗೆ ಸಿಲುಕಿ ಚಿರತೆ ಸಾವು
ಬೈಲುಕುಪ್ಪೆ: ಉರುಳಿಗೆ ಸಿಕ್ಕಿ ಗಂಡು ಚಿರತೆಯೊಂದು ಮೃತಪಟ್ಟಿರುವ ಘಟನೆ ಚೆನ್ನಕಲ್ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲಿ ಜರುಗಿದೆ.
ಮಂಜುನಾಥ ಎಂಬವರ ಜಮೀನಿನ ಸರ್ವೆ ನಂ 30ರ ತಂತಿ ಬೇಲಿಗೆ ಯಾರೊ ಸ್ಕೂಟರ್ ಬ್ರೇಕ್ ಕೇಬಲ್ ವೈರ್ನಿಂದ ಉರುಳು ಹಾಕಿದ್ದರು. ಅರಣ್ಯದಿಂದ ಜಮೀನಿನ ಕಡೆಗೆ ಬಂದ ಚಿರತೆಯ ಉರುಳಿಗೆ ಸಿಕ್ಕಿಹಾಕಿಕೊಂಡು ಗುರುವಾರ ರಾತ್ರಿ ಮೃತಪಟ್ಟಿದೆ. ಶುಕ್ರವಾರ ಬೆಳಗ್ಗೆ ದಿನಗೂಲಿ ನೌಕರ ರಾಮಯ್ಯ ಕಾಡಿಗೆ ಬರುತ್ತಿದ್ದ ವೇಳೆ ಆ ಜಮೀನಿನ ಬೇಲಿ ಪಕ್ಕದಲ್ಲಿ ಚಿರತೆ ಸತ್ತಿರುವುದನ್ನು ಕಂಡು, ತಕ್ಷಣ ಕೊಪ್ಪ ಸರ್ಕಲ್ ಉಪ ಅರಣ್ಯಾಧಿಕಾರಿ ರವೀಂದ್ರ ಅವರಿಗೆ ದೂರು ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಡಾ.ಉಮಾಶಂಕರ್, ಹುಣಸೂರಿನ ವಲಯ ಅರಣ್ಯಾಧಿಕಾರಿ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು. ಡಾ. ಉಮಾಶಂಕರ್ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಉಪ ಸಂರಕ್ಷಣಾಧಿಕಾರಿ ವಿಜಯಕುಮಾರ್ ಮಾತನಾಡಿ, ಯಾರೋ ಹಂದಿಗೆ ಉರುಳು ಹಾಕಿರಬಹುದೆಂದು ತಿಳಿಸಿದ್ದು, ಆದರೆ ಆ ಜಮೀನಿನಲ್ಲಿ ಯಾವ ಬೆಳೆಯು ಇರಲಿಲ್ಲ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

