ತುಮಕೂರು

ದಲಿತರೇ ಮೇಲ್ವರ್ಗದ ಮೊಸಳೆ ಕಣ್ಣೀರಿನ ಬಗ್ಗೆ ಎಚ್ಚೆತ್ತುಕೊಳ್ಳಿ

Published On :

ತುಮಕೂರು: ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಧಿಪತ್ಯ ಸ್ಥಾಪಿಸಿರುವ ಮೇಲ್ವರ್ಗಗಳು ದಲಿತರ ಬಗ್ಗೆ ಕಾಳಜಿ ಇರುವಂತೆ ಸಾಹಿತ್ಯ ಸೃಷ್ಟಿಸಿ ಮೊಸಳೆ ಕಣ್ಣೀರು ಹಾಕುತ್ತಿದ್ದು, ಈ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ಬಾಲಗುರುಮೂರ್ತಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಆಯೋಜಿಸಿದ್ದ ದಲಿತ ಸಾಹಿತ್ಯ ಪರಿಷತ್ ತುಮಕೂರು ಘಟಕ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಕಮಲಬಡ್ಡಿಹಳ್ಳಿ ಮತ್ತು ಡಾ.ಜಿ.ಸಂಜೀವರಾಯ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೇಲ್ವರ್ಗದ ಇಂತಹ ನಕಲಿ ಕಾಳಜಿಯನ್ನು ಮೆಟ್ಟಿ ನಿಲ್ಲುವಂತಹ ಶಕ್ತಿಯನ್ನು ದಲಿತ ಸಾಹಿತ್ಯ  ಪರಿಷತ್ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ಎಲ್ಲಾ ಭಾಷೆಗಳ ಸಾಹಿತ್ಯ ಅಕಾಡೆಮಿಗಳಲ್ಲಿಯೂ ಇಂದು ಮೇಲ್ವರ್ಗದ ಜನರೇ ತುಂಬಿ ತುಳುಕುತಿದ್ದು, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತ ಉದಯೋನ್ಮುಖ ಬರಹಗಾರರ ಕೃತಿಗಳಿಗೆ ಮನ್ನಣೆಯೇ ದೊರೆಯುತ್ತಿಲ್ಲ. ಕಸಾಪಗೆ ಪರ್ಯಾಯವಾಗಿ ಹುಟ್ಟಿಕೊಂಡ ದಲಿತ ಸಾಹಿತ್ಯ ಪರಿಷತ್ತಾದರೂ ಕೆಳವರ್ಗಗಗಳ ಪ್ರತಿಭಾವಂತ ಬರಹಗಾರರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದು ಡಾ.ಬಾಲಗುರುಮೂರ್ತಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ದೊಡ್ಡ ಬರಹಗಾರರಷ್ಟೇ ಆಲ್ಲದೆ ದೊಡ್ಡ ಹೋರಾಟಗಾರರೂ ಆಗಿದ್ದರು. ಆದ್ದರಿಂದ ದಲಿತರ ಹೆಸರಿನಲ್ಲಿ ಒಂದು ಆಂದೋಲನವನ್ನು ಹುಟ್ಟು ಹಾಕಲು ಸಾಧ್ಯವಾಯಿತು ಎಂದು ನುಡಿದರು.
ಎಪ್ಪತ್ತು, ಎಂಭತ್ತರ ದಶಕದಲ್ಲಿನ ಹೋರಾಟಗಳನ್ನು ನೋಡಿದರೆ ಇಂದಿನ ಹೋರಾಟಗಳು ಕಾವು ಕಳೆದುಕೊಳ್ಳುತ್ತಿವೆ ಎಂದೆನಿಸುತ್ತಿದೆ.  ಜಾತಿ, ಉಪಜಾತಿಯ ಹೆಸರಿನಲ್ಲಿ ಒಂದು ಹೋರಾಟವನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಅತಿ ಕೆಳಸ್ತರದ ಸಮುದಾಯಗಳ ನೋವನ್ನು ದಲಿತ ಸಾಹಿತ್ಯ ಸಮರ್ಥವಾಗಿ ಜನತೆಯ ಮುಂದಿಡುವ ಕೆಲಸ ಮಾಡಬೇಕಾಗಿದೆ. ಕೇವಲ ಪಿ.ಹೆಚ್.ಡಿ. ಪದವಿಗಾಗಿ ಅಲೆಮಾರಿ ಸಮುದಾಯಗಳ ಬಗ್ಗೆ ಪ್ರಬಂಧ ಮಂಡಿಸುವುದರಿಂದ ಆ ಸಮುದಾಯಗಳಿಗೆ ಲಾಭವಿಲ್ಲ. ಆ ವರ್ಗಗಳಿಗೆ ಕನಿಷ್ಠ ಶಿಕ್ಷಣ ದೊರೆಯುವಂತಹ ಜಾಗೃತಿಯನ್ನು ಸಾಹಿತ್ಯ ಮೂಡಿಸಬೇಕಾಗಿದೆ ಎಂದು  ಡಾ.ಬಾಲಗುರುಮೂರ್ತಿ ಪ್ರತಿಪಾದಿಸಿದರು.
ಸಾಂಸ್ಕೃತಿಕ ಯಜಮಾನಿಕೆ: ವಿಮರ್ಶಕ ಹಾಗೂ ಉಪನ್ಯಾಸಕ ಡಾ.ರವಿಕುಮಾರ ನಿ.ಹಾ. ಮಾತನಾಡಿ, ತುಮಕೂರು ದಲಿತ ಹೋರಾಟಕ್ಕೆ ಒಂದು ನೆಲೆಯನ್ನು ಒದಗಿಸಿಕೊಟ್ಟ ಪ್ರದೇಶ.ಇಂತಹ ನೆಲದಲ್ಲಿ ದಲಿತ ಸಾಹಿತ್ಯ  ಪರಿಷತ್ ಉದ್ಭವವಾದ ಹಲವಾರು ವರ್ಷಗಳ ನಂತರ ಅದರ ಜಿಲ್ಲಾ ಘಟಕ ಸ್ಥಾಪನೆಯಾಗುತ್ತಿರುವುದು ನಿಜಕ್ಕೂ ಆಶ್ಚರ್ಯವನ್ನು ಉಂಟು ಮಾಡಿದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್, ಶೋಷಿತರ ಧ್ವನಿಯಾಗಿ ಹುಟ್ಟಿಕೊಂಡಂತಹ ದಲಿತ ಸಾಹಿತ್ಯದ ಮುಂದುವರೆದ ಭಾಗವಾಗಿ ಉದಯವಾದ ಬಂಡಾಯ ಸಾಹಿತ್ಯ ಇಂದು ಬೆಳದು ಹೆಮ್ಮರವಾಗಿದೆ. ಆದರೆ ದಲಿತ ಸಾಹಿತ್ಯಗಳ ನಡುವಿನ ಸಾಂಸ್ಕೃತಿಕ ರಾಜಕಾರಣದಿಂದ ದಲಿತ ಸಾಹಿತ್ಯ ಅಂತಹ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ  ಎಂದರು. ಅಧ್ಯಕ್ಷತೆಯನ್ನು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂದಕುಂಟೆ ನಾಗರಾಜಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕಲಾಶ್ರೀ ಡಾ.ಲಕ್ಷಣದಾಸ್, ರಂಗನಿರ್ದೇಶಕರ ಎಚ್.ಎಂ.ರಂಗಯ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಕಮಲ ಬಡ್ಡಿಹಳ್ಳಿ ಹಾಗೂ ಡಾ.ಜಿ.ಸಂಜೀವರಾಯ ಅವರನ್ನು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.