ತುಮಕೂರು

ಬಿಎಂಟಿಸಿ ದರ ಏರಿಕೆ; ಬೀದಿಗಿಳಿದ ಸಂಘಟನೆಗಳು

Published On :

ಬೆಂಗಳೂರು: ಬಿಎಂಟಿಸಿ ಪ್ರಯಾಣ ದರ ಏರಿಕೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ನಗರದಲ್ಲಿ ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಜಟಕಾ ಬಂಡಿಯಲ್ಲಿ ಪ್ರಯಾಣಿಸುವ ಮೂಲಕ ಪ್ರತಿಭಟನೆ ನಡೆಸಿದರು.  ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಇಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರ ರಾತ್ರೋರಾತ್ರಿ ಹೆಚ್ಚಿಸಿರುವುದು ಖಂಡನೀಯ. ನೀತಿ ನಿಯಮಗಳಿಲ್ಲದೆ, ಸಾರ್ವಜನಿಕರೊಂದಿಗೆ ಚರ್ಚಿಸದೆ ದರ ಏರಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಜನತೆಯನ್ನು ಕಂಗೆಡಿಸಿದೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು. ಆಡಳಿತ ವ್ಯವಸ್ಥೆ ಸರಿಪಡಿಸಿ, ಆದಾಯ ಸೋರಿಕೆ ನಿಯಂತ್ರಿಸುವ ಬದಲು ಅವೈಜ್ಞಾನಿಕವಾಗಿ ದರ ಏರಿಸಿರುವ ಕ್ರಮ ಸರಿಯಲ್ಲ. ಹೀಗಾಗಿ ಕೂಡಲೇ ದರ ಏರಿಕೆ ವಾಪಾಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಯುಸಿಐ ಪ್ರತಿಭಟನೆ: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಹೆಚ್ಚಳ ಮಾಡುವ ಮೂಲಕ ಸರ್ಕಾರ ಮತದಾರರ ಬೆನ್ನಿಗೆ ಚೂರಿ ಇರಿದಿದೆ ಎಂದು ಎಸ್‌ಯುಸಿಐ ಜಿಲ್ಲಾ ಸದಸ್ಯ ಪ್ರಕಾಶ್ ಆರೋಪಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಸ್‌ಯುಸಿಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ 48 ಲಕ್ಷ ಜನರು ಪ್ರಯಾಣಕ್ಕೆ ಬಿಎಂಟಿಸಿ ಬಸ್‌ನ್ನೆ ನೆಚ್ಚಿಕೊಂಡಿದ್ದು ದರಿ ಏರಿಕೆ ನಿರ್ಧಾರ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬರೆ ಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ದೆಹಲಿ, ಮುಂಬೈ, ಚೆನ್ನೈ ನಗರಗಳಲ್ಲಿ ಕನಿಷ್ಠ ಪ್ರಯಾಣ ದರ 3 ಇದ್ದು, ಬೆಂಗಳೂರಿನಲ್ಲಿ ಅದರ ದುಪ್ಪಟ್ಟು ಅಂದರೆ 6 ಇದೆ. ಇನ್ನು ದಿನದ ಪಾಸು ದರ 10 ಹೆಚ್ಚಾಗಲಿದೆ.
ಹವಾ ನಿಯಂತ್ರಿತ ಬಸ್‌ಗಳ ಖರೀದಿ ಮೂಲಕ ಹಣ ಪೋಲು ಮಾಡುತ್ತಿರುವ ಬಿಎಂಟಿಸಿ, ಗಾರ್ಮೆಂಟ್ಸ್ ನೌಕರರು, ಕೂಲಿ ಕಾರ್ಮಿಕರು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳನ್ನು ಕಂಗಾಲಾಗಿಸಿದೆ ಎಂದು ಪ್ರಕಾಶ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.