ತುಮಕೂರು

'ಅಲ್ಲೊಂದು ಇಲ್ಲೊಂದು ಮಕ್ಕಳ ನಾಟಕ'

Published On :

ಕ.ಪ್ರ. ವಾರ್ತೆ ,  ತುಮಕೂರು ,  ಮೇ 15
ರಂಗಚಟುವಟಿಕೆಗಳು ನಿರಂತರವಾಗಿ ನಡೆದಿವೆ. ಆದರೆ ಮಕ್ಕಳ ನಾಟಕಗಳು ಮಾತ್ರ ಕುಂಠಿತಗೊಂಡಿವೆ ಎಂದು ಜೆ.ಡಿ. ಸ್ಕೂಲ್ ಆಫ್ ಆರ್ಟ್ಸ್‌ನ ಪ್ರಿನ್ಸಿಪಾಲ್ ಹಾಗೂ ರಂಗ ನಿರ್ದೇಶಕ ಡೇವಿಡ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಣ್ಮುಚ್ಚಾಲೆ ಗುಂಪಿನ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಶಾಲಾ ಆವರಣದಲ್ಲಿ ಏರ್ಪಾಟಾಗಿದ್ದ 3 ನೇ ವರ್ಷದ ಮಕ್ಕಳ ನಾಟಕೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲ್ಲೊಂದು, ಇಲ್ಲೊಂದು ಎಂಬಂತೆ ಮಕ್ಕಳ ನಾಟಕಗಳು ಕಂಡು ಬರುತ್ತಿವೆ. ಆದರೆ ನಿರಂತರವಾಗಿಲ್ಲ. ಮಕ್ಕಳ ಸೃಜನಶೀಲತೆಗೆ ನಾಟಕಗಳು ಅತ್ಯಗತ್ಯವಾಗಿವೆ. ಈ ಕುರಿತು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಂಘ-ಸಂಸ್ಥೆಗಳ ಮಕ್ಕಳ ಬೇಸಿಗೆ ಶಿಬಿರಗಳ ಮೂಲಕ ರಂಗ ತಂಡಗಳು ಹುಟ್ಟುತ್ತವೆ ಹಾಗೂ ಸಾಕಷ್ಟು ಸಂಖ್ಯೆಯ ನಾಟಕಗಳು ರಂಗ ಮಂಟಪವನ್ನೇರುತ್ತವೆ. ಇದೊಂದು ಸಂತಸದ ವಿಷಯ ಎಂದರು.
ಸಮಾರಂಭ ಉಧ್ಘಾಟಿಸಿದ ತುರುವೇಕೆರೆ ನಾಟಕ ಕರ್ತೃ ಚಂದ್ರಶೇಖರ ಚಿ ತೋಟದ ರಂಗಚಟುವಟಿಕೆಗಳಿಗೆ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಆದ್ಯತೆ ಕಲ್ಪಿಸಬೇಕು. ಒಂದೆರಡು ದಶಕಗಳ ಹಿಂದೆ ರಂಗಭೂಮಿಗೆ ಸ್ವಲ್ಪಮಟ್ಟಿಗೆ ಮಂಕು ಕವಿದಿತ್ತು. ಜಾಗತೀಕರಣದ ನಂತರ ಈಗ ನಾಟಕಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ವಿಷಾದಿಸಿದರು.
ಮಕ್ಕಳ ಸಾಹಿತಿ ಸಿದ್ದರಾಜ  ಐವಾರ್ ಮಾತನಾಡಿ, ನವೋದಯ ರಂಗಭೂಮಿ ಅಥವಾ ಆಧುನಿಕ ನಾಟಕದ ಪರಿಣಾಮವೆಂದರೆ ಕೈಲಾಸಂ ವಿಧವೆಯರ ಸಮಸ್ಯೆ, ಸಂಪ್ರದಾಯಕ್ಕೆ ಮೂಕ ಬಲಿಯಾಗುವ ಹೆಣ್ಣು ಮಕ್ಕಳು, ವೇಶ್ಯಾವೃತ್ತಿ, ಕಲಿಕೆಯ ಉದ್ದೇಶ, ಜಾತಿ-ಮತಗಳ ಸಂಕುಚಿತ ಮನೋಭಾವಗಳನ್ನು ಬಿಂಬಿಸಿದ್ದು ಎಂದರು.
ಮಕ್ಕಳ ನಾಟಕಗಳ ಪ್ರದರ್ಶನ, ಸನ್ಮಾನ: ಡೇವಿಡ್ ನಿರ್ದೇಶನದಲ್ಲಿ ಗಂಗೂಬಾಯಿ ಕಿಟ್ಟಿ ಪಾರ್ಟಿ ಹಾಗೂ ತುರುವೇಕೆರೆ ಚಂದ್ರಶೇಖರ ಚಿ ತೋಟದ ನಿರ್ದೇಶನದಲ್ಲಿ ಎಲ್ಲಿ ಹೋದರೂ ಅದೇ ಎಂಬ ಎರಡು ಮಕ್ಕಳ ನಾಟಕಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಹೆಬ್ಬಾಕ ಸಿದ್ದಲಿಂಗಪ್ಪ, ಚನ್ನಬಸಯ್ಯ ಗುಬ್ಬಿ, ಡೇವಿಡ್, ಚಂದ್ರಶೇಖರ ಚಿ. ತೋಟದ, ಜಿ.ವಿ. ಶ್ರೀನಿವಾಸಮೂರ್ತಿ, ತ್ಯಾಗಟೂರು ಪುಟ್ಟಸ್ವಾಮಿ, ಆರ್.ಜೆ. ನಯನ ಅವರನ್ನು ಸನ್ಮಾನಿಸಲಾಯಿತು.
ಜೆ. ಗಗನ್ ಪ್ರಾರ್ಥಿಸಿ, ಬಿಂದಿಯಾ ಈಶ್ವರ್ ಸ್ವಾಗತಿಸಿದರು. ಟಿ.ಎಸ್. ಬಾಲಾಜಿ ವಂದಿಸಿದರು. ಬಿ.ಆರ್. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.