ಅಧಿಕಾರಿಗಳೇ ದಲಿತರು ಭಿಕ್ಷೆ ಕೇಳುತ್ತಿಲ್ಲ, ಎಚ್ಚರವಿರಲಿ
ತುಮಕೂರು: ಅಧಿಕಾರಿಗಳೇ ದಲಿತರು ಬಿಕ್ಷೆ ಕೇಳುತ್ತಿಲ್ಲ. ಸಂವಿಧಾನದ ಆಶಯ ಈಡೇರಿಸುವಂತೆ ಕೇಳುತ್ತಿದ್ದಾರೆ. ಎಚ್ಚರವಿರಲಿ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ಜಿಪಂ ಸಭಾಂಗಣದಲ್ಲಿ ಏರ್ಪಾಟಾಗಿದ್ದ ಜಿಲ್ಲೆಯ ದಲಿತರ ಕುಂದು-ಕೊರತೆ ಸಭೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಏನಾಗಿದೆಯೋ ಗೊತ್ತಿಲ್ಲ. ಇನ್ನು ಮುಂದೆ ದಲಿತರು ನನ್ನವರೆಗೂ ಸಮಸ್ಯೆ ಹೊತ್ತು ತರಬಾರದು. ತಾಲೂಕುವಾರು ಸಂಬಂಧಪಟ್ಟ ಅಧಿಕಾರಿಗಳು ಯಾರಿದ್ದಾರೋ ಅವರೇ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು. ಫೈಲುಗಳನ್ನು ವರ್ಷಗಟ್ಟಲೇ ಕೊಳೆ ಹಾಕುವಂತಿಲ್ಲ. ಸಮಸ್ಯೆ ಹೊತ್ತು ಬರುವವರನ್ನು ಸತಾಯಿಸುವಂತಿಲ್ಲ. ನಾನಂತೂ ದಲಿತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ದಲಿತರಿಗೆ ಅನ್ಯಾಯವಾದರೆ ಸಹಿಸಲಾರೆ. ದಲಿತರಿಗೆ ಅನ್ಯಾಯ ಮಾಡುವುದು ಅಕ್ಷಮ್ಯ. ಅನ್ಯಾಯವಾದಲ್ಲಿ ಕಾನೂನು ಕ್ರಮ ಖಚಿತ ಎಂದು ಸತ್ಯಮೂರ್ತಿ ಎಚ್ಚರಿಕೆ ನೀಡಿದರು.
ಸಮಸ್ಯೆ ಬಗೆಹರಿಸಿ: ದಲಿತರ ಸಮಸ್ಯೆ ಕುರಿತಂತೆ ಇಲ್ಲಿಯವರೆಗೂ ಚರ್ಚಿಸಿ, ಪರಿಶೀಲಿಸಿದ್ದು ಸಾಕು. ಇನ್ನು ಮುಂದೆ ಕಟ್ಟ ನಿಟ್ಟಾಗಿ ಕೆಲಸ ಮಾಡಿ. ದಲಿತರ ಸಮಸ್ಯೆ ಬಗೆಹರಿಸಿ ಎಂದು ಕಟುವಾಗಿ ನುಡಿದರು.
ದಲಿತರು ಕೇಳುತ್ತಿರುವುದು ಸಂವಿಧಾನ ನೀಡಿರುವ ಹಕ್ಕನ್ನೇ ಹೊರತು, ಭಿಕ್ಷೆಯನ್ನಲ್ಲ. ಅದು ಅವರ ಮೂಲಭೂತ ಹಕ್ಕು. ಸಮಸ್ಯೆ ಪರಿಹರಿಸಿ, ಅವರಿಗೆ ಸಲ್ಲಬೇಕಾದ ಸೌಲಭ್ಯವನ್ನು ಸತಾಯಿಸದೆ ಕೂಡಲೇ ಕಲ್ಪಿಸಿ. ಇದು ನಮ್ಮ ಮೂಲಭೂತ ಕರ್ತವ್ಯ. ಇಲ್ಲದೇ ಹೋದರೆ ಕಾನೂನಿನ ಕ್ರಮ ಎದುರಿಸಿ ಎಂದು ಸತ್ಯಮೂರ್ತಿ ಖಡಕ್ಕಾಗಿ ನುಡಿದರು.
ನಮ್ಮ ತಲೆ ಹೋಗುತ್ತದೆ: ಕೆಳ ಹಂತದ ಅಧಿಕಾರಿಗಳು ಮಾಡುವ ತಪ್ಪಿಗೆ ಮೇಲಾಧಿಕಾರಿಗಳಾದ ನಮ್ಮ ತಲೆ ಹೋಗುತ್ತದೆ. ಸರ್ಕಾರಕ್ಕೆ ನಾವು ಉತ್ತರ ಹೇಳಬೇಕಾಗುತ್ತದೆ. ಸಬೂಬು ಹೇಳದೆ ಕೆಲಸ ಮಾಡಿ. ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ, ಕೂಡಲೇ ನಮ್ಮ ಗಮನಕ್ಕೆ ತನ್ನಿ. ಸಮಸ್ಯೆ ಬಗೆಹರಿಸಿ. ಒಳ್ಳೆಯ ಹೆಸರು ಪಡೆಯಿರಿ. ನಮಗೂ ಒಳ್ಳೆಯ ಹೆಸರು ತನ್ನಿ ಎಂದು ಜಿಲ್ಲಾಧಿಕಾರಿಗಳು ಕೆಳ ಹಂತದ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಉದ್ಯೋಗಕ್ಕೆ ಆದ್ಯತೆ: ತುಮಕೂರು ಜಿಲ್ಲೆಯಲ್ಲಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ದಲಿತರ ಸೂರು, ಸ್ಮಶಾನ ಹಾಗೂ ಉದ್ಯೋಗಕ್ಕೆ ಮೊದಲ ಆದ್ಯತೆ ನೀಡಲಾಗುವುದು. ದಲಿತರ ಸ್ಮಶಾನ ಸಮಸ್ಯೆ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2730 ಗ್ರಾಮಗಳಿವೆ. ಇವುಗಳಲ್ಲಿ ಬೇಚರಾಕ್ ಗ್ರಾಮಗಳ ಸಂಖ್ಯೆ 219. 2511 ಜನವಸತಿ ಗ್ರಾಮಗಳಿವೆ. ಸ್ಮಶಾನ ಇರುವ ಗ್ರಾಮಗಳ ಸಂಖ್ಯೆ 1445. ಸ್ಮಶಾನ ಇಲ್ಲದ ಗ್ರಾಮಗಳಿಗೆ ಜಮೀನು ಗುರುತಿಸುವ ಕೆಲಸ ನಡೆದಿದೆ. 410 ಗ್ರಾಮಗಳಿಗೆ ಪ್ರಸ್ತಾವನೆ ಬಂದಿದೆ. ಕೆಲವು ಕಡೆ ಚಿತಾಗಾರ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ.
ಸ್ಮಶಾನ ಇಲ್ಲದ ಗ್ರಾಮಗಳ ಸಂಖ್ಯೆ ತಾಲೂಕುವಾರು ಇಂತಿದೆ. ತುಮಕೂರು 71, ಗುಬ್ಬಿ 101, ಕುಣಿಗಲ್ 50, ತಿಪಟೂರು 18, ತುರುವೇಕೆರೆ 13, ಚಿಕ್ಕನಾಯಕನಹಳ್ಳಿ 60, ಮಧುಗಿರಿ, 30, ಕೊರಟಗೆರೆ 83, ಶಿರಾ 57, ಪಾವಗಡ 89, ಜಿಲ್ಲಾ ಮಟ್ಟದ ದಲಿತರ ಕುಂದು-ಕೊರತೆ ಹಾಗೂ ಹಿತರಕ್ಷಣಾ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಎಸ್ಪಿ ರಮಣಗುಪ್ತ, ಎಎಸ್ಪಿ ಲಕ್ಷ್ಮಣ್, ಜಿಲ್ಲಾ ಮಟ್ಟದ ಅಧಿಕಾರಿಗಳು, ದಲಿತ ಮುಖಂಡರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

