ಲೋಕ ಕಲ್ಯಾಣಾರ್ಥ ಅರಳಿ, ಬೇವಿನ ಮರಕ್ಕೆ ಗಟ್ಟಿಮೇಳ
ಕ.ಪ್ರ. ವಾರ್ತೆ ಹಾಸನ ಮೇ 10
ಲೋಕ ಕಲ್ಯಾಣಕ್ಕಾಗಿ ಶುಕ್ರವಾರ ಅರಳಿ ಹಾಗೂ ಬೇವಿನ ಮರಕ್ಕೆ ಗ್ರಾಮಸ್ಥರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು.
ತಾಲೂಕಿನ ಕಟ್ಟಾಯ ಹೋಬಳಿ ಪದುಮನಹಳ್ಳಿಯಲ್ಲಿ ಸುಮಾರು 80 ಕುಟುಂಬಗಳಿದ್ದು, ಎಲ್ಲರು ಒಟ್ಟಾಗಿ ಗ್ರಾಮಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯ ಮುಂದಿರುವ ಅರಳಿ ಮತ್ತು ಬೇವಿನ ಮರಕ್ಕೆ ಮದುವೆ ಮಾಡಿದರು.
ಅರಳಿಮರಕ್ಕೆ ಶಾಸ್ತ್ರೋಕ್ತವಾಗಿ ಪಂಜೆ, ಶಲ್ಯವನ್ನು ಉಡಿಸಿ ಮತ್ತು ಬೇವಿನ ಮರಕ್ಕೆ ಸೀರೆ, ರವಿಕೆ ಉಡಿಸಿ ತಾಳ, ಮೇಳ, ಮಂತ್ರ ಘೋಷದೊಂದಿಗೆ ಸಂಪ್ರದಾಯ ಬದ್ಧವಾಗಿ ಮಾಂಗಲ್ಯಧಾರಣೆ ನೆರವೇರಿಸಿದರು. ಸುತ್ತಲೂ ಹಸಿರು ಚಪ್ಪರ ಹಾಕಿ, ತಳಿರು ತೋರಣ ಕಟ್ಟಿ ಗಟ್ಟಿಮೇಳ ಮೊಳಗಿಸಿದರು. ಇದಕ್ಕೆ ನೂರಾರು ಗ್ರಾಮಸ್ಥರು ಸಾಕ್ಷಿಯಾದರು.
ಹಿಂದೆ ಹಳೇ ಊರಿನಲ್ಲಿ ಇದ್ದಂತಹ ಮರಕ್ಕೆ ಪೂರ್ವಿಕರು ಕಾಲ ಕಾಲಕ್ಕೆ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬಂದಿದ್ದರು. ಆದರೆ ಆ ವಾಡಿಕೆ ಕೆಲ ವರ್ಷಗಳ ಕಾಲ ತಟಸ್ಥಗೊಂಡಿತ್ತು. ಪ್ರಸ್ತುತ ಗ್ರಾಮದ ಅರಳಿ ಮತ್ತು ಬೇವಿನ ಮರಗಳು ಚೆನ್ನಾಗಿ ಬೆಳೆದು ನಿಂತಿವೆ. ಜತೆಗೆ ಗ್ರಾಮಸ್ಥರು ಹೋಮ ಹವನ ಕೂಡಾ ನೆರವೇರಿಸಿದರು. ಮದುವೆ ಸಮಾರಂಭಗಳಲ್ಲಿ ಸಿದ್ದಪಡಿಸುವ ರೀತಿಯಲ್ಲಿಯೇ ಗ್ರಾಮಸ್ಥರು ಬಗೆ ಬಗೆಯ ಭೋಜನ ಸಿದ್ದಪಡಿಸಿ, ನಂತರ ಸವಿದು ಸಂಭ್ರಮ ಪಟ್ಟರು. ಗ್ರಾಮಸ್ಥರಾದ ಮಂಜೇಗೌಡ, ಕೃಷ್ಣ, ಮಾವಣ್ಣ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

