ತುರುವೇಕೆರೆಯಲ್ಲಿ ಕೃಷ್ಣಪ್ಪ ತುತ್ತೂರಿ..
ಕ.ಪ್ರ.ವಾರ್ತೆ ತುರುವೇಕೆರೆ ಮೇ 8
ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಗೆಲವು ಸಾಧಿಸಿದವರೇ ಇಲ್ಲಿರಲಿಲ್ಲ. ಆದರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಆ ಒಂದು ಸಾಧನೆ ಮೂಲಕ ಇತಿಹಾಸ ಬರೆದು ಶಾಪ ವಿಮೋಚನೆ ಮಾಡಿದ್ದಾರೆ.
ಈ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪರವರಿಗೆ ಹಲವಾರು ನಾಯಕರುಗಳಿಂದ ಭಾರಿ ವಿರೋಧ ವ್ಯಕ್ತವಾಗಿದ್ದರೂ ಗುಪ್ತಗಾಮಿನಿಯಾಗಿದ್ದ ಮತದಾರ ಪ್ರಭು ಕೃಷ್ಣಪ್ಪನವರ ಕೈ ಹಿಡಿದಿದ್ದಾನೆ. ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಆರ್ಭಟಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಕೆಲ ಮತಗಳ ಅಂತರದಲ್ಲಾದರೂ ಸಹ ಸೋಲು ಕಾಣುತ್ತಾರೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯುಂಟಾಗಿದೆ. ಕಳೆದ ಬಾರಿಯೂ ಶಾಸಕರಾಗಿದ್ದ ಕೃಷ್ಣಪ್ಪ ಇದುವರೆಗೂ 3 ಬಾರಿ ಗೆಲವು ಸಾಧಿಸಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಶಾಸಕರಾಗಿ ಕೃಷ್ಣಪ್ಪನವರು ಪುನರ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಜೆಡಿಎಸ್ನ ನೂರಾರು ಕಾರ್ಯಕರ್ತರು ದಬ್ಬೇಘಟ್ಟ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಮುಂದೆ ಧಾವಿಸಿ ಮುಖ, ಮೈಗೆಲ್ಲಾ ಹಸಿರು ಬಣ್ಣವನ್ನು ಹಚ್ಚಿಕೊಂಡು ಸಂತಸ ಪಟ್ಟರು. ಜೆಡಿಎಸ್ ಧ್ವಜ ಹಿಡಿದು ಪಟ್ಟಣದ ಹಲವಾರು ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಕುಣಿದು ಕುಪ್ಪಳಿಸಿದರು.
ಕೂಸು ಹುಟ್ಟುವುದಕ್ಕಿಂತ ಮಂಚೆಯೇ ಕುಲಾವಿ ಹೊಲಿಸಿದರು ಎಂಬಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಡಿ.ರಮೇಶ್ಗೌಡ ಮತ ಎಣಿಕೆ ಪ್ರಾರಂಭಕ್ಕೆ ಮುನ್ನವೇ ಜೆಡಿಎಸ್ ಕಚೇರಿಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಶುಭ ಕೋರಿದ್ದರು. ಕ್ಷೇತ್ರದಲ್ಲಿ ಈ ಬಾರಿ ಆಯ್ಕೆಯಾಗುವ ಅಭ್ಯರ್ಥಿಗಳು ಕೆಲ ಮತಗಳ ಅಂತರದಿಂದ ಮಾತ್ರ ಗೆಲವು ಸಾಧಿಸಬಹುದು ಎಂಬುದೂ ಸುಳ್ಳಾಗಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಸುಮಾರು 9 ಸಾವಿರ ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ.
ಇವರ ಪ್ರತಿಸ್ಪರ್ಧಿಯಾಗಿದ್ದ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ನೇರ ಸ್ಪರ್ಧೆ ನೀಡಿದ್ದರು. ಇವರಿಗೆ ಈ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿರುವ ಹಾಗೂ ಕೆಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಎಂ.ಡಿ.ಲಕ್ಷ್ಮೀನಾರಾಯಣ್ ರವರ ಬಳಗ ನೆರವು ನೀಡಿತ್ತು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಡಿ.ಲಕ್ಷ್ಮೀನಾರಾಯಣ್ ಸುಮಾರು 52 ಸಾವಿರ ಮತ ಗಳಿಸಿದ್ದರು. ಈ ಬಾರಿ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಸುಮಾರು 56844 ಮತಗಳನ್ನು ಗಳಿಸಿದ್ದಾರೆ.
ಠೇವಣಿ ಕಳೆದುಕೊಂಡ ಕಾಂಗ್ರೆಸ್ ಹಾಗೂ ಬಿಜೆಪಿ: ಜೆಡಿಎಸ್ ಹಾಗೂ ಕೆಜೆಪಿ ಆರ್ಭಟದಲ್ಲಿ ನಲುಗಿ ಹೋಗಿರುವ ಕಾಂಗ್ರೆಸ್ ಕೇವಲ 7482 ಮತಗಳನ್ನು, ಬಿಜೆಪಿ ಕೇವಲ 3524 ಮತಗಳನ್ನೂ ಗಳಿಸಿದೆ. ಬಿಎಸ್ಆರ್ನಿಂದ ಸ್ಪರ್ಧಿಸಿದ್ದ ಹೆಲಿಕ್ಯಾಫ್ಟರ್ ರಾಜಶೇಖರ್ ಕೇವಲ 1066 ಮತಗಳನ್ನು, ಶಾಸಕ ಎಂ.ಟಿ.ಕೃಷ್ಣಪ್ಪನವರ ಅಳಿಯ ಡಾ.ಚೌದ್ರಿ ನಾಗೇಶ್ರವರ ಬೆಂಬಲವನ್ನು ಪಡೆದಿದ್ದ ವೀರಶೈವ ಮುಖಂಡ ಪಕ್ಷೇತರ ಅಭ್ಯರ್ಥಿ ಹೆಚ್.ಮಹೇಶ್ ಕೇವಲ 722 ಮತಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವಕುಮಾರ್ 1126 ಮತ ಗಳಿಸಿ ಇತರೆ ಅಭ್ಯರ್ಥಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ಕೊನೇ ಬಾರಿ ಕಣಕ್ಕೆ: ತಾವು ಕಳೆದ ಎರಡು ಬಾರಿಯೂ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರಕ್ಕೆ ಉತ್ತಮ ಕಾಮಗಾರಿ ಮಾಡಿಸಿರುವ ತೃಪ್ತಿ ಇದೆ. ಈ ಚುನಾವಣೆಯಲ್ಲಿ ಗೆಲವು ತಂದುಕೊಟ್ಟಲ್ಲಿ ಅದನ್ನೇ ತಮ್ಮ ಕೊನೆಯ ಚುನಾವಣೆಯನ್ನಾಗಿಸುವುದಾಗಿ ಹೇಳಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಈ ಬಾರಿ ಗೆದ್ದಲ್ಲಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಹೋರಾಡುವ ಸಂಕಲ್ಪ ಮಾಡುವುದಾಗಿ ಹೇಳಿದ್ದರು.
ಮುಖಭಂಗ: ರಾಜ್ಯ ಕೆಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ರವರ ಸ್ವಕ್ಷೇತ್ರ ಇದಾಗಿತ್ತು. ಈಗ ಕೆಜೆಪಿ ಅಭ್ಯರ್ಥಿಯಾಗಿದ್ದ ಮಸಾಲಾ ಜಯರಾಂ ರವರ ಸೋಲು ಸ್ವತಃ ಎಂ.ಡಿ.ಲಕ್ಷ್ಮೀನಾರಾಯಣ್ಗೆ ಮುಖಭಂಗವಾದಂತಾಗಿದೆ. ಇದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

