ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಲಿ
ಕ.ಪ್ರ. ವಾರ್ತೆ ತುಮಕೂರು ಮೇ 30
ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಪ್ರಯತ್ನ ಎಂದಿಗೂ ನಿಷ್ಪಲವಾಗುವುದಿಲ್ಲ ಎಂದು ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಸದಾಶಿವನಗರದಲ್ಲಿ ಎನ್. ಶಿವರುದ್ರಯ್ಯ ಕನ್ನಡ ಬಳಗದ ಉದ್ಘಾಟನೆ ಹಾಗೂ ಶರಣ ಬಸಪ್ಪನವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಹಂತವನ್ನು ಮುಟ್ಟುವುದು ವಿಕಾಸದ ಹಂತದಿಂದ ಸುಲಭವಲ್ಲ. ನಿಜವಾದ ಅರ್ಥದಲ್ಲಿ ಮನುಷ್ಯ ಬದುಕಿನೊಂದಿಗೆ ಹೋರಾಟ ಮಾಡಬೇಕು. ಜೀವನವೆನ್ನುವುದು ನಿರಂತರ ಹೋರಾಟದಿಂದ ಕೂಡಿರುತ್ತದೆ. ಹಾಗಾಗಿ ನಿರಂತರ ಪ್ರಯತ್ನದ ಮೂಲಕ ಜೀವನವನ್ನು ಹಸನಾಗಿಸಿಕೊಳ್ಳಬೇಕು. ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಶಿಕ್ಷಣ ಮನುಷ್ಯನನ್ನು ಮೃಗೀಯತೆಯಿಂದ ಮನುಷ್ಯತ್ವದ ಕಡೆ ಕೊಂಡೊಯ್ಯುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನು ಇಟ್ಟುಕೊಳ್ಳಬೇಕು. ನಮ್ಮ ಕೆಲಸದ ವಿಷಯದಲ್ಲಿ ಉತ್ಸಾಹ ಅತಿ ಮುಖ್ಯ. ಸೋಲಿಗೆ ಎಂದೂ ಹೆದರಿಕೊಳ್ಳಬಾರದು. ತಮ್ಮ ಪ್ರಯತ್ನದ ಮೇಲೆ ಯಾವಾಗಲೂ ನಂಬಿಕೆ ಇಡಬೇಕು ಎಂದರು.
ರಾಜಕೀಯ ದೃಷ್ಟಿಯಿಂದಲ್ಲ: ಹಾಗೆಯೇ ಹಿಂದೂ ಧರ್ಮದ ಶ್ರೇಷ್ಠತೆಯ ಬಗ್ಗೆ ಮಾತನಾಡಿ ಹಿಂದೂ ಧರ್ಮವನ್ನು ಭಾರತೀಯ ಸನಾತನ ಮೌಲ್ಯಗಳ ಹಿನ್ನೆಲೆಯಲ್ಲಿ ವಿವರಿಸಬೇಕೆ ಹೊರೆತು ರಾಜಕೀಯ ದೃಷ್ಟಿಯಿಂದ ಅಲ್ಲ. ಉಪನಿಷತ್ಗಳನ್ನು ಹೇಳುವ ಋಷಿಗಳು ಸಹ ರೈತರಾಗಿದ್ದಾರೆ. ಹಾಗೂ ಪಶುಸಂಗೋಪನೆ ಮಾಡುತ್ತಿದ್ದರು ಎಂದು ಹೇಳಿದರು.
ಸಮಾಜದಲ್ಲಿನ ಶೋಷಣೆಗಳು ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯುತ್ತದೆಯೇ ಹೊರೆತು ಜಾತಿ ಮತ್ತು ಧರ್ಮದಿಂದಲ್ಲ. ಇತಿಹಾಸವನ್ನು ಸೃಷ್ಟಿಸುವವರು ಕ್ರಿಯಾಶೀಲ ನಿಸ್ವಾರ್ಥಿಗಳು ಎಂದರು.
ವ್ಯಕ್ತಿಗೆ ಬದಲಾವಣೆ ಅನಿವಾರ್ಯ. ಮನುಷ್ಯ ಕಲಿಯುವುದೇ ತಪ್ಪಿನಿಂದ. ಹಾಗಾಗಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ತಮ್ಮ ಬಗ್ಗೆ ಆತ್ಮವಿಶ್ವಾಸ ಇಟ್ಟುಕೊಳ್ಳಬೇಕು. ಹಾಗೂ ಆತ್ಮಗೌರವ ಕಾಪಾಡಿಕೊಳ್ಳಬೇಕು ಮತ್ತು ಆತ್ಮನಿಯಂತ್ರಣ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚೇತನ ಪ್ರೌಢಶಾಲೆಯ ವಿದ್ಯಾರ್ಥಿ ಕೃಷ್ಣ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ಶಂಕರಪ್ಪ ವಹಿಸಿದ್ದರು. ಎನ್. ಶಿವರುದ್ರಯ್ಯ, ಕೆ.ಆರ್. ರಾಮದಾಸ್, ಚಂದ್ರಶೇಖರಯ್ಯ ಉಪಸ್ಥಿತರಿದ್ದರು. ಚಿತ್ರಲಿಂಗಯ್ಯ ನಿರೂಪಿಸಿ ವಂದಿಸಿದರು. ಮೇಘನ ಮತ್ತು ಚಂದನ ಪ್ರಾರ್ಥಿಸಿದರು. ಬೃಂದ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

