ತುಮಕೂರು

ಗ್ರಾಮಲೆಕ್ಕಿಗನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ

Published On :

ಕ.ಪ್ರ. ವಾರ್ತೆ    ಕುಣಿಗಲ್    ಜೂ.24
ಮೃತಪಟ್ಟ ಸಣ್ಣಹಿಡುವಳಿದಾರರ ಬೆಳೆ ಪರಿಹಾರ ಹಣವನ್ನು, ಸುಳ್ಳು ದಾಖಲೆ ನೀಡಿ ಲಪಟಾಯಿಸಿದ್ದ, ಗ್ರಾಮಲೆಕ್ಕಿಗನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ನಿರೀಕ್ಷಕರು ಸೂಚಿಸಿದ ಘಟನೆ ಸೋಮವಾರ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ನಡೆಯಿತು.
ಪಟ್ಟಣದ ಕಂದಾಯಭವನದಲ್ಲಿ ಲೋಕಾಯುಕ್ತ ನಿರೀಕ್ಷಕ ಗೌತಮ್, ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ಕಾಮನಹಳ್ಳಿ ಗ್ರಾಮದ ಭೀಮರಾವ್ ಎಂಬುವವರು ಸಲ್ಲಿಸಿದ ಅಹವಾಲು ಪರಿಶಿಲಿಸಲಾಗಿ, ಸದರಿ ಗ್ರಾಮದ ಗ್ರಾಮಲೆಕ್ಕಿನ ದಯಾನಂದ್, ಭೀಮರಾವ್ ಅವರ ತಾಯಿಯ ಹೆಸರಲ್ಲಿ ಬೆಳೆವಿಮೆ ಪರಿಹಾರ ಹಣ ನೀಡಲಾಗಿದೆ ಎಂದು ಡಿಸೆಂಬರ್ 2012ರಲ್ಲೆ ದಾಖಲೆ ನೀಡಿದ್ದು, ಸದರಿ ಹಣವನ್ನು ಫಲಾನುಭವಿಯೆ ಪಡೆದಿದ್ದಾರೆಂದು ಹೆಬ್ಬೆಟ್ಟಿನ ಗುರುತಿರುವ ಸ್ವೀಕೃತಿ ಪತ್ರ ದಾಖಲಿಸಿದ್ದರು. ಆದರೆ, ಫಲಾನುಭವಿ ನವೆಂಬರ್ ಮಾಹೆಯಲ್ಲಿ ಮೃತಪಟ್ಟಿರುವ ಬಗ್ಗೆ ದಾಖಲೆ ಸಮೇತ ದೂರು ನೀಡಿದ ಮೇರೆಗೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸದರಿ ಗ್ರಾಮಲೆಕ್ಕಿಗರ ವಿರುದ್ಧ ಕ್ರಿಮಿನಲ್ ಮೊಕದಮೆ ಹೂಡುವಂತೆ ಕುಣಿಗಲ್ ಪೊಲೀಸರಿಗೆ ಸೂಚಿಸಿದರು.
ಕೂಡಲೇ ಪಾವತಿಸಿ: ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಪಟ್ಟಣದ ಸಕಾರಿ ಆಸ್ಪತ್ರೆಯಿಂದ ಖಾಸಗಿಯಾಗಿ ಔಷಧ ಖರೀದಿಗೆ ಜೈಲಕ್ಷ್ಮೀ ಮೆಡಿಕಲ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿತಿಂಗಳ ಔಷಧಿ ಬಿಲ್ಗಳನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಪಾವತಿಸಬೇಕಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಬಿಲ್ ನೀಡದೆ.
ಸತಾಯಿಸುತ್ತಿರುವ ಬಗ್ಗೆ ಜಗದೀಶ್ ಎಂಬಾತ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ವಿರುದ್ಧ ದೂರು ಸಲ್ಲಿಸಿದರು. ಸಭೆಯಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶೇಖರನ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಕೂಡಲೆ ಪಾವತಿಸುವಂತೆ ಸೂಚಿಸಿದರು.
ಅರ್ಜಿ ಇತ್ಯರ್ಥ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದ ಕಾರ್ಮಿಕರ ಆರೋಗ್ಯ ತಪಾಸಣೆಗೆ ಇರುವ ಯೋಜನೆಯಾದ ಸ್ವಾಸ್ತ್ಯಭೀಮಾ ಯೋಜನೆಯಡಿಯಲ್ಲಿ ಆಯ್ಕೆಯಾದ ಸಾರ್ವಜನಿಕ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆಗಳು ಕಾರ್ಮಿಕರಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಕಾರ್ಮಿಕ ಮುಖಂಡ ದಿನೇಶ್, ಅರ್ಜಿ ಸಲ್ಲಿಸಿದ ಮೇರೆಗೆ, ಲೋಕಾಯುಕ್ತ ನಿರೀಕ್ಷಕರು ವಿಚಾರಣೆ ನಡೆಸಿದಾಗ ಆಸ್ಪತ್ರೆಯಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಯೋಜನೆ ಕಡೆಗಣಿಸಿಲ್ಲವೆಂಬ ಅಂಶ ಕಂಡಬಂದ ಮೇರೆಗೆ ಅರ್ಜಿಯನ್ನು ಇತ್ಯರ್ಥಗೊಳಿಸಿದರು.
ಕೊತ್ತಗೆರೆ ಹೋಬಳಿಯ ಚನ್ನೇಗೌಡನಪಾಳ್ಯದ ಪ್ರೇಮಲತಾ ಎಂಬಾಕೆಗೆ ವಿಕಲಾಂಗ ವೇತನ ಬರುತ್ತಿದ್ದು, ಎರಡು ತರಹದ ವೇತನ ಪಡೆಯುತ್ತಿದ್ದಾರೆಂದು ತಡೆಹಿಡಿದು ನಂತರ, ಮಜೂರು ಮಾಡಿದ್ದರೂ, ಉಪಖಜಾನೆ ಅಧಿಕಾರಿ ತಡೆಹಿಡಿದಿರುವ ಬಗ್ಗೆ, ಎರಡು ತರಹದ ವೇತನ ಬರುತ್ತಿರುವಾಗ ಉಪಖಜಾನೆ ಅಧಿಕಾರಿಗೆ ಲಂಚ ನೀಡಿದ್ದರಿಂದ ಹಾಗೆಯೆ ನೀಡುತ್ತಿರುವ ಬಗ್ಗೆ ವಿಕಲಾಂಗೆ ಲೋಕಾಯುಕ್ತ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು. ಈ ಮೇರೆಗೆ, ಅರ್ಜಿ ಪರಿಗಣಿಸಿದ ನಿರೀಕ್ಷಕರು ಅಗತ್ಯ ಕ್ರಮ ಕೈಗೊಳ್ಳುವಂತೆ ಉಪಖಜಾನೆ ಅಧಿಕಾರಿ ಹಾಗೂ ತಹಸೀಲ್ದಾರರಿಗೆ ಸೂಚನೆ ನೀಡಿದರು.
 ಲೋಕೋಪಯೋಗಿ ಇಲಾಖೆ ವಶದಲ್ಲಿದ್ದ 85 ಲಕ್ಷ ರು.ಮೌಲ್ಯದ ಮರಳನ್ನು ಇಲಾಖಾಧಿಕಾರಿಗಳು ದುರುಪಯೋಗ ಮಾಡಿದ್ದಾರೆಂದು ವಕೀಲ ಪ್ರಕಾಶ್, ಮಾದಪ್ಪನಹಳ್ಳಿ ಸರ್ವೆ ನಂ.26ರಲ್ಲಿನ ದಲಿತರ ಭೂಮಿಯನ್ನು ಬೇರೆಯವರು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಲಪಟಾಯಿಸಿದ್ದಾರೆಂದು ವೆಂಕಟಸುಬ್ಬಯ್ಯ ದೂರು ಸಲ್ಲಿಸಿದ್ದರು. ಜಿನ್ನಾಗರ ಗ್ರಾಪಂನ ಸಣಬ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಕುಡಿಯಲು ನೀರು ಪೂರೈಕೆ ಮಾಡದ, ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಪರಿವರ್ತಕ ಅಳವಡಿಸಲು ವಿಳಂಬಮಾಡಿದ ಕಾರಣ, ರಾಜೇಗೌಡ ಎಂಬಾತ, ತಾಪಂ ಇಒ, ಬೆಸ್ಕಾಂ ಎಇಇ ವಿರುದ್ಧ ಅರ್ಜಿ ಸಲ್ಲಿಸಿದ್ದು, ಸಮಸ್ಯೆ ನಿವಾರಣೆಗೆ ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸೋಮವಾರ ಒಟ್ಟಾರೆ 17 ಅರ್ಜಿಗಳು ಸಲ್ಲಿಕೆಯಾಗಿದ್ದು, ತಾಲೂಕಿಗೆ ಸಂಬಂಧಿಸಿದಂತೆ ಹಳೇಯ 14 ಅರ್ಜಿಗಳ ಪೈಕಿ 8 ವಿಲೆ ಮಾಡಲಾಗಿದ್ದು, ಉಳಿದ ಆರನ್ನು ಇನ್ನೊಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಲೋಕಾಯುಕ್ತ ನಿರೀಕ್ಷಕ ಗೌತಮ್ ತಿಳಿಸಿದರು. ತಹಸೀಲ್ದಾರ್ ಜಗದೀಶ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.