ತುಮಕೂರು

ಶೈಕ್ಷಣಿಕ ವಾತಾವರಣ ಕ್ಷೀಣ ವೆಂಕಟಾಚಲಯ್ಯ ವಿಷಾದ

Published On :


ಕ.ಪ್ರ. ವಾರ್ತೆ  ತುಮಕೂರು  ಮೇ 13
ಡಾ. ಎಸ್.ಸಿ. ಶರ್ಮಾ ಅವರು ದೇಶದ ಶೈಕ್ಷಣಿಕ ಆಶಾವಾದದ ಸಾಂಕೇತಿಕ ರೂಪದಂತಿದ್ದಾರೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ತುಮಕೂರು ನಾಗರಿಕ ಸಮಿತಿಯು ತುಮಕೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ. ಎಸ್. ಸಿ. ಶರ್ಮಾ ಅವರಿಗೆ ಎಸ್.ಐ.ಟಿ. ಬಿರ್ಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಒಬ್ಬ ಕುಲಪತಿ ತನ್ನ ಹುದ್ದೆಯಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ನಾಗರಿಕರೆಲ್ಲರೂ ಸೇರಿ ಈ ಬಗೆಯ ಬೀಳ್ಕೊಡುಗೆ ನೀಡುವುದನ್ನು ತಾವೆಲ್ಲಿಯೂ ಕಂಡಿಲ್ಲ ಎಂದರು.
ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಶೈಕ್ಷಣಿಕ ವಾತಾವರಣ ಕಡಿಮೆಯಾಗುತ್ತಿದೆ. ಅಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಯ ಕೊರತೆ ಎದ್ದು ಕಾಣುತ್ತಿದೆ. ಮೂಲವಿಜ್ಞಾನಗಳ ಅಧ್ಯಯನದಲ್ಲಿ ಗಾಂಭೀರ್ಯತೆ ಮಾಯವಾಗಿದೆ. ಇವೆಲ್ಲವನ್ನು ನೀಗಿಸುವ ಶ್ರೇಷ್ಠ ಮಟ್ಟದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಮ್ಮಲ್ಲಿ ಜಾರಿಗೆ ತರುವ ಅವಶ್ಯಕತೆಯಿದೆ ಎಂದರು.
ಭಾರತದಲ್ಲಿ ಉನ್ನತ ಶಿಕ್ಷಣದ ಹಂತವನ್ನು ಪ್ರವೇಶಿಸುವವರ ಪ್ರಮಾಣವನ್ನು ಶೇ. 20 ಕ್ಕೆ ಏರಿಸುವ ಗುರಿ ಸರ್ಕಾರಕ್ಕಿದೆ. ಇದಕ್ಕೆ ಕನಿಷ್ಠ ಪಕ್ಷ ಇನ್ನೂ 800 ವಿಶ್ವವಿದ್ಯಾನಿಲಯಗಳ ಅವಶ್ಯಕತೆಯಿದೆ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯ ವಿಶ್ವವಿದ್ಯಾನಿಲಯಗಳಿಗೆ ಡಾ. ಶರ್ಮಾರವರಂಥ ಕುಲಪತಿಗಳನ್ನು ಹುಡುಕುವುದೆಲ್ಲಿ ಎಂದರು.
ವೈಜ್ಞಾನಿಕ ಪ್ರತಿಭೆಯ ವಿಷಯಕ್ಕೆ ಬಂದರೆ ಭಾರತಕ್ಕೆ ಪ್ರಪಂಚದಲ್ಲೇ ಮೂರನೇ ಸ್ಥಾನವಿದೆ. ಆಂತರಿಕ ಮಾರುಕಟ್ಟೆಯ ವಿಷಯದಲ್ಲಿ ನಾಲ್ಕನೇ ಸ್ಥಾನವನ್ನೂ, ವಿದೇಶೀ ಮಾರುಕಟ್ಟೆಯನ್ನು ಆಕರ್ಷಿಸುವಲ್ಲಿ ಐದನೇ ಸ್ಥಾನವನ್ನೂ ಭಾರತ ಹೊಂದಿದೆ. ಆದರೆ ಜಾಗತಿಕ ಸ್ಪರ್ಧಾ ಸಾಮರ್ಥ್ಯ ಸೂಚ್ಯಂಕದಲ್ಲಿ ನಾವಿನ್ನೂ 51ನೇ ಸ್ಥಾನದಲ್ಲಿದ್ದೇವೆ. ಈ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದರು.
ಗದಗ-ವಿಜಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ನಿರ್ಭಯಾನಂದ ಸರಸ್ವತೀ ಸ್ವಾಮಿಗಳು  ಮಾತನಾಡಿ, ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸ್ಥಾನಕ್ಕೆ ತಂದರೆ ವ್ಯವಸ್ಥೆಯಲ್ಲಿ ಎಂತಹ ಬದಲಾವಣೆ ತರುವುದು ಸಾಧ್ಯ ಎಂಬುದಕ್ಕೆ ತುಮಕೂರು ವಿಶ್ವವಿದ್ಯಾನಿಲಯವೇ ಒಂದು ಪ್ರತ್ಯಕ್ಷ ನಿದರ್ಶನ ಎಂದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಎಸ್. ಸಿ. ಶರ್ಮಾ ಅವರು, ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಎಲ್ಲ ಬದಲಾವಣೆ ಹಾಗೂ ಸಾಧನೆಗಳಿಗೆ ಇಲ್ಲಿನ ಆಡಳಿತ ವರ್ಗ ಹಾಗೂ ಶ್ರೇಷ್ಠ ಗುಣಮಟ್ಟದ ಶಿಕ್ಷಕರೇ ಕಾರಣ ಎಂದರು. ರಾಜಕೀಯ ಹಸ್ತಕ್ಷೇಪಕ್ಕೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಜಾಗವಿರಲಿಲ್ಲ. ಇದೇ ಅದರ ಯಶಸ್ಸಿನ ಗುಟ್ಟು ಎಂದರು.
ಸವ್ಯಸಾಚಿ ಎಂಬ ಅಭಿನಂದನಾ ಗ್ರಂಥವನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು. ಎಸ್‌ಐಟಿ ನಿರ್ದೇಶಕರೂ ನಾಗರಿಕ ಸಮಿತಿಯ ಅಧ್ಯಕ್ಷರೂ ಆದ ಡಾ. ಎಂ. ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಡಾ. ವೀರೇಶಾನಂದ ಸರಸ್ವತೀ ಸ್ವಾಮೀಜಿ ಸ್ವಾಗತಿಸಿದರು. ಎಸ್. ನಾಗಣ್ಣ ವಂದಿಸಿದರು. ಸಮಾರಂಭಕ್ಕೆ ಮುನ್ನ ವಿದುಷಿ ರೋಹಿಣಿ ಗುಂಡೂರಾವ್ ಅವರಿಂದ ವೀಣಾವಾದನ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.