ತುಮಕೂರು

ತಂತ್ರಜ್ಞಾನದ ಮೂಲಕ ಮೋದಿ ಅಲೆ

Published On :

ಕ.ಪ್ರ. ವಾರ್ತೆ  ತುಮಕೂರು  ಏ.3
ದೇಶದಲ್ಲಿ ತಂತ್ರಜ್ಞಾನದ ಮೂಲಕ ಮೋದಿ ಅಲೆ ಸೃಷ್ಟಿಸಲಾಗಿದೆಯೇ ಹೊರತು, ನಿಜವಾಗಿ ಮೋದಿ ಅಲೆ ಎಂಬುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಕುರಿತಂತೆ ಈಗಾಗಲೇ ಹಾಡಿ, ಹೊಗಳಲಾಗಿದೆ. ಇಂಟರ್ ನೆಟ್ ಆಧಾರಿತ ಪ್ರಚಾರ ಮುಗಿಲು ಮುಟ್ಟಿದ್ದು, ಆಕಾಶದಲ್ಲೂ ಬಿಜೆಪಿ, ಮೋದಿ ಪ್ರಚಾರ ಕೈಗೊಳ್ಳಲಾಗಿದೆ. ಬಿಜೆಪಿ ಅಬ್ಬರದ ಪ್ರಚಾರ ಕೈಗೊಂಡಿದ್ದು, ಜನರಲ್ಲಿ ಭ್ರಮೆ ಮೂಡಿಸಲಾಗುತ್ತಿದೆ. ದೇಶಕ್ಕೆ ಮೋದಿ ಅನಿವಾರ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಗುಜರಾತ್ ಮಾದರಿ ಅಭಿವೃದ್ಧಿ ಎಂದು ಪ್ರಚಾರ ಕೈಗೊಳ್ಳಲಾಗಿದೆ. ಆದರೆ ಇವೆಲ್ಲಾ ವಾಸ್ತವಾಂಶಕ್ಕೆ ದೂರವಾಗಿದ್ದು, ಭ್ರಮೆ ಮೂಡಿಸುವ ಕೆಲಸಗಳಾಗಿದ್ದು, ತಂತ್ರಜ್ಞಾನದ ಮೂಲಕ ತಂತ್ರ ರೂಪಿಸುವ ಕೆಲಸಗಳಷ್ಟೇ ಎಂದು ಜಯಚಂದ್ರ ಅಭಿಪ್ರಾಯಪಟ್ಟರು.
ಮೋದಿ ನೇರ ಹೊಣೆ: ನರೇಂದ್ರ ಮೋದಿಯವರ ಸಿಎಂ ಅವಧಿಯಲ್ಲಿ ನಡೆದ ಗುಜರಾತ್ ಹತ್ಯಾಕಾಂಡಕ್ಕೆ
ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮೋದಿಯವರೇ ನೇರ ಹೊಣೆ. ಈ ಕುರಿತು ಸಾರ್ವಜನಿಕವಾಗಿ ಕ್ಷಮೆ ಕೇಳದ ಮೋದಿ, ಪ್ರಧಾನ ಮಂತ್ರಿ ಆಗಿಯೇ ಬಿಟ್ಟಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ. ಇನ್ನು ಆರ್ಎಸ್ಎಸ್ ಇತಿಹಾಸ ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯಾ ನಂತರದಲ್ಲಿ ಎಲ್ಲರಿಗೂ ಗೊತ್ತಿರುವಂತದ್ದೇ ಎಂದರು.
ಭ್ರಮೆ ಸೃಷ್ಟಿ: ಅತಿಯಾದ ಪ್ರಚಾರ, ಭ್ರಮೆ ಒಳ್ಳೆಯದಲ್ಲ ಎಂದು ಬಿಜೆಪಿಗೆ ಬುದ್ಧಿ ಮಾತು ಹೇಳಿದ ಟಿಬಿಜೆ, ಬಿಜೆಪಿ ಆಕಾಶದಲ್ಲಿ ತೇಲಾಡುತ್ತಿದೆ. ಮೋದಿ ಪ್ರಧಾನಿಯಾಗೇ ಬಿಟ್ಟಿದ್ದಾರೆ ಎಂಬ ಭ್ರಮೆ ಸೃಷ್ಟಿಸಲಾಗಿದೆ ಎಂದು, ಟೀಕಿಸಿದರು. ಇಂದಿಗೂ ಕಾಂಗ್ರೆಸ್ ಶಕ್ತಿಯಿರುವುದು ಹಳ್ಳಿಗಳಲ್ಲಿ. ಕಾಂಗ್ರೆಸ್ಗೆ ಭ್ರಮೆಯಿಲ್ಲ. ಸದ್ದು-ಗದ್ದಲವಿಲ್ಲದೆ ಪ್ರಚಾರ ನಡೆದಿದೆ. ತುಮಕೂರು ಜಿಲ್ಲೆ 11 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದ್ದು, ತುಮಕೂರು ಲೋಕಸಭಾ ಕ್ಷೇತ್ರ ಅತ್ಯಂತ ದೊಡ್ಡ ಕ್ಷೇತ್ರವಾಗಿದೆ. ಈವರೆಗೆ ನಾಮಪತ್ರ ಸಲ್ಲಿಸಿದಂದಿನಿಂದ ಪ್ರಚಾರ ಜೋರಾಗಿಯೇ ನಡೆದಿದ್ದು, ಇನ್ನು ಮುಂದೆ ಮತ್ತಷ್ಟು ಬಿರುಸುಗೊಳ್ಳಲಿದೆ. ಈ ಲೋಕಸಭಾ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಏ. 7 ರಂದು, ಮುಖ್ಯಮಂತ್ರಿ ಸಿದ್ದರಾಮಯ್ಯ 10 ರಂದು ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಷಫಿ ಅಹಮದ್, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.