ಕನ್ನಡಿಗರು ಕನ್ನಡ ಭಾಷೆ ಬೆಳವಣಿಗೆಗೆ ಕೊಡುಗೆ ನೀಡಲಿ
ಕನ್ನಡಪ್ರಭ ವಾರ್ತೆ, ತುಮಕೂರು, ನ.27
ಇಂದಿನ ಕನ್ನಡಿಗರ ಕನ್ನಡ ಪ್ರೇಮ ಕನ್ನಡ ಭಾಷೆ ಹಾಗೂ ಕರ್ನಾಟಕದ ವೈಭವವನ್ನು ಕೊಂಡಾಡುವುದಕ್ಕೆ ಸೀಮಿತವಾಗದೆ, ನಾಡು ನುಡಿಯ ವೈಭವವನ್ನು ಹೆಚ್ಚಿಸಲು ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ಕರೆ ನೀಡಿದರು.
ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ 5 ದಿನಗಳ ಕಾಲ ಹಮ್ಮಿಕೊಂಡಿದ್ದ 58ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಜಗತ್ತಿಗೆ ಶಾಸ್ತ್ರೀಯ ಸಂಗೀತ, ನಾಟಕ ಇತ್ಯಾದಿ ಪ್ರಕಾರಗಳಲ್ಲಿ ಕರ್ನಾಟಕದ ಕೊಡುಗೆಯು ಅಗ್ರಗಣ್ಯವಾಗಿದೆ ಎಂದು ನುಡಿದರು.
ಭರತಭೂಮಿ ಧನ್ಯ: ಪ್ರಥಮ ಪಿಯುಸಿ ಕನ್ನಡ ಪಠ್ಯದಲ್ಲಿ ಅಳವಡಿಸಲಾಗಿರುವ ನಾಗತಿಹಳ್ಳಿ ಚಂದ್ರಶೇಖರರ ಬುದ್ಧ ಬಿಸಿಲೂರಿನವನು ಗದ್ಯಭಾಗವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಜಗತ್ತಿನ ದುಃಖ, ನೋವುಗಳಿಗೆ ಸುಲಭ ಪರಿಹಾರೋಪಾಯಗಳನ್ನು ಕ್ರಿ.ಪೂ. ಕಾಲದಲ್ಲಿಯೇ ಬುದ್ಧ ನೀಡಿದ್ದಾನೆ. ಜಗತ್ತಿನ ಶ್ರೇಷ್ಠ ದಾರ್ಶನಿಕ ಸಾಲಿನಲ್ಲಿ ಪ್ರಥಮನಾದ ಬುದ್ಧ ಜಗತ್ತಿನ ಏಳ್ಗೆಗಾಗಿ ಅಹರ್ನಿಶಿ ದುಡಿದವನು. ಅಂತಹ ಶ್ರೇಷ್ಠ ದಾರ್ಶನಿಕರನ್ನು ಪಡೆದ ಭರತಭೂಮಿ ಧನ್ಯ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ಹಿರಿಯ ಸಾಹಿತಿ, ಚಿಂತಕ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಬಿ. ಸಿದ್ಧಯ್ಯನವರುಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಮುಂತಾದ ಶರಣರು ಕನ್ನಡದ ಶಕ್ತಿ. ಇಡೀ ಜಗತ್ತಿಗೆ ಪಾಠ ಹೇಳುವ ಶಕ್ತಿ ಹಾಗೂ ಜ್ಞಾನ ಸಂಪತ್ತು ಕನ್ನಡಕ್ಕಿದೆ ಎಂದರು.
ಜಾತ್ಯತೀತ ಜೀವನ ನಡೆಸಲಿ: ಕನ್ನಡವೆಂದರೆ ಸ್ವಾಭಿಮಾನ ಹಾಗೂ ಆತ್ಮಗೌರವ. ಅಧಿಕಾರ, ಸಂಪತ್ತು, ಜಾತಿ, ಪದವಿಗಾಗಿ ಯಾವ ಕನ್ನಡಿಗನೂ ಕನ್ನಡದ ಸ್ವಾಭಿಮಾನವನ್ನು ಮಣಿಸಬಾರದು ಹಾಗೂ ವೈಜ್ಞಾನಿಕ, ವೈಚಾರಿಕ, ಜಾತ್ಯತೀತ ಜೀವನ ನಡೆಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ನಾಗಭೂಷಣ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು 5 ದಿನಗಳ ಕಾಲ ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಕಾಲೇಜಿನ ಪ್ರಾಂಶುಪಾಲರು, ಕನ್ನಡ ವಿಭಾಗ ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಕೆ.ಆರ್. ರಾಮದಾಸ್ರವರು ಐದು ದಿನಗಳ ರಾಜ್ಯೋತ್ಸವ ಸಂಭ್ರಮ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಸಿಂಧು ಸ್ವಾಗತಿಸಿ, ಸಂಧ್ಯಾ ವಂದಿಸಿದರು. ಚೈತ್ರ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

