ಎಸ್.ಎಂ. ಕೃಷ್ಣ ದಾರಿ ತಪ್ಪಿಸಲು ಯತ್ನಿಸಿದ್ದ ಜಯಚಂದ್ರ: ಸಂಸದ ಜಿಎಸ್ಬಿ ಆಕ್ರೋಶ
ತುಮಕೂರು: ಬಯಲು ಸೀಮೆಗೆ ಕುಡಿಯುವ ನೀರೊದಗಿಸುವ ಜಿ.ಎಸ್. ಪರಮಶಿವಯ್ಯ ವರದಿ ಜಾರಿಗೆ ಉತ್ಸುಕರಾಗಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನೇ ದಾರಿ ತಪ್ಪಿಸಲು ಇಂದಿನ ಶಿರಾ ಶಾಸಕ ಟಿ.ಬಿ. ಜಯಚಂದ್ರ ಯತ್ನಿಸಿದ್ದರು ಎಂದು ತುಮಕೂರು ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿ.ಬಿ. ಜಯಚಂದ್ರ ಅವರ ದುರ್ಬುದ್ಧಿಗೆ ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣ, ನಿಮಗೆ ಗೊತ್ತಾಗಲ್ಲ ಸುಮ್ಮನಿರಿ ಎಂದು ಕಿಡಿ ಕಾರಿದ್ದರು ಎಂದು ತಿಳಿಸಿದರು. ವಾಟರ್ಗ್ರಿಡ್ ಕೆನಾಲ್ ಯೋಜನೆ ಕಾಲ್ಪನಿಕ ಎಂದು ಪ್ರಚಾರ ಮಾಡಿ, ಯೋಜನೆಗೆ ಕಲ್ಲು ಹಾಕಲು ಯತ್ನಿಸುತ್ತಿರುವ ಜಯಚಂದ್ರ ರಾಜಧಾನಿ ಸೇರಿದಂತೆ ಬಯಲು ಸೀಮೆಯ 9 ಜಿಲ್ಲೆಗಳ 43 ತಾಲೂಕುಗಳ ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ದುರ್ಬುದ್ಧಿಗೆ ಸಾಕ್ಷಿಯಾಗಿದೆ ಎಂದು ಲೇವಡಿ ಮಾಡಿದರು.
ಪರಮಶಿವಯ್ಯ ವರದಿ ಕುರಿತಂತೆ ಸಮೀಕ್ಷೆ ನಡೆಸಲು ಅಂದು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ಕೊಡಿಸಲು ಜಯಚಂದ್ರ ಯತ್ನಿಸಿ ವಿಫಲರಾಗಿದ್ದರು. ಗುರುತ್ವಾಕರ್ಷಣ ಬಲದಿಂದಲೇ ಬಯಲು ಸೀಮೆಗೆ ನೀರು ಹರಿಸಲು ಸಾಧ್ಯ ಎಂದು ಗೊತ್ತಿದ್ದರೂ, ಪೈಪ್ ಮೂಲಕ ನೀರು ಹರಿಸುವುದೇ ಸೂಕ್ತ ಎಂದು ಇಂದಿಗೂ ವಾದ ಮಾಡುತ್ತಿದ್ದಾರೆ. ಇದು ಜಯಚಂದ್ರ ಅವರ ಪೈಪ್ ಲಾಬಿಗೆ ಉದಾಹರಣೆಯಾಗಿದೆ ಎಂದರು. ಎತ್ತಿನ ಹೊಳೆ ಯೋಜನೆ ಪರಮಶಿವಯ್ಯನವರ ವರದಿಯ ಒಂದು ಭಾಗ. ಇದು ಗೊತ್ತಿದ್ದರೂ ಜಯಚಂದ್ರ ವಿನಾ ಕಾರಣ ಕ್ಯಾತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿಎಸ್ಬಿ, ಬಯಲುಸೀಮೆಗೆ ನೀರೊದಗಿಸುವ ವಾಟರ್ಗ್ರಿಡ್ ಕೆನಾಲ್ ಯೋಜನೆ ವಿರೋಧಿಸುವ, ಕಾಲ್ಪನಿಕ ಎಂದೆಲ್ಲಾ ಹೇಳುವ ಜಯಚಂದ್ರ ದಾರ್ಶನಿಕ, ಅತಿ ಬುದ್ಧಿವಂತ ವ್ಯಕ್ತಿ ಎಂದು ಲೇವಡಿ ಮಾಡಿದರು.
ವೆಬ್ಸೈಟ್ನಲ್ಲಿ ಜಯಚಂದ್ರ: ಪಶ್ಚಿಮ ಘಟ್ಟಗಳ ಹಳ್ಳಗಳ ಮೂಲಕ ನೀರೊದಗಿಸುವ ಯೋಜನೆಯ ರೂವಾರಿ ಜಿ.ಎಸ್. ಪರಮಶಿವಯ್ಯ ವರದಿ ವಿರೋಧಿಸುವ, ವರದಿ ಕಷ್ಟ ಸಾದ್ಯ ಎನ್ನುವ ಜಯಚಂದ್ರ, ತಾವೇ ತಮ್ಮ ವೆಬ್ಸೈಟ್ನಲ್ಲಿ ಪಶ್ಚಿಮಘಟ್ಟಗಳ ನೀರಾವರಿ ತಿರುವು ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ ಎಂದು ನಮೂದಿಸಿಕೊಂಡಿರುವುದು ಅವರ ಆಶಾಢಭೂತಿತನಕ್ಕೆ ಸಾಕ್ಷಿಯಾಗಿದೆ ಎಂದು ಬಸವರಾಜು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

