ಕೊಬ್ಬರಿಗೆ ಬೆಂಬಲ ಬೆಲೆ ನೀಡಿ: ಲೋಕೇಶ್ವರ ಕರೆ
ಕ.ಪ್ರ. ವಾರ್ತೆ , ತಿಪಟೂರು , ಮೇ 17
ಕಳೆದ ವರ್ಷ ಮಳೆ ಬಾರದೆ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ವಿಫಲವಾಗಿ ತಾಲೂಕು ಬರಗಾಲಕ್ಕೆ ತುತ್ತಾಗಿದೆ. ಜೊತೆಗೆ ಈ ವರ್ಷದ ಪೂರ್ವ ಮುಂಗಾರು ಸಂಪೂರ್ಣ ವಿಫಲವಾಗಿರುವ ಪ್ರಯುಕ್ತ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಜಾನುವಾರುಗಳಿಗೆ ಮೇವು-ನೀರು ಇಲ್ಲದಂತಾಗಿ ಪರಿತಪಿಸುವಂತಾಗಿದೆ ಎಂದು ಕೆಜಿಪಿ ಮುಖಂಡ ಲೋಕೇಶ್ವರ್ ಹೇಳಿದ್ದಾರೆ.
ತಾಲೂಕಿನ ಜೀವನಾಡಿ ಬೆಳೆ ತೆಂಗು ಬರಗಾಲಕ್ಕೆ ತುತ್ತಾಗಿ ರೈತರು ತೀವ್ರ ನಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೆ ಕೊಬ್ಬರಿ ಬೆಳೆಗಾರರ ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕಲ್ಲದೆ ತೆಂಗು ಬೆಳೆಗಾರರಿಗೆ, ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ವಿಶೇಷ ಪ್ಯಾಕೇಜನ್ನು ರೂಪಿಸಿ ತುರ್ತಾಗಿ ಜಾರಿಗೆ ತರಬೇಕು. ಅಲ್ಲದೆ ನಫೆಡ್ ಮೂಲಕ ಕೊಬ್ಬರಿಯನ್ನು ಬೆಂಬಲ ಬೆಲೆಗೆ ಸದಾಕಾಲ ಕೊಳ್ಳುವಂತಹ ಶಾಶ್ವತ ಪರಿಹಾರಕ್ಕೆ ಲೋಕೇಶ್ವರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2012ರ ಏಪ್ರಿಲ್ನಲ್ಲಿ ಬಿದ್ದ ಪೂರ್ವ ಮುಂಗಾರು ಮಳೆಗೆ ತಾಲೂಕಿನ ರೈತರು ಗೊಬ್ಬರ ಬೀಜಕ್ಕೆಂದು ಸಾವಿರಾರು ರು. ಸಾಲ ಮಾಡಿಕೊಂಡು ಹೆಸರು, ಉದ್ದು, ಎಳ್ಳು ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮೇ, ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ನಷ್ಟ ಅನುಭವಿಸುವಂತಾಯಿತು. ನಂತರದ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಪ್ರಮುಖ ಆಹಾರ ಬೆಳೆಯಾದ ರಾಗಿಯೂ ಆಗಲಿಲ್ಲ. ಇದರಿಂದ ತಾಲೂಕಿನ ಪ್ರಮುಖ ವಾಣಿಜ್ಯ ಉಪಕಸುಬಾದ ಪಶುಪಾಲನೆಗೂ ತೀವ್ರ ಮೇವಿನ ಕೊರತೆ ಉಂಟಾಗಿದ್ದು, ರೈತರು ತೀವ್ರ ಆತಂಕಕ್ಕೀಡಾಗಿದ್ದು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕೈಗೊಳ್ಳಬೇಕಾಗಿದೆ.
ಒಣಗಿದ ತೆಂಗು: ತಾಲೂಕಿನ ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾದ ತೆಂಗಿಗೂ ಮಳೆ ಇಲ್ಲದೆ ಗರಿಗಳು ಒಣಗಿ ಜೋತು ಬೀಳುತ್ತಿವೆ. ಈ ಬೇಸಿಗೆಯಲ್ಲಿಯೇ ತಾಲ್ಲೂಕಿನಾದ್ಯಂತ ಹತ್ತಾರು ಸಾವಿರ ತೆಂಗು ಹಾಗೂ ಅಡಕೆ ಮರಗಳು ಒಣಗಿ ಸುಳಿ ಬಿದ್ದಿವೆ. ತೆಂಗಿನ ಮರಗಳು ಸಾಲು ಸಾಲಾಗಿ ಒಣಗಿ ನಿಂತಿರುವುದು ನೋಡಿದರೆ ರೈತರ ಎದೆ ನಿಂತಲ್ಲೇ ಕಂಪಿಸುತ್ತದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬೋರ್ವೆಲ್ಗಳಿಗೆ ಅಂತರ್ ಜಲದ ಕೊರತೆ ಎದುರಾಗಿರುವುದರಿಂದ ರೈತರು ಮುಂದಿನ ಜೀವನ ಹೇಗೆಂದು ಭಯಭೀತರಾಗಿದ್ದಾರೆಂದು ಲೋಕೇಶ್ವರ ತಿಳಿಸಿದ್ದಾರೆ.
ಪಾತಾಳಕ್ಕೆ: ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದು ದಿಕ್ಕು ತೋಚದಂತಾಗಿದೆ. ಕಳೆದ 20ವರ್ಷಗಳಲ್ಲಿದ್ದ ಕೊಬ್ಬರಿ ಬೆಲೆ ಕ್ವಿಂಟಾಲ್ಗೆ ನಾಲ್ಕೂವರೆ ಸಾವಿರವಿದ್ದು ಈಗಲೂ ಅದೇ ಬೆಲೆ ಮುಂದುವರೆದಿದೆ. ಇತರೆ ಪದಾರ್ಥಗಳ ಬೆಲೆ ಮಾತ್ರ ಹತ್ತಾರು ಪಟ್ಟು ಹೆಚ್ಚಿದ್ದರೂ ಕೊಬ್ಬರಿ ಬೆಲೆ ಮಾತ್ರ ಮೇಲೇಳದೆ ಬೆಳೆಗಾರರನ್ನು ಹೊಸಕಿ ಹಾಕಿದೆ. ಈ ನಡುವೆಯೇ ಖಾಸಗಿ, ವಾಣಿಜ್ಯ ಬ್ಯಾಂಕ್ಗಳು ಹಾಗೂ ಸಹಕಾರ ಸಂಘಗಳು ಮತ್ತು ಪಿ.ಎಲ್.ಡಿ ಬ್ಯಾಂಕ್ಗಳಿಂದ ರೈತರು ಪಡೆದ ಸಾಲಗಳಿಗೆ ಬಡ್ಡಿ ಕಟ್ಟುವುದೂ ದುಸ್ತರವಾಗಿದೆ.
ಆದರೆ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಸಂಘದವರು, ಪಿ.ಎಲ್.ಡಿ ಬ್ಯಾಂಕಿನವರು ಸಾಲ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ರೈತರು ಅನ್ಯಮಾರ್ಗವಿಲ್ಲದೆ ಆತ್ಮಹತ್ಯೆಯತ್ತ ಮುಖ ಮಾಡಿಯಾರು ಎಂಬ ಆತಂಕ ತಾಲೂಕಿನಲ್ಲಿ ಸೃಷ್ಟಿಯಾಗಿದೆ.
ಆದ್ದರಿಂದ ಕೂಡಲೆ ನೂತನ ಸರ್ಕಾರ ರೈತರ ಯಾವುದೇ ಸಾಲಗಳ ವಸೂಲಿಗೆ ಮುಂದಾಗದೆ, ಅವರ ಸಂಪೂರ್ಣ ಸಾಲಮನ್ನಾ ಘೋಷಿಸಿ, ಈ ಬಗ್ಗೆ ಸಾಧ್ಯವಿರುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರ ನೆರವಿಗೆ ಧಾವಿಸಬೇಕಾಗಿದೆ.
ಕೊಬ್ಬರಿ ಬೆಳೆಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತಾಗಿ ಧಾವಿಸದಿದ್ದಲ್ಲಿ ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪರಿಹಾರ ದೊರೆಯುವವರೆಗೂ ಹೋರಾಟ ನಡೆಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಲೋಕೇಶ್ವರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

