ತುಮಕೂರು

ಮತದಾರರ ಪಟ್ಟಿ ಲೋಪಕ್ಕೆ ಅಧಿಕಾರಿಗಳು, ಶಾಸಕರೇ ಹೊಣೆ

Published On :

ತಿಪಟೂರು:  ನಗರಸಭಾ ಚುನಾವಣೆಯಲ್ಲಿ 31ವಾರ್ಡ್‌ಗಳಿಂದ ಅಂದಾಜು 4ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ಮತಪಟ್ಟಿಯಿಂದ ನಾಪತ್ತೆಯಾಗಿರುವುದು ಕಂಡುಬಂದಿದ್ದು, ಇದಕ್ಕೆ ಶಾಸಕರ ಜೊತೆ ಅಧಿಕಾರಿಗಳು ಶಾಮೀಲಾಗಿರಬಹುದೆಂಬ ಅನುಮಾನ ಕಾಣುತ್ತಿದೆ ಎಂದು ತಾಲೂಕು ಕೆಜೆಪಿ ಮುಖಂಡ ಟಿ.ಎಸ್. ಲೋಕೇಶ್ವರ ಟೀಕಿಸಿದರು.
ನಗರದ ಕೆಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯಿಂದ ನೀಡಿರುವ ಮತಪಟ್ಟಿಗಳಲ್ಲಿರುವ ಹೆಸರು, ಮತಗಟ್ಟೆಯಲ್ಲಿ ಅಧಿಕಾರಿಗಳು ಇಟ್ಟುಕೊಂಡಿದ್ದ ಮತಪಟ್ಟಿಗಳಲ್ಲಿ ಕಾಣೆಯಾಗಿರುವುದು ಆಶ್ಚರ್ಯ ಹಾಗೂ ಅನುಮಾನಕ್ಕೆ ಎಡೆಯಾಗಿದೆ. ತಾಲೂಕು ಹಾಗೂ ನಗರಸಭಾ ಚುನಾವಣಾಧಿಕಾರಿಗಳು ಆಡಳಿತ ಪಕ್ಷದ ಜೊತೆ ಶಾಮೀಲಾಗಿ ಮತದಾರರಿಗೆ ಅವಮಾನ ಮಾಡಿದ್ದಾರೆಂಬ ಅನುಮಾನ ಬಲವಾಗಿದೆ. ಈ ಬಗ್ಗೆ ಈಗಾಗಲೆ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿ ತನಿಖೆಗೆ ಒತ್ತಾಯಿಸಲಾಗಿದೆ ಎಂದರು.
ಮತಪಟ್ಟಿಗಳಲ್ಲಾಗಿರುವ ಲೋಪದೋಷಗಳ ಬಗ್ಗೆ ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರೆ ಇದಕ್ಕೆ ನಗರಸಭಾ ಚುನಾವಣಾಧಿಕಾರಿಗಳು ಕಾರಣ ಎನ್ನುತ್ತಾರೆ. ಅವರನ್ನು ಕೇಳಿದರೆ ಬೇರೆ ಅಧಿಕಾರಿಗಳ ಮೇಲೆ ಹೇಳಿ ಜಾರಿಕೊಳ್ಳುತ್ತಾರೆ. ವಾರ್ಡ್ 15 ರಲ್ಲಿ ಸುಮಾರು 250 ಹೆಸರು ನಾಪತ್ತೆಯಾಗಿವೆ. ಹಲವಾರು ವರ್ಷಗಳಿಂದ ಮತದಾನ ಮಾಡುತ್ತಿರುವವರ ಹೆಸರುಗಳೂ ಸಹ ನಾಪತ್ತೆಯಾಗಿವೆ.
ಒಂದೇ ಮನೆಯಲ್ಲಿ ಗಂಡನ ಹೆಸರಿದ್ದರೆ ಪತ್ನಿಯ ಹೆಸರಿಲ್ಲ. ಇವರಿಬ್ಬರದ್ದೂ ಇದ್ದರೆ ಬೇರೆಯವರದ್ದು ಇಲ್ಲ. ನಗರದ ಗಾಂಧಿನಗರದಲ್ಲಿ ಅಲ್ಪಸಂಖ್ಯಾತ ವರ್ಗದವರು ಸಾಕಷ್ಚು ಮತಗಳು ನಾಪತ್ತೆಯಾಗಿರುವುದನ್ನು ನೋಡಿದರೆ, ಚುನಾವಣಾ ಸಿಬ್ಬಂದಿ ವರ್ಗದವರು ತಾಲೂಕು ಜನಪ್ರತಿನಿಧಿಯ ಒತ್ತಡಕ್ಕೆ ಸಿಲುಕಿ ಕಾರ್ಯನಿರ್ವಹಿಸಿದ್ದಾರೆಂಬ ಅನುಮಾನ ಸ್ಪಷ್ಟ ಎಂದರು.
ಸಲಹೆ:  ಇನ್ನು ಮುಂದೆ ಚುನಾವಣೆ ಶಾಖೆಯವರು ಪ್ರತಿ ವಾರ್ಡ್ ಹಾಗೂ ತಾಲೂಕಿನ ಪ್ರತಿ ಗ್ರಾಮಗಳ ಮುಖ್ಯ ಸ್ಥಳಗಳಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಿ, ಬಿಟ್ಟು ಹೋಗಿರುವ ಹೆಸರುಗಳನ್ನು ಸ್ಥಳದಲ್ಲೇ ಸೇರಿಸಿಕೊಳ್ಳುವ ಏರ್ಪಾಟನ್ನು ಕಡ್ಡಾಯವಾಗಿ ಮಾಡಬೇಕೆಂದು ಲೋಕೇಶ್ವರ ಸಲಹೆ ನೀಡಿದರು.
ಕೆಜೆಪಿಯಿಂದ ಆಂದೋಲನ:  ಮುಂದಿನ ಕೆಲ ದಿನಗಳಲ್ಲಿ ತಾಲೂಕು ಕೆಜೆಪಿ ಘಟಕದಿಂದ ಮತಪಟ್ಟಿಗಳನ್ನು ಪಡೆದು, ಹಳ್ಳಿ ಮತ್ತು ನಗರಗಳಲ್ಲಿ ಕೈ ಬಿಟ್ಟು ಹೋಗಿರುವವರ ಹೆಸರುಗಳನ್ನು ಮತದಾನ ಪಟ್ಟಿಗೆ ಸೇರಿಸುವ ಆಂದೋಲವನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಅಕ್ರಮ ಹೊಂದಾಣಿಕೆ:  ನಗರ-ತಾಲೂಕಿನಲ್ಲಿ ಬಿಜೆಪಿ ಶಕ್ತಿ ಅಡಗಿ ಹೋಗಿರುವುದರ ಪರಿಣಾಮ ನಿನ್ನೆ ನಡೆದ ನಗರಸಭಾ ಚುನಾವಣೆಯಲ್ಲಿ ಕೆಜೆಪಿ ಹೆಚ್ಚು ಸೀಟುಗಳನ್ನು ಗೆಲ್ಲಬಾರದೆಂಬ ದುರದ್ದೇಶದಿಂದ ಬಿಜೆಪಿ ಗೆ ಬಲ ಕಡಿಮೆ ಇರುವು ಕೆಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹೊಂದಾಣಿಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಲೋಕೇಶ್ವರ ಲೇವಡಿ ಮಾಡಿದರು.
ನಮ್ಮ ಪಕ್ಷ ಈಗಿನ್ನು ಅಂಬೆಗಾಲಿಟ್ಟಿರುವು ಪಕ್ಷ. ನಾನು ಸಹ ಕೇವಲ 2 ತಿಂಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವೆ. ಜೊತೆಗೆ ನಗರಸಭೆ ಚುನಾವಣೆ ಆತುರವಾಗಿ ಬಂದಿರುವುದಲ್ಲದೆ ಈವರೆಗೂ, ನಗರಸಭೆಯಲ್ಲಿ ಖಾತೆ ತೆರೆಯದ ನಮ್ಮ ಪಕ್ಷ ಕಡಿಮೆ ಅಥವಾ ಹೆಚ್ಚು ಸ್ಥಾನಗಳು ಬಂದರೂ ಕುಗ್ಗಲಾರೆ, ಹಿಗ್ಗಲಾರೆ. ನಾನೊಬ್ಬ ಕ್ರೀಡಾಪಟು ಸಹ ಆಗಿರುವುದರಿಂದ ಫಲಿತಾಶವನ್ನು ಸಮಾನವಾಗಿ ತೆಗೆದುಕೊಳ್ಳುವೆ. ಈ ಚುನಾವಣೆ ಪಕ್ಷಕ್ಕಿಂತ ಹೆಚ್ಚಾಗಿ, ವೈಯಕ್ತಿಕವಾಗಿ ನಡೆಯುವುದರಿಂದ ಮತದಾರರು ನೀಡುವ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.