ತುಮಕೂರು

ತುಮಕೂರಲ್ಲೀಗ ಹಕ್ಕಿಗಳ ಕಲರವ

Published On :

ಕನ್ನಡಪ್ರಭ ವಾರ್ತೆ  ತುಮಕೂರು  ಮಾ.5-
 'ಕೆಸರುಮಣಿನ ಓಡಾಟಗಾರರು' ಎಂದೇ ಜನಜನಿತವಾಗಿರುವ ಥರೇವಾರಿ ಪಕ್ಷಿಗಳ ಕಲರವ ತುಮಕೂರಿನಲ್ಲಿ ಹೆಚ್ಚಾಗುತ್ತಿದೆ.
ಕುಣಿಗಲ್ ಚಿಕ್ಕಕೆರೆ, ದೊಡ್ಡಕೆರೆ, ಮಾರ್ಕೋನಹಳ್ಳಿ ಡ್ಯಾಮ್, ಮಂಗಳ ಡ್ಯಾಮ್, ಗಂಗಸಂದ್ರ ಕೆರೆ, ನಾಗವಲ್ಲಿ ಕೆರೆ, ಭೀಮಸಂದ್ರ ಕೆರೆಗಳಿಗೆ ವಿಶ್ವದ ವಿವಿದ ಭಾಗಗಳಿಂದ ವಿಭಿನ್ನ ಬಗೆಯ ಪಕ್ಷಿಗಳು ಬಂದಿವೆ. ಜಿಲ್ಲೆಯ ಹಿತವಾದ ಹವಾಗುಣ, ವಿಫುಲ ಆಹಾರ ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತಿವೆ. ಕೆರೆ ಅಂಚಿನ ಕೆಸರಿನಲ್ಲಿ ನೀರಿನ ಜೀವಕಳೆಗಳು, ಮೀನು, ಕಪ್ಪೆ, ಮೃದ್ವಂಗಿಗಳನ್ನು ಆಹಾರವಾಗಿ ಈ ಪಕ್ಷಿಗಳು ಭಕ್ಷಿಸುತ್ತವೆ.
ಕಾಮನ್ ಸ್ಯಾಂಡ್ ಪೈಪರ್, ವಡ್ ಸ್ಯಾಂಡ್‌ಪೈಪರ್, ಗ್ರೀನ್ ಸ್ಯಾಂಡ್ ಪೈಪರ್, ಕಾಮನ್ ರೆಡ್ ಶ್ಯಾಂಕ್, ಗ್ರೀನ್ ಶ್ಯಾಂಕ್, ಲಿಟ್ಲ್ ರಿಂಗ್ಡ್ ಪ್ಲೋವರ್, ಪೇಂಟೆಡ್ ಸ್ನೈಪ್, ಗಾಡ್‌ವಿಟ್, ಲಿಟ್ಲ್ ಸ್ಟಿಂಟ್ ಮುಂತಾದ ಹಕ್ಕಿಗಳು ಯೂರೋಪ್, ಸೈಬೇರಿಯಾ, ಉತ್ತರ ಏಷ್ಯಾದಿಂದ ಜಿಲ್ಲೆಗೆ ವಲಸೆ ಬಂದಿವೆ ಎನ್ನುತ್ತಾರೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ. ಗುಂಡಪ್ಪ.
ಆಕಾಶ ನರ್ತನ: ನೀಳ ಸಪೂರ ಕಾಲಿನ, ಉದ್ದ ಕೊಕ್ಕಿನ, ಮಧ್ಯಮ ಗಾತ್ರದ ಈ ವಲಸೆ ಹಕ್ಕಿಗಳು ವೇಗದ, ದೂರದ ಹಾರಾಟಕ್ಕೆ ತಕ್ಕ ರೆಕ್ಕೆಗಳನ್ನು ಹೊಂದಿವೆ. ಕೆಲವು ಒಂಟಿಯಾಗಿ ಓಡಾಡುತ್ತಿದ್ದರೆ ಇನ್ನು ಕೆಲವು ಗುಂಪಿನಲ್ಲಿ ಒಟ್ಟಾಗಿ ಜೆಟ್ ಫೈಟರ್‌ಗಳ ಹಾಗೆ ಒಮ್ಮೇಲೆ ಮೇಲಕ್ಕೆ ಹಾರುತ್ತವೆ. ಗಾಳಿಯಲ್ಲಿ ಗಿರಕಿ ಹೊಡೆದು ಬಿಲ್ಲಿನಂತೆ ಬಾಗಿ, ಮಿಂಚಿನಂತೆ ಬಳುಕಿ, ಆಕಾಶದಲ್ಲಿ ನರ್ತಿಸುತ್ತವೆ. ನೀರಿನ ಮೇಲೆ ಹಾರಾಡುತ್ತಾ ಇತರೆ ಜಲಪಕ್ಷಿಗಳೊಂದಿಗೆ ಜೀವನ ನಡೆಸುತ್ತದೆ ಎನ್ನುತ್ತಾರೆ ಗುಂಡಪ್ಪ
ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಲ್ಲದ ಈ ಪುಟಾಣಿ ಹಕ್ಕಿಗಳು ಕೆರೆಕಟ್ಟೆಗಳು ಮತ್ತು ಗದ್ದೆಯ ಅಂಚುಗಳಲ್ಲಿ ದಿನವಿಡಿ ಕೀಟಗಳನ್ನು ತಿಂದು ಕೀಟ ನಿಯಂತ್ರಣದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಕೆರೆ ಕಟ್ಟೆಗಳಿಗೆ ಕೃಷಿ ತಜ್ಞ ಪದಾರ್ಥಗಳ, ಚರಂಡಿ ನೀರಿನಂಥ ಮಲಿನ ಪದಾರ್ಥಗಳ ಸೇರ್ಪಡೆಯಿಂದ ಇವುಗಳ ಸಂತತಿ ಕಡಿಮೆಯಾಗುತ್ತಿದೆ ಎಂಬುದು ಗುಂಡಪ್ಪ ಅವರ ಕಳವಳ.  ವಲಸೆ ಬರುವ ನೀರು ಹಕ್ಕಿಗಳ ಅಧ್ಯಯನದಲ್ಲಿ ನಿಸರ್ಗ ಸಂಸ್ಥೆ ಪಕ್ಷಿ ವೀಕ್ಷಕ ಟಿವಿಎನ್ ಮೂರ್ತಿ, ಮಲ್ಲಿಕಾರ್ಜುನ್, ವೆಂಕಟೇಶ್ ಉಪಾಧ್ಯಾಯ ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.