ತೃತೀಯ ರಂಗ ಸ್ಥಾಪನೆ ಶತಃಸಿದ್ಧ
ಕ.ಪ್ರ. ವಾರ್ತೆ ತುಮಕೂರು ಮೇ 29
ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಮತ್ತೆ ತೃತೀಯ ರಂಗ ಕಟ್ಟುವ ಮಾತನಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಬೆಳ್ಳಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತೃತೀಯ ರಂಗಕ್ಕೆ ಚಾಲನೆ ನೀಡುವ ಮಾತುಗಳನ್ನಾಡಿದ್ದರು. ಅಷ್ಟೇ ಅಲ್ಲ, ಈ ಸಂಬಂಧ ದೆಹಲಿಯಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡುವ ಜವಾಬ್ದಾರಿಯನ್ನು ಜಿಎಸ್ಬಿ ಹೆಗಲಿಗೆ ಹೊರಿಸುವುದಾಗಿ ಹೇಳಿದ್ದರು.
ಈಗ ಮತ್ತೆ ಜಿಎಸ್ಬಿ ಬುಧವಾರ ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 100 ಕ್ಕೆ 101 ರಷ್ಟು ತೃತೀಯ ರಂಗ ಸ್ಥಾಪನೆಯಾಗುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹಾಲಿ ದೇಶದ ರಾಜಕೀಯ ಸ್ಥಿತಿ ಪ್ರಾದೇಶಿಕ ಪಕ್ಷಗಳಿಗೆ ಅನುಕೂಲಕರವಾಗಿದೆ. ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ತೃತೀಯ ರಂಗ ಸಾಧ್ಯ. ನಂಬಿಕೆ ಬೇಕು ಅಷ್ಟೆ ಎಂದು ಷರ ಬರೆದಿದ್ದಾರೆ.
ಈಗಾಗಲೇ ಡಿಎಂಕೆ, ಎಸ್ಪಿ, ಬಿಎಸ್ಪಿ ಸೇರಿದಂತೆ ಯುಪಿಎ ಮಿತ್ರಕೂಟದಲ್ಲಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ನೀತಿ ಕುರಿತು ವಿರೋಧ ವ್ಯಕ್ತಪಡಿಸಿವೆ. ವಿಶ್ವಾಸ ಕಳೆದುಕೊಂಡಿವೆ. ಈ ಮೊದಲು ತೃತೀಯ ರಂಗ ಕಟ್ಟುವ ಶಕ್ತಿಯಿರಲಿಲ್ಲ. ಆದರೆ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ಪ್ರಾದೇಶಿಕ ಪಕ್ಷಗಳು ತೃತೀಯ ರಂಗದತ್ತ ಒಲವು ತೋರಿವೆ. ಇವುಗಳ ಜತೆಗೆ ಸಿಪಿಐ, ಸಿಪಿಎಂ ಸೇರಿದಂತೆ ಎಡಪಕ್ಷಗಳು ಸೇರಬೇಕಷ್ಟೆ. ಎನ್ಡಿಎ ಜತೆ ಇರುವ ಅಕಾಲಿದಳದಂತಹ ಪಕ್ಷಗಳು ತೃತೀಯ ರಂಗದ ಜತೆ ಸೇರುವ ಸೂಚನೆಗಳಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಯಾವತಿ, ಮುಲಾಯಂಸಿಂಗ್ ಯಾದವ್ ಅವರ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ತೃತೀಯ ರಂಗದ ವಿಚಾರ ಬಂದಾಗ ಹೊಂದಾಣಿಕೆ ಆಗುತ್ತೆ. ನಂಬಿಕೆಯಿದ್ರೆ ತೃತೀಯ ರಂಗ ಕಟ್ಟಬಹುದು ಎಂದರು.
ಎರಡು ತೃತೀಯ ರಂಗ ಪಕ್ಷಗಳಿವೆ: ರಾಜ್ಯದಲ್ಲಿ ತೃತೀಯ ರಂಗದ ಎರಡು ಪಕ್ಷಗಳಿವೆ. ಒಂದು ಜೆಡಿಎಸ್. ಮತ್ತೊಂದು ಕೆಜೆಪಿ. ಕೆಲವೇ ತಿಂಗಳಲ್ಲಿ ಕೆಜೆಪಿ ತನ್ನ ಶಕ್ತಿ ಏನೆಂಬುದನ್ನು ತೋರಿಸಿದೆ. ಹೀಗಾಗಿ ಕರ್ನಾಟಕದಲ್ಲೀಗ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳಿವೆ. ಹೆಚ್ಚು ಸ್ಥಾನ ಗೆಲ್ಲದಿದ್ದರೂ, ಶೇಕಡವಾರು ಮತ ಪಡೆದು, ಮುಖ್ಯವಾಗಿ ಬಿಜೆಪಿ ಸೋಲಲು ಕಾರಣವಾಗಿದ್ದು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಂಬುದನ್ನು ಮರೆಯಲಾಗದು. ಬಿಜೆಪಿ ಮಣ್ಣು ಮುಕ್ಕಿದ್ದರ ಹಿಂದೆ ಯಡಿಯೂರಪ್ಪನವರ ಶ್ರಮ ಅಪಾರವಾಗಿದೆ. ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ ಎಂದರು.
ಬಿಎಸ್ವೈ ಬಿಜೆಪಿಗೆ ಹೋಗಲ್ಲ: ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಹೋಗಲ್ಲ. ಇದು ಶೇ. 99.99 ರಷ್ಟು ಖಚಿತ. ಬಿಎಸ್ವೈ ಬಿಜೆಪಿಗೆ ಹೋಗುತ್ತಾರೆ ಎಂಬುದು ಕೇವಲ ಊಹಾ-ಪೋಹ. ಈ ಕುರಿತು ತಾವು ಯಡಿಯೂರಪ್ಪನವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. ಬಿಜೆಪಿ ಹೊರತು ಪಡಿಸಿ, ಬಿಎಸ್ವೈ ಯಾವ ಪಕ್ಷದಲ್ಲಿರುತ್ತಾರೋ ಅಲ್ಲಿಯೇ ತಾವಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ. ಬಿಜೆಪಿ ಕೇವಲ ಬೈಟಕ್ಗೆ ಸೀಮಿತವಾದ ಪಕ್ಷ. ಬೈಟಕ್ಗಳಲ್ಲಿ ಡ್ರೈಪ್ರೂಟ್ಸ್ ತಿನ್ನುತ್ತಾ ಒಣ ಚರ್ಚೆ ನಡೆಸುವುದೇ ಬಿಜೆಪಿ ಸಾಧನೆ. ಇದರಿಂದ ಯಾರಿಗೂ ಉಪಯೋಗವಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಏನೂ ಹೇಳಲಾಗದು. ಸಮಯ ಸಂದರ್ಭ ಹೇಗೆ ಬರುತ್ತೋ ಗೊತ್ತಿಲ್ಲ. ಕಂಡಿರೋರ್ಯಾರು. ತಾವು ಕಾಂಗ್ರೆಸ್ಗೆ ಹೋದರೂ ಹೋಗಬಹುದು ಎಂದು ಜಿಎಸ್ಬಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ರಘೋತ್ತಮರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

