ಅಡ್ವೊಕೇಟ್ ಜನರಲ್ ರವಿವರ್ಮಕುಮಾರ್ ಅವರಿಗೆ ಹುಟ್ಟೂರಲ್ಲಿ ಅಭಿಮಾನಿಗಳ ಸನ್ಮಾನ
ಶಿರಾ: ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ಹಿರಿಯ ನ್ಯಾಯವಾದಿ ಶಿರಾ ತಾಲೂಕಿನ ನೆಲದಿಮ್ಮನಹಳ್ಳಿ ಯ ಪ್ರೊ.ರವಿವರ್ಮಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿರುವುದನ್ನು ಶಿರಾ ತಾಲೂಕಿನ ಜನತೆ ಸ್ವಾಗತಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರೂ, ಶಿಕ್ಷಕರೂ ಆಗಿದ್ದ ಕೆಂಗರಾಮಯ್ಯ ಮತ್ತು ಪುಟ್ಟರಂಗಮ್ಮ ಪುತ್ರ ಪ್ರೊ. ರವಿವರ್ಮಕುಮಾರ್ ತಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಶಿರಾ ತಾಲೂಕಿನ ಏಕೋಪಾದ್ಯಾಯ ಶಾಲೆ ಲಿಂಗದಹಳ್ಳಿಯಲ್ಲಿ ಪ್ರಾರಂಭಿಸಿದ್ದರು. ರವಿವರ್ಮ ಕುಮಾರ್ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಹಾಗೂ ಹಲವು ಕಾನೂನು ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಸಂವಿಧಾನ ತಜ್ಞ ಎಂದೇ ಪರಿಚಿತರಾಗಿದ್ದಾರೆ.
ಶಿರಾ ತಾಲೂಕಿನ ರವಿವರ್ಮಕುಮಾರ್ ಅವರು ಹಿರಿಯ ನ್ಯಾಯವಾದಿ ಎಲ್.ಜಿ.ಹಾವನೂರು ಬಳಿ ಕಾನೂನು ವೃತ್ತಿ ಆರಂಭಿಸಿ 2003ರಲ್ಲಿ ಹೈಕೋರ್ಟ್ ನ್ಯಾಯವಾದಿಗಳಾಗಿ ಸ್ವತಂತ್ರವಾಗಿ ವೃತ್ತಿ ಆರಂಭಿಸಿದರು.
ಬೆಂಗಳೂರಿನ ಹಾವನೂರು ಕಾನೂನು ಕಾಲೇಜಿನ ಪ್ರೋ. ಆಗಿ ಅನಂತರ ನ್ಯಾಷನಲ್ ಸ್ಕೂಲ್ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದ ಸ್ಟಾಂಡಿಂಗ್ ಕೌನ್ಸಿಲ್ ಆಗಿ ಕೆಲ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಸಂವಿಧಾನ, ಆಡಳಿತ ನಿರ್ವಹಣೆ, ಕಾನೂನುಗಳಲ್ಲಿ ಅಪಾರ ಅನುಭವ ಹೊಂದಿದ್ದ ಇವರಿಗೆ ತುಮಕೂರು ವಿಶ್ವ ವಿದ್ಯಾಲಯ 2009ರಲ್ಲಿ ಡಾಕ್ಟರೇಟ್ ಪದವಿ ನೀಡಿತ್ತು. ಇದೇ ವರ್ಷ ಯುಎಸ್ಎ ಚಿಕಾಗೋದಲ್ಲಿ ಪೆರಿಯಾರ್ ವಿಶ್ವ ವಿದ್ಯಾಲಯವು ಕೆ.ವೀರಮಣಿ ಸೋಷಿಯಲ್ ಜಸ್ಟೀಸ್ ಅವಾರ್ಡ್ ನೀಡಿತ್ತು. 2008 ರಲ್ಲಿ ಎಸ್ಎಲ್ ಗ್ರೂಪ್ ಮತ್ತು ಝೀ ಟಿವಿ ಚಾನಲ್ ವತಿಯಿಂದ ಉತ್ತಮ ಕಾನೂನು ಸೇವಾ ಪ್ರಶಸ್ತಿಯನ್ನು ಎಂ.ಎನ್.ವೆಂಕಟಾಚಲಯ್ಯ ಅವರೊಂದಿಗೆ ನೀಡಲಾಗಿತ್ತು.
ಸಂವಿಧಾನಾತ್ಮಕ ಕಾನೂನು, ಮಾನವ ಹಕ್ಕುಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಚುನಾವಣಾ ವಿವಾದ, ಶಿಕ್ಷಣ, ಲಂಚ ವಿರೋಧಿ ಕಾನೂನು ಬಗ್ಗೆ ಹೆಚ್ಚಾಗಿ ವೃತ್ತಿಯಲ್ಲಿ ಪರಿಣಿತರಾಗಿರುವ ರವಿವರ್ಮಕುಮಾರ್ ಈವರೆಗೆ ಹೈಕೋರ್ಟ್, ಸುಪ್ರಿಂಕೋರ್ಟ್ ಸೇರಿದಂತೆ ಸುಮಾರು 30,000 ಪ್ರಕರಣಗಳಲ್ಲಿ ವಾದಿಸಿದ್ದಾರೆ.
ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸರ್ಕಾರಕ್ಕೆ ಸುಮಾರು 85 ವರದಿ ಸಲ್ಲಿಸಿದ್ದಾರೆ.
ಸನ್ಮಾನ: ಶಿರಾ ತಾಲೂಕಿನ ಜನತೆ ಪ್ರೊ. ರವಿವರ್ಮ ಕುಮಾರ್ ಸ್ಥಾಪಿಸಿರುವ ಶಿರಾ ತಾಲೂಕಿನ ಗುಮ್ಮನಹಳ್ಳಿಯಲ್ಲಿರುವ ಸಮತಾ ವಿದ್ಯಾಲಯದಲ್ಲಿ ಶನಿವಾರ ಅಭಿಮಾನಿಗಳು ಮತ್ತು ಒಡನಾಡಿಗಳು ಸನ್ಮಾನ ನೆರವೇರಿಸಿದರು. ರವಿಮರ್ವ ಒಡನಾಡಿ ಡಾ.ಕೆ.ರಾಮಕೃಷ್ಣ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ, ಪ್ರೊ. ಸಿದ್ದರಾಮಯ್ಯ, ವೈದ್ಯಾಧಿಕಾರಿ ಡಾ.ಮಂಜುನಾಥ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

