ತುಮಕೂರು

ಗಂಡನನ್ನು ಬಿಟ್ಟ ಪತ್ನಿಗೆ ಪ್ರಿಯಕರನೂ ಸಿಗಲಿಲ್ಲ

Published On :

ಕ.ಪ್ರ.ವಾರ್ತೆ   ಕುಣಿಗಲ್   ಮೇ 30
ಮದುವೆಯಾದ ಗಂಡನನ್ನು  ತ್ಯಜಿಸಿ ಪ್ರಿಯಕರನೇ ಬೇಕೆಂದು ಹೋದ ಯುವತಿಗೆ, ಅತ್ತ  ಗಂಡನೂ ಸಿಗದೆ, ಇತ್ತ ಪ್ರಿಯಕರನೂ ಸಿಗದೆ ತೊಂದರೆಗೆ ಸಿಲುಕಿದ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿಯ ಯಲಗಲವಾಡಿ ಗ್ರಾಮದಿಂದ ವರದಿಯಾಗಿದೆ.
ಯಲಗಲವಾಡಿ ಗ್ರಾಮದ ಶಾರದ ( 22 ವರ್ಷ, ಯುವತಿಯ ಹೆಸರು ಬದಲಿಸಿದೆ) ಕಳೆದ ಮೂರು ವರ್ಷಗಳಿಂದಲೂ ಮನೆಗೆ ಅಡಿಕೆಕಾಯಿ ಸುಲಿಯುವ ಕೆಲಸಕ್ಕೆ ಬರುತ್ತಿದ್ದ ವೆಂಕಟೇಶ (ಹೆಸರು ಬದಲಿಸಲಾಗಿದೆ) ಎಂಬಾತನ ಪ್ರೇಮಪಾಶದಲ್ಲಿ ಸಿಲುಕಿದ್ದಳು. ಆದರೆ, ಯುವತಿಯ ಮನೆಯವರು ಇದೇ 25ರಂದು ಯುವತಿಗೆ ಬೇರೊಂದು ಯುವಕನೊಂದಿಗೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮದುವೆ ಮಾಡಿ, ನಂತರ ಇದೇ 28ರಂದು ಬೀಗರ ಔತಣಕೂಟಕ್ಕಾಗಿ ಯಲಗಲವಾಡಿಗೆ ಕರೆತಂದರು.
ಮೂರ್ನಾಲ್ಕು ವರ್ಷದ ಪ್ರೇಮಪಾಶದಲ್ಲಿ ಸಿಲುಕಿದ್ದ ಪ್ರಿಯಕರ, ತನ್ನ ಪ್ರಿಯತಮೆ ಮದುವೆಯಾದರೂ ಸರಿ, ಆಕೆಯನ್ನೇ ವರಿಸುವುದಾಗಿ ಪ್ರಿಯತಮೆಗೆ ಫೋನ್ ಮಾಡಿ, ಪರಿ ಪರಿಯಾಗಿ ಬೇಡಿಕೊಂಡ. ದೂರ ಹೋಗಿ ಸುಖವಾಗಿ ಬಾಳೋಣ ಎಂದ ಪುಸಲಾಯಿಸಿದ. ಪ್ರಿಯಕರನ  ನೆನಪಿಗೆ ಮನಸೋತ ಪ್ರಿಯತಮೆ ಶಾರದ, ತನ್ನ ಪ್ರೇಮಪ್ರಕರಣವನ್ನು ಹಾಗೂ ಮದುವೆಯಾದ ನಂತರ ತನ್ನ ಪ್ರಿಯತಮ ಇಟ್ಟಿರುವ ಬೇಡಿಕೆ ಬಗ್ಗೆ, ವಿವರವಾಗಿ ತನ್ನ ಗಂಡನ ಬಳಿ ಹೇಳಿಕೊಂಡಳು. ಉದಾರಿಯಾದ ಗಂಡ, ಪತ್ನಿ ಎಲ್ಲಾದರೂ ಚೆನ್ನಾಗಿ ಬಾಳುವಂತೆ ಹರಸಿ, ತಾನು ಕಟ್ಟಿರುವ ತಾಳಿ ನೀಡಿ ಹೋಗು ಎಂದಾಗ, ಯುವತಿ ತಾಳಿ ಬಿಚ್ಚುಕೊಟ್ಟು, ಪ್ರಿಯತಮನೊಂದಿಗೆ ಬೇರೆಡೆ ಹೋಗಲು ಸಿದ್ಧತೆ ನಡೆಸುತ್ತಿದ್ದಳೆನ್ನಲಾಗಿದೆ.
ಬಯಲಾದ ಪ್ರಣಯ ಪ್ರಸಂಗ: ಈ ನಡುವೆ ನವವಧುವಿನ ಪ್ರಣಯ ಪ್ರಸಂಗ ಬಯಲಾಗಿ, ಪ್ರಿಯಕರನ ಮನೆಯವರೊಂದಿಗೆ ವಾಗ್ವಾದ ನಡೆಯಿತು. ಪ್ರಿಯತಮೆಯ ಕಡೆಯವರು, ಪ್ರಿಯಕರನ ಮನೆಯವರ ಮೇಲೆ ಗುರುವಾರ ಬೆಳಗ್ಗೆ ದಾಂಧಲೆ ನಡೆಸಿದರನ್ನೆಲಾಗಿದೆ. ತನ್ನ ಪ್ರೇಮಪ್ರಕರಣ ಬಹಿರಂಗಗೊಂಡಿರುವ ಹಾಗೂ ತನ್ನ ಮನೆಯವರ ಮೇಲೆ ಹಲ್ಲೆ ನಡೆಸಿದ್ದರಿಂದ ಬೇಸರಗೊಂಡ ಪ್ರಿಯಕರ ಈಗ, ಪ್ರಿಯತಮೆ ಈಗಾಗಲೆ ಮದುವೆಯಾಗಿದ್ದಾಳೆ. ಆದ್ದರಿಂದ ಆಕೆಯನ್ನು ಪುನಃ ವರಿಸಲಾರೆ ಎಂಬ ನೆಪವೊಡ್ಡಿ, ಕೈಚೆಲ್ಲಿದ್ದರೆ, ಅತ್ತ ಪ್ರಿಯತಮೆ, ನಾನು ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟಿದ್ದು ಈತನನ್ನೆ ವರಿಸುವುದಾಗಿ ತಿಳಿಸಿದಳೆನ್ನಲಾಗಿದೆ. ಸಮಸ್ಯೆ ಗ್ರಾಮದಲ್ಲಿ ಪರಿಹಾರ ಕಾಣದೆ ಗೊಂದಲವಾದ ಕಾರಣ ಗುರುವಾರ ಸಂಜೆ ಪ್ರೇಮಿಗಳಿಬ್ಬರನ್ನು ಎರಡೂ ಮನೆಯವರು ಕುಣಿಗಲ್ ಠಾಣೆಗೆ ಕರೆತಂದು, ಸಮಸ್ಯೆ ಬಗೆಹರಿಸಲು ಕಸರತ್ತು ನಡೆಸುತ್ತಿದ್ದರೆ, ಯುವತಿಯ ಸ್ಥಿತಿಯಂತೂ ಗ್ರಾಮಾಂತರ ಪ್ರದೇಶದ ಗಾದೆಯಂತೆ ಎರಡೂ ಕಣ ಕಾದು ದಾಸಯ್ಯ ಕೆಟ್ಟ ಎಂಬತಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.