ಡೆಮಾಕ್ರಸಿಯಲ್ಲ, ಡೆವಿಲ್ಕ್ರಸಿ: ಎಚ್.ಎಸ್. ದೊರೆಸ್ವಾಮಿ ಕಿಡಿ
ತುಮಕೂರು: ಡೆಮಾಕ್ರಸಿಯಲ್ಲ. ಡೆವಿಲ್ಕ್ರಸಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಕಿಡಿ ಕಾರಿದರು.
ಅವರು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಧಾನ್ಯ ವರ್ತಕರ ಸಂಘದ ವತಿಯಿಂದ ಬಹುಧಾನ್ಯಸಿರಿ ಕಟ್ಟಡದ ಸಭಾಂಗಣದಲ್ಲಿ ತುಮಕೂರು ನಗರಸಭೆ ನೂತನ ಸದಸ್ಯರಿಗೆ ಏರ್ಪಾಟಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಭಾರತದಲ್ಲಿ ಡೆಮಾಕ್ರಸಿ ಡೆವಿಲ್ಕ್ರಸಿಯಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೊರೆಸ್ವಾಮಿ, ಕೆಲಸ ಮಾಡದ ಜನಪ್ರತಿನಿಧಿಯನ್ನು ಹಿಡಿದು ಕೇಳುವ ಶಕ್ತಿ ಪ್ರಜೆಗಳಿಗಿದೆ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳಾಗುವ ಬದಲು ಪಕ್ಷದ ಪ್ರತಿನಿಧಿಗಳಾಗುತ್ತಿದ್ದಾರೆ. ನಗರಸಭಾ ಸದಸ್ಯರು ಯಾವುದೇ ಪಕ್ಷದಿಂದ ಗೆದ್ದಿರಲಿ, ನಗರಸಭೆ ಪ್ರವೇಶಿಸಿದ ಮೇಲೆ ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಹಿತವಾಗಿರಬೇಕು. ಟೀಂ ವರ್ಕ್ ಮೂಲಕ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಹಾಕಿಕೊಂಡು ತುಮಕೂರು ನಗರಸಭೆಯನ್ನು ರಾಜ್ಯಕ್ಕೆ ಮಾದರಿ ನಗರಸಭೆ ಮಾಡುವಂತೆ ಕರೆ ನೀಡಿದರು.
ರಾಜಕಾರಣಕ್ಕಲ್ಲ: ನಗರದ ನಾಗರಿಕರು ನಗರಸಭಾ ಸದಸ್ಯರನ್ನು ಆಯ್ಕೆ ಮಾಡಿರುವುದು ನಗರದ ಅಭಿವೃದ್ಧಿ ಸಲುವಾಗಿಯೇ ಹೊರತು, ರಾಜಕಾರಣ ಮಾಡುವುದಕ್ಕಲ್ಲ. ನೀವೆಲ್ಲಾ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೆಂಬುದನ್ನು ಮರೆಯಬೇಡಿ. ಜನರ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಡುವ ಮಹತ್ತರ ಹೊಣೆಗಾರಿಕೆ ನಿಮ್ಮ ಮೇಲಿದೆ. ಇದನ್ನು ಬಿಟ್ಟು, ರಾಜಕಾರಣ ಮಾಡುತ್ತಾ, ಸಭೆಗಳಲ್ಲಿ ಸ್ವಹಿತಾಸಕ್ತಿಯ ಕೆಲಸ ಮಾಡಿಕೊಳ್ಳುವುದು ಸಮಾಜಕ್ಕೆ, ದೇಶಕ್ಕೆ ಮಾಡುವ ದೊಡ್ಡ ದ್ರೋಹ ಎಂದರು.
ಮರುಕಳಿಸುವುದು ಬೇಡ: ಕಳೆದ ನಗರಸಭೆ ಆಡಳಿತಾವಧಿಯಲ್ಲಿ ತುಮಕೂರು ನಗರಸಭೆಯಲ್ಲಿ ಅನೇಕ ಹಗರಣಗಳು, ಸ್ವಾರ್ಥ, ಲಾಭಕ್ಕಾಗಿ ಪದೇ -ಪದೇ ಅಧ್ಯಕ್ಷರ ಬದಲಾವಣೆ, ಅಕ್ರಮಗಳೆಲ್ಲಾ ನಡೆದಿವೆ. ಈ ಕೆಟ್ಟ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಸದಸ್ಯರು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಚುನಾವಣಾ ಆಯೋಗ ರಚನೆಯಾದರೂ ದೇಶದಲ್ಲಿ ಅಕ್ರಮಗಳು ಹೆಚ್ಚಾದವೇ ಹೊರತು, ವಿನಃ ಸುಧಾರಣೆಯಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡ ಹಣ, ಹೆಂಡ, ಸಾಮಗ್ರಿಗಳೆಲ್ಲಾ ಯಾರ ಕೈ ಸೇರಿದವು ಎಂಬುದು ಗೊತ್ತಿಲ್ಲ. ಇಡೀ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ವಿಷಾದಿಸಿದರು.
ಅಣ್ಣಾ ಹಜಾರೆ ಹೋರಾಟಕ್ಕಿಳಿದ ಮೇಲೆ ಸರ್ಕಾರಗಳಿಗೆ ಜನರ ಶಕ್ತಿ ಏನೆಂಬುದು ತಿಳಿಯಿತು. ಭ್ರಷ್ಟರನ್ನು ನಿಗ್ರಹಿಸುವ ಲೋಕಪಾಲ್ ಮಸೂದೆ ಮಂಡಿಸಲು 8 ಬಾರಿ ವಿಫಲವಾದ ಕೇಂದ್ರ ಸರ್ಕಾರ ಹೋರಾಟಕ್ಕೆ ಮಣಿದು ಕೊನೆಗೂ ಮಸೂದೆ ಮಂಡಿಸಲು ಮುಂದಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

