ಗ್ರಾಮೀಣರಿಗೆ ಶುದ್ಧ ನೀರು ಪೂರೈಸದಿದ್ದರೆ ತಾ.ಪಂ. ವಿರುದ್ಧ ಹೋರಾಟ: ಶಿವಶಂಕರ್
ತಿಪಟೂರು: ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿಗಳು ನಿರ್ಲಕ್ಷ್ಯ ತಾಳಿ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿ ಈ ಬಗ್ಗೆ ಸಂಬಂದಪಟ್ಟ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಜನಪರ ಹೋರಾಟ ವೇದಿಕೆ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.
ಸರ್ಕಾರ ಗ್ರಾಮೀಣರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೋಟ್ಯಂತರ ರು. ಖರ್ಚು ಮಾಡುತ್ತಿದ್ದರೂ, ಜಿಲ್ಲಾ ಹಾಗೂ ತಾಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಅಮಾಯಕ ಗ್ರಾಮೀಣ ಮಕ್ಕಳು, ಸಾರ್ವಜನಿಕರು ಅಶುದ್ಧ ನೀರು ಕುಡಿಯುವಂತಾಗಿದೆ ಎಂದು ದೂರಿದರು. ತಿಪಟೂರು ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಯವರು ಜನರಿಗೆ ನೀರು ಪೂರೈಕೆ ಮಾಡುವ ಮಿನಿ ಟ್ಯಾಂಕ್ಗಳನ್ನು ಶುದ್ಧಗೊಳಿಸುತ್ತಿಲ್ಲ. ಕೆಲವೆಡೆ ಟ್ಯಾಂಕ್ಗಳಿಗೆ ಮುಚ್ಚಳವೇ ಇಲ್ಲದೆ ಕಸಕಡ್ಡಿ ಬಿದ್ದು ಕೊಳೆಯುತ್ತಿದೆ. ಇದಕ್ಕೆ ಯಾವುದೇ ನೀರು ಶುದ್ಧೀಕರಣಗಳನ್ನು ಬಳಸುತ್ತಿಲ್ಲ. ಟ್ಯಾಂಕ್ ಸುತ್ತ ನೈರ್ಮಲ್ಯೀಕರಣವಿಲ್ಲದೆ ಕೆಲವೆಡೆ ಚರಂಡಿ ನೀರು ಸೇರಿದಂತೆ ಕಲ್ಮಶ ನೀರು ಟ್ಯಾಂಕ್ ಬಳಿ ಸಂಗ್ರಹವಾಗಿರುತ್ತದೆ. ಜೊತೆಗೆ ಟ್ಯಾಂಕ್ ಬದಿಯಲ್ಲಿ ಕಾಂಗ್ರೆಸ್ ಗಿಡ, ಮುಳ್ಳು-ಕಳ್ಳಿಗಿಡಗಳೂ ಸೇರಿದಂತೆ ಗಿಡಗಂಟೆಗಳು ಬೆಳೆದಿದ್ದರೂ ಅದನ್ನು ತೆಗೆಸುವ ಕನಿಷ್ಠ ಅರಿವು ಮತ್ತು ಜವಾಬ್ದಾರಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮರೆತಿದ್ದಾರೆ. ಅದೆಷ್ಟೋ ಗ್ರಾಮಗಳಲ್ಲಿನ ಟ್ಯಾಂಕ್ಗಳಲ್ಲಿ ನಲ್ಲಿಗಳೇ ಸರಿಯಿಲ್ಲದೆ ಕೆಲವೇ ಗಂಟೆಗಳಲ್ಲಿ ವಿನಾಕಾರಣ ನೀರು ಸೋರಿ ಪೋಲಾಗುತ್ತಿದ್ದು, ಹನಿ ಹನಿ ನೀರು ಉಳಿಸಿ ಎಂಬ ಸರ್ಕಾರದ ಘೋಷಣೆ ಕಾಲಕಸವಾಗಿದೆ.
ಒಡೆದ ಪೈಪ್: ನೀರು ಸರಬರಾಜು ಮಾಡಲು ಹೂಳಿರುವ ಪೈಪುಗಳಂತೂ ಒಡೆದುಹೋಗಿ ನೀರು ಪೋಲಾಗುತ್ತಿದ್ದರೂ ಅದನ್ನು ಸರಿಪಡಿಸದೆ ರೋಗಾಣುಗಳು ಅದರೊಂದಿಗೆ ಸೇರಿಕೊಂಡು ಟ್ಯಾಂಕ್ ನೀರು ಮಲಿನಗೊಳ್ಳುತ್ತಿದೆ. ಇಂತಹ ಅನೇಕ ಸಮಸ್ಯೆಗಳು ಗ್ರಾಮ ಪಂಚಾಯಿತಿಗಳಲ್ಲಿ ಕಂಡು ಬರುತ್ತಿದ್ದರೂ ಇದರ ಮೇಲುಸ್ತುವಾರಿ ನೋಡಿಕೊಳ್ಳಬೇಕಾದ ಸಿಬ್ಬಂದಿಯವರು ಗ್ರಾಮೀಣರ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ ಕಾಮಗಾರಿ ಚಿಂತೆಯಲ್ಲಿ ಮುಳುಗಿದ್ದು, ಗ್ರಾಮ ನೈರ್ಮಲ್ಯ ಹಾಗೂ ಶುದ್ಧ ನೀರು ಪೂರೈಕೆಯತ್ತಲೂ ಗಮನಹರಿಸುವಂತೆ ಗ್ರಾಮೀಣ ಜನಪ್ರತಿನಿಧಿಗಳಲ್ಲಿ ಶಿವಶಂಕರ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

