ಸಮಸ್ಯೆಗಳಿಗೆ ಪರಿಹಾರವಾಗುವರೇ ನೂತನ ಶಾಸಕ ತಿಮ್ಮರಾಯಪ್ಪ?
ಕ.ಪ್ರ.ವಾರ್ತೆ ಪಾವಗಡ ಮೇ 9
ನಂಜುಂಡಪ್ಪ ವರದಿಯಂತೆ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಪಾವಗಡ ತಾಲೂಕಿನ ಫ್ಲೋರೈಡ್ಯುಕ್ತ ಕುಡಿಯುವ ನೀರು, ನಿರುದ್ಯೋಗ, ಜೀವನೋಪಾಯಕ್ಕಾಗಿ ವಲಸೆ ಸೇರಿದಂತೆ ತಾಲೂಕಿನಲ್ಲಿ ತಾಂಡವವಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ನೂತನವಾಗಿ ಆಯ್ಕೆಯಾದ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರಿಂದ ಪರಿಹಾರ ಸಿಗಬಹುದೆ ಎಂಬುದು ಕ್ಷೇತ್ರದ ಜನತೆಯ ಪ್ರಶ್ನೆಯಾಗಿದೆ.
ನಿರುದ್ಯೋಗಗಳಿಗೆ ಉದ್ಯೋಗ ಸೃಷ್ಟಿ ಹಾಗೂ ಶಾಶ್ವತ ನೀರಿನ ಸಮಸ್ಯೆ ನಿವಾರಣೆಗೆ ಬದ್ಧರೆಂದೇ ಹೇಳಿಕೊಂಡು ಪ್ರತಿ ಚುನಾವಣೆಯಲ್ಲಿ ಮತ ಪಡೆದು ಗೆದ್ದ ಶಾಸಕರು ಕಳೆದ 20 ವರ್ಷಗಳಿಂದ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದೇ ಬೇಡಿಕೆಗಳು ಬೇಡಿಕೆಗಳಾಗಿಯೆ ಉಳಿದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನದಿ ಮೂಲದ ಶಾಶ್ವತ ನೀರಿನ ಅನುಷ್ಠಾನ ಸೇರಿದಂತೆ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಕಲ್ಪಿಸುವ ಭರವಸೆಯೊಂದಿಗೆ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದ ವೆಂಕಟರಮಣಪ್ಪ ತಮ್ಮ ಅಧಿಕಾರಾವಧಿಯಲ್ಲಿ ಆನೇಕ ಪ್ರಗತಿ ಪರ ಕಾರ್ಯಗಳು ಕೈಗೊಂಡಿದ್ದರೂ ಶಾಶ್ವತ ಕುಡಿಯುವ ನೀರಿನ ಅನುಷ್ಠಾನ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಜ್ವಲಂತ ಸಮಸ್ಯೆ ನಿವಾರಣೆಯಲ್ಲಿ ಹಿಂದೆ ಬಿದ್ದರು.
ಕಳೆದ 20 ವರ್ಷಗಳಿಂದ ಮಳೆ ಇಲ್ಲದೆ ತಮ್ಮ ಜೀವನೋಪಾಯದ ಶೇಂಗಾ ಬೆಳೆ ಕೈಗೆ ಸಿಗದ ಕಾರಣ ರೈತಾಪಿಗಳು ಕಂಗಾಲಾಗಿ ಬೇರೆ ವೃತ್ತಿಗಳನ್ನು ಅವಲಂಬಿಸಿ ಜೀವನ ನಡೆಸಲಾಗುತ್ತಿದೆ. ಇಲ್ಲಿನ ರೈತರ ನೀರಾವರಿ ಬೆಳೆಗಳಿಗೆ ವಿದ್ಯುತ್ ಸಮಸ್ಯೆ ಸೇರಿದಂತೆ ನಷ್ಟಕ್ಕೀಡಾದ ರೈತರಿಗೆ ಸಿಗದ ಪರಿಹಾರ, ಜೀವನೋಪಾಯಕ್ಕಾಗಿ ವಲಸೆಯೊಂದಿಗೆ ನಗರ ಪ್ರದೇಶಗಳಿಗೆ ಅವಲಂಬಿತ, ಅಸಮರ್ಪಕ ಶಿಕ್ಷಣ ವ್ಯವಸ್ಥೆ, ಫ್ಲೋರೈಡ್ ಯುಕ್ತ ಕುಡಿಯುವ ನೀರು, ಅಸಮರ್ಪಕ ಪಡಿತರ ವ್ಯವಸ್ಥೆ, ನಿರ್ಗತಿಕರ ಮಾಸಾಶನ, ನಿರುದ್ಯೋಗ ಸಮಸ್ಯೆ, ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಕೊರತೆ, ಇಲಾಖೆಗಳಲ್ಲಿ ಅಧಿಕಾರಿಗಳ ಭ್ರಷ್ಟಾಚಾರ, ಹದಗೆಟ್ಟ ರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಮಂದಿ ನಿರ್ಗತಿಕರಿಗೆ ಮನೆಗಳಿಲ್ಲದೆ ಗುಡಿಸಲು ಮನೆಗಳಲ್ಲಿ ವಾಸ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಸರಮಾಲೆಯೇ ನೂತನ ಶಾಸಕರಿಗೆ ಎದುರಾಗಿದ್ದು ಈ ಸಮಸ್ಯೆಗಳಿಗೆಲ್ಲಾ ಶಾಸಕರು ಪರಿಹಾರ ಕಲ್ಪಿಸುವರೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

