ತುಮಕೂರು

ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಡಿಸಿ

Published On :

ಕ.ಪ್ರ. ವಾರ್ತೆ  ತುಮಕೂರು  ಮೇ 10
ಪ್ರತಿ ವರ್ಷದಂತೆ ಈ ಬಾರಿಯೂ ಸಹ ಬಸವೇಶ್ವರ ಜಯಂತಿಯನ್ನು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ತಿಳಿಸಿದರು.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ  ಮೆರವಣಿಗೆ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗದಿಂದ ಆರಂಭಿಸಿ ಚರ್ಚ್  ವೃತ್ತ, ಅಶೋಕ ರಸ್ತೆ, ಟೌನ್ ವೃತ್ತ, ಬಿ.ಎಚ್. ರಸ್ತೆ, ಜೆ. ಸಿ. ರಸ್ತೆ ರಂಗಮಂದಿರ ರಸ್ತೆ ಮುಖೇನ ಡಾ. ಗುಬ್ಬಿ ವೀರಣ್ಣ ಕಲಾಮಂದಿರವನ್ನು ಸೇರಲಾಗುವುದು ಎಂದು ತಿಳಿಸಿದರು.
ಮೆರವಣಿಗೆ ಕಾರ್ಯಕ್ರಮಕ್ಕೆ ಅಗತ್ಯವಾದ ಎರಡು ಟ್ರ್ಯಾಕ್ಟರ್ಗಳ ಪೈಕಿ ಒಂದರಲ್ಲಿ ಬಸವಣ್ಣನವರ ದೊಡ್ಡದಾದ ಭಾವಚಿತ್ರವನ್ನು ಇಟ್ಟು ಸೂಕ್ತವಾದ ರೀತಿಯಲ್ಲಿ ಹೂವಿನ ಅಲಂಕಾರದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲು ಮತ್ತು ಮತ್ತೊಂದು ವಾಹನದಲ್ಲಿ ನಾದಸ್ವರ ತಂಡವನ್ನು ಬಳಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೆ ಶಿಷ್ಟಾಚಾರದನ್ವಯ ಹಿರಿಯ ಗಣ್ಯರನ್ನು ಜನಪ್ರತಿನಿಧಿಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಲು ಸಿದ್ದಗಂಗಾಮಠದ ಕಿರಿಯ ಶ್ರೀಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವಚನಗಳ ಗಾಯನ, ಪ್ರಾರ್ಥನೆ ಕಾರ್ಯಕ್ರಮಗಳನ್ನು  ಮಹಿಳಾ ಸಂಘ ಸಂಸ್ಥೆಗಳಾದ ಕದಳಿ ಮಹಿಳಾ ವೇದಿಕೆ, ಮೈತ್ರಿ ಮಹಿಳಾ ಸಂಘ ಮತ್ತು ಅಕ್ಕ ಮಹಾದೇವಿ ಸಂಘಗಳಿಂದ ನಡೆಸಲು ತೀರ್ಮಾನಿಸಲಾಯಿತು.
ಮೆರವಣಿಗೆಗೆ ಒಟ್ಟು ಹತ್ತು  ಜಾನಪದ ಪ್ರಕಾರಗಳ ಕಲಾತಂಡಗಳನ್ನು ಗುರುತಿಸಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.
ಬಸವ ತತ್ವಗಳನ್ನು ಸ್ವಯಂ ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಹಾಗೂ ಅವುಗಳನ್ನು ಸಮಾಜಕ್ಕೆ ತಲುಪಿಸುತ್ತಿರುವ ಹಿರಿಯ ಸಾಧಕರೋರ್ವರನ್ನು ಗುರುತಿಸಿ ಈ ಬಾರಿಯೂ ಬಸವ ಪುರಸ್ಕಾರ ಪ್ರಶಸ್ತಿ ನೀಡಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಬಸವ ಸೇನೆ ಉಪಾಧ್ಯಕ್ಷರಾದ ಸದಾಶಿವಯ್ಯ,  ಕನಕಾಂಬ, ರಾಧಾ,  ವೀರಶೈವ ಸಮಾಜ ಸೇವಾ ಸಮಿತಿಯ ಶಿವಕುಮಾರ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.