ಗಡಿ ಭಾಗದಲ್ಲಿ ಚೆಕ್ ಡ್ಯಾಮ್ ನಿರ್ಮಿಸಿ ಆಂಧ್ರದ ಕೆಲ ಕೆರೆಗಳಿಗೆ ನೀರು: ಶಾಸಕ ರಾಜಣ್ಣ ಗಮನಕ್ಕೆ
ಕ.ಪ್ರ. ವಾರ್ತೆ ಮಧುಗಿರಿ ಜೂ.22
ತಾಲೂಕಿನ ದೊಡ್ಡೇರಿ ಹೋಬಳಿ ಆಂಧ್ರದ ಗಡಿ ಪ್ರದೇಶಕ್ಕೆ ಹೊಂದಿರುವ ಸಜ್ಜೇಹೊಸಳ್ಳಿ-ಕಿತ್ತಗಳಿ ಗ್ರಾಮಗಳ ಗಡಿ ಭಾಗದಲ್ಲಿ ಆಂಧ್ರದವರು ಚೆಕ್ ಡ್ಯಾಮ್ ನಿರ್ಮಿಸಿಕೊಂಡು ಮಳೆಗಾಲದಲ್ಲಿ ಬೀಳುವ ರಾಜ್ಯದ ಪಾಲಿನ ನೀರನ್ನು ರಾಜರೋಷವಾಗಿ ಆಂಧ್ರದ ಕೆಲ ಕೆರೆಗಳಿಗೆ ತುಂಬಿಸುವ ಮಾರ್ಗ ವೀಕ್ಷಿಸಿದ ಶಾಸಕ ಕೆ.ಎನ್.ರಾಜಣ್ಣ ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ಕ್ಷೇತ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳ ಜೊತೆ ಆಗಮಿಸಿದ್ದಾಗ ರೈತರು ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಕೆ.ಎನ್.ರಾಜಣ್ಣ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಆಂಧ್ರದ ಗಡಿ ಭಾಗದಲ್ಲಿ ಅಕ್ರಮ ಚೆಕ್ ಡ್ಯಾಂ ನಿರ್ಮಿಸಿ ಮಳೆಗಾಲದಲ್ಲಿ ಬೀಳುವ ರಾಜ್ಯದ ಪಾಲಿನ ನೀರನ್ನು ಆಂಧ್ರದ ಕೆಲ ಕೆರೆಗಳಿಗೆ ತುಂಬಿಸಲು ಹುನ್ನಾರ ನಡೆಸಿದ್ದು, ಆಂಧ್ರ ಪ್ರದೇಶದವರು 8 ಕಿ.ಮೀ.ದೂರ ಕೆರೆಗಳಿಗೆ ನೀರು ಹರಿಸಿ ಕೊಳ್ಳುತ್ತಿರುವುದನ್ನು ಶಾಸಕ ರಾಜಣ್ಣ ಕಣ್ಣಾರೆ ಕಂಡು ಕಳವಳ ವ್ಯಕ್ತಪಡಿಸಿದರು.
ಶುದ್ಧ ನೀರಿಲ್ಲ: ಆಂಧ್ರದ ಮಡಕಶಿರಾ ತಾಲೂಕಿನ ಅಗಳಿ ಕೆರೆ ಪ್ರದೇಶದಲ್ಲಿ 4 ಕಿ.ಮೀ.ಪೀಡರ್ ಕಾಲುವೆಯಲ್ಲಿ ಸಂಚರಿಸಿದಾಗಿ ಚೆಕ್ ಡ್ಯಾಂ ನಿರ್ಮಾಣವಾಗಿರುವುದು ಕಂಡು ಬಂದಿದೆ. ಈಗ್ಗೆ ಸುಮಾರು ವರ್ಷಗಳ ಹಿಂದೆಯೇ ಅಗಳಿ ಸುತ್ತಮುತ್ತಲ ಗ್ರಾಮಸ್ಥರು ಪೊಲೀಸರ ಸಹಕಾರದೊಂದಿಗೆ ಪೂರ್ವಯೋಜಿತವಾಗಿ ಈ ಚೆಕ್ಯ ಡ್ಯಾಂ ನಿರ್ಮಿಸಿದ್ದಾರೆ ಏನ್ನಲಾಗಿದ್ದು, ಮಳೆಗಾಲದಲ್ಲಿ ಬಿದ್ದ ನೀರು ಕಾಲುವೆ ಮೂಲಕ ಆಂಧ್ರ ಕೆರೆಗಳಿಗೆ ಹರಿದು ಹೋಗುತ್ತದೆ. ನಮ್ಮ ಬೆಳೆಗೆ ನೀರಿಲ್ಲದೆ ಪರದಾಡುತ್ತಿದ್ದು ಭೂಮಿಯಲ್ಲಿ ನೀರು ಇಂಗದಿರುವ ಕಾರಣ ಅಂತರ್ಜಲ ಕೂಡ ಬತ್ತಿ ಹೋಗಿ ನಮ್ಮ ಭಾಗದಲ್ಲಿ ಶುದ್ಧ ಕುಡಿವ ನೀರಿಲ್ಲ, ನಮ್ಮ ದುಃಖ ದುಮ್ಮಾನ ಆಲಿಸುವವರಿಲ್ಲ, ಆದ್ದರಿಂದ ಸುವರ್ಣಮುಖಿ ನದಿಗೆ ಅಡ್ಡಲಾಗಿ ಸಣ್ಣ, ಪುಟ್ಟ ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ತಾವು ಶಾಶ್ವತ ಪರಿಹಾರ ಒದಗಿಸಿ ಕೊಡಬೇಕು ಎಂದು ಶಾಸಕ ರಾಜಣ್ಣ ಅವರಲ್ಲಿ ರೈತರು, ಕೂಲಿ ಕಾರ್ಮಿಕರು ಮನವಿ ಮಾಡಿದರು.
ಹೋರಾಟ: ನಂತರ ರೈತರನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜಣ್ಣ, ನೀರಿಗೆ ಹೋರಾಟ ಮಾಡಬೇಕಾದ ಕಾಲ ಬರುತ್ತದೆ ಎಂಬುದನ್ನು ಕೇಳಿದ್ದೆ, ಆದರೆ ಈಗ ಪ್ರತ್ಯಕ್ಷವಾಗಿ ಕಂಡಿದ್ದೇನೆ. ಈ ಭಾಗದಲ್ಲಿ ಬಿದ್ದ ನೀರನ್ನು ಬಳಸುವುದು ನಮ್ಮ ಹಕ್ಕು.
ಹಾಗಾಗಿ ಇನ್ನು ಮುಂದೆ ನೆರೆ ರಾಜ್ಯದ ಕೆರೆಗಳಿಗೆ ನೀರು ಹರಿಯಲು ಅವಕಾಶ ಕೊಡುವುದಿಲ್ಲ. ತಕ್ಷಣ ಈ ಭಾಗದಲ್ಲಿ ಸುವರ್ಣಮುಖಿ ನದಿ ಸೇರಿದಂತೆ ಅಗತ್ಯವಿರುವ ಕಡೆ ಚೆಕ್ ಡ್ಯಾಂ ನಿರ್ಮಿಸಿ ಪೂರಕ ಕಾಲುವೆಗಳನ್ನು ಪುನಶ್ಚೇತನಗೊಳಿಸಿ ನಮ್ಮ ಪಾಲಿನ ನೀರು ಪೋಲಾಗದಂತೆ ಮುತುವರ್ಜಿ ವಹಿಸುವುದಾಗಿ ರಾಜಣ್ಣ ಭರವಸೆ ನೀಡಿದರು. ಜಿ.ಪಂ.ಎಇಇ ಲೋಕೇಶ್ ಮತ್ತು ಎಂಜಿನಿಯರಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

