ತುಮಕೂರು

ಪಕ್ಷಿಧಾಮದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಶಿಕಾರಿ

Published On :

ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ   ತುಮಕೂರು   ಜೂ. 23
ತುಮಕೂರಿನ ಕೂಗಳತೆ ದೂರದ ಭೀಮಸಂದ್ರ ಕೆರೆಯ ಬಗ್ಗುಡದ ನೀರಿನಲ್ಲಿ ಸದ್ದಿಲ್ಲದೆ ಹುಟ್ಟಿಕೊಂಡಿರುವ ಪಕ್ಷಿಧಾಮ ಈಗ ಬೇಟೆಗಾರರ ಕಂಗಣ್ಣಿಗೆ ಗುರಿಯಾಗಿದೆ.
ಅಕ್ಕಪಕ್ಕದವರು ಹಾಗೂ ಬೇರೆ ಬೇರೆ ಕಡೆಗಳಿಂದ ಬರುವವರು ಬಂದೂಕುಗಳಿಂದ ಮೀನು ಶಿಕಾರಿ ಮಾಡುತ್ತಿರುವುದರಿಂದ ಅಪರೂಪದ ದೇಶಿ ಹಾಗೂ ವಿದೇಶಿ ಹಕ್ಕಿಗಳು ಸಾವನ್ನಪ್ಪುತ್ತಿವೆ.
ಜನರ ಬಾಯಲ್ಲಿ ಪಕ್ಷಿಧಾಮವೆಂದೇ ಕರೆಸಿಕೊಳ್ಳುವ ಈ ಜಾಗ ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳಿದ್ದು ಈ ಕೂಡಲೇ ಇದನ್ನು ಅಭಿವೃದ್ಧಿಪಡಿಸಿ, ಪಕ್ಷಿ ಶಿಕಾರಿಗೆ ಕಡಿವಾಣ ಹಾಕಬೇಕೆಂಬ ಕೂಗು ಕೇಳಿ ಬರುತ್ತಿದೆ. ಎಲ್ಲಕ್ಕೂ ಮಿಗಿಲಾಗಿ ಅಪರೂಪದ ಪಕ್ಷಿಗಳು ಬೀಡು ಬಿಟ್ಟಿರುವ ಈ ಜಾಗವನ್ನು ಪಕ್ಷಿಧಾಮವೆಂದು ನಾಮಕರಣ ಮಾಡುವಂತೆ ಪರಿಸರವಾದಿಗಳಿಂದ ಬೇಡಿಕೆಯೂ ಹೆಚ್ಚಾಗುತ್ತಿದೆ.
ದೇಶೀಯ ಹಾಗೂ ವಿದೇಶಿಯ 100 ಕ್ಕೂ ಹೆಚ್ಚು ಅಪರೂಪದ ಪಕ್ಷಿ  ಪ್ರಬೇಧಗಳು ಇಲ್ಲಿ ನೆಲೆ ನಿಂತಿವೆ. ಪ್ರತಿ ದಿನ ಕನಿಷ್ಠ 80 ಕ್ಕೂ ಹೆಚ್ಚು ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಇನ್ನು ಚಳಿಗಾಲದಲ್ಲಂತೂ 100 ಕ್ಕೂ ಹೆಚ್ಚು ವಿದೇಶಿ ಹಕ್ಕಿಗಳ ಕಲರವ ಈ ಬಗ್ಗುಡದ ನೀರಿನಲ್ಲಿ ಕಾಣ ಸಿಗುತ್ತಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈ ಕೆರೆ ಕಲುಷಿತಗೊಂಡಿದೆ.
ವಲಸೆ ಬರುತ್ತೆ: ಯೂರೋಪ್, ಏಷ್ಯಾ ಖಂಡ ಹಾಗೂ ಉತ್ತರ ಭಾರತದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ. ಜತೆಗೆ ಸ್ಥಳೀಯ ಪಕ್ಷಿಗಳು ಸೇರಿ ಈ ಬಗ್ಗಡದ ನೀರಿನಲ್ಲೂ ಪಕ್ಷಿಧಾಮ ಸದ್ದಿಲ್ಲದೆ ಹುಟ್ಟಿಕೊಂಡಿದೆ.
ವಿದೇಶಿ ಹಕ್ಕಿಗಳಾದ ಶೋವಲರ್,  ಗಾರ್ಗೆನಿ, ಕ್ರೇಕ್, ಪಿಂಟೈಲ್, ಸೂಜಿ ಬಾಲದ ಬಾತು ಜತೆಗೆ ಸ್ಥಳೀಯ ಪಕ್ಷಿಗಳಾದ ಬಣ್ಣದಕೊಕ್ಕರೆ, ಹಜ್ಜಾರ್ಲೆ, ನೀರು ಕಾಗೆ, ನಾಮದ ಕೋಳಿ, ಹೈಬಿಸ್, ಬಾನಕ್ಕಿಗಳು, ಗೀಜಗ ಸೇರಿದಂತೆ 100 ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳು ಈ ಕೆರೆಯಲ್ಲಿ ಕಾಣಿಸಿಕೊಂಡಿವೆ.
ಕೊಳಚೆ ನೀರು: ಸುಮಾರು 50 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ 16 ಎಕೆರೆಯಲ್ಲಿ ನೀರು ಶುದ್ಧೀಕರಿಸುವ ಘಟಕ ಸ್ಥಾಪಿಸಲಾಗಿದೆ. ತುಮಕೂರಿನಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ 20 ಮಿಲಿಯನ್ ಲಕ್ಷ ಲೀಟರ್ ನೀರನ್ನು ಟರ್ಬೈನ್ಗಳ ಮೂಲಕ ಶುದ್ಧೀಕರಿಸಿ ಭೀಮಸಂದ್ರದ ಕೆರೆಗೆ ಬಿಡಬೇಕು. ಆ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಬೇಕೆಂದು ಯೋಜನೆ ರೂಪಿಸಲಾಗಿತ್ತು. 1999 ರಲ್ಲಿ ಈ ಶುದ್ಧೀಕರಣ ಘಟಕಕ್ಕೆ ಕೆರೆ ಅಂಗಳವನ್ನು ಆಯ್ಕೆ ಮಾಡಿಕೊಳ್ಳಲಾಯಿತು. 2004 ರಲ್ಲಿ ಈ ಕಾಮಗಾರಿ ಪೂರ್ಣಗೊಂಡಿತು. ಆದರೆ ನಗರಸಭೆಯವರು ವಿದ್ಯುತ್ ಹೆಚ್ಚಾಗಿ ಖರ್ಚಾಗುತ್ತೆ ಅಂತಾ ಕೇವಲ 5-6 ಟರ್ಬೈನ್ಗಳನ್ನು ಬಳಸುತ್ತಿರುವುದರಿಂದ ಸರಿಯಾಗಿ ನೀರು ಶುದ್ಧಿಯಾಗದೆ ಕೊಳಚೆ ನೀರು ಭೀಮಸಂದ್ರ ಕೆರೆ ಸೇರುತ್ತಿದೆ. ಈ ನೀರನ್ನು ವ್ಯವಸಾಯಕ್ಕೂ ಬಳಸದೇ ಇರುವುದರಿಂದ ಈ ನೀರು ಬಗ್ಗಡವಾಗಿದೆ.
ಹೀಗಾಗಿ 1200 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಉಪಯೋಗವಾಗಬೇಕಾಗಿದ್ದ ಈ ನೀರನ್ನು ಯಾರೂ ಬಳಸದೆ ಇದೊಂದು ಜೌಗು ಪ್ರದೇಶವಾಗಿದೆ.  ದೇಶೀಯ ಮತ್ತು ವಿದೇಶಿ ಹಕ್ಕಿಗಳಿಗೆ ಈ ಜೌಗು ಪ್ರದೇಶವೇ ಹೆಚ್ಚು ಸೂಕ್ತವಾಗಿದೆ. ಅಲ್ಲದೇ ಈ ಬಗ್ಗುಡದ ನೀರಿನಲ್ಲಿ ಮೀನು ಕೃಷಿಗಾಗಿ ಆನೆ ಮತ್ತು ಜಿಲೇಬಿ  ಎಂಬ ಎರಡು ರೀತಿಯ ವಿದೇಶಿ ಮೀನನ್ನು ಬಿಡಲಾಗಿದೆ. ಈ ಪಕ್ಷಿಗಳು ಈ ಎರಡು ಮೀನುಗಳನ್ನು ತಿಂದು ಜೀವಿಸುತ್ತದೆ.
ಒಟ್ಟಾರೆಯಾಗಿ ಈ ಅಪರೂಪದ ಪಕ್ಷಿ ಸಂಕುಲನವನ್ನು ರಕ್ಷಿಸಿ ಪೋಷಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂಬುದು ಪರಿಸರವಾದಿಗಳ ಆಂಬೋಣವಾಗಿದೆ.


ಮುಖ್ಯಾಂಶಗಳು...
1. ಸದ್ದಿಲ್ಲದೆ ನಡೆಯುತ್ತಿದೆ ಪಕ್ಷಿ ಬೇಟೆ
2. 100 ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು
3.ಪಕ್ಷಿ ವೀಕ್ಷಣೆಯ ಗೋಪುರ ಬೇಕಾಗಿದೆ
4.ಅಧಿಕೃತವಾಗಿ ಪಕ್ಷಿಧಾಮ ಘೋಷಣೆಯಾಗಬೇಕು
5. ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು
6. 50 ಎಕರೆ ಕೆರೆಯಲ್ಲಿ ಹುಟ್ಟಿಕೊಂಡಿದೆ ಪಕ್ಷಿಧಾಮ
7.ಬಗ್ಗಡದ ನೀರಿನಲ್ಲಿ ಪ್ರತಿದಿನ ಹಕ್ಕಿಯ ಚಿಲಿಪಿಲಿ
8.ಯೂರೋಪ್, ಏಷ್ಯಾ, ಉತ್ತರ ಭಾರತದ ಪಕ್ಷಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.