ತುಮಕೂರು

ಚಿಮ್ಮನಹಳ್ಳಿಯಲ್ಲಿ ಸಂಸ್ಕಾರ ಜಾಗೃತಿ ಶಿಬಿರ

Published On :

ಕ.ಪ್ರ. ವಾರ್ತೆ ್ಣ ತುರುವೇಕೆರೆ ್ಣ ಏ. 28
ತಾಲೂಕಿನ ಚಿಮ್ಮನಹಳ್ಳಿಯ ಶ್ರೀ ಮುನೀಶ್ವರಸ್ವಾಮಿ ಚಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ಮಹಾ ಮಹಿಮ ಶ್ರೀ ಮುನೀಶ್ವರಸ್ವಾಮಿ ಮಹಾ ಸಂಸ್ಥಾನ ದಾಸೋಹ ಮಠದ ಆಶ್ರಯದಲ್ಲಿ ಪುರಾಣ, ಇತಿಹಾಸ ಪ್ರಸಿದ್ಧವಾದ ಮಹಾಶೈವ ಸನ್ನಿಧಿ ಸುಕ್ಷೇತ್ರ ಮುನೀಶ್ವರ ನಗರದಲ್ಲಿ ಬೇಸಿಗೆ ರಜೆಯ ಅಂಗವಾಗಿ 4 ನೇ ವರ್ಷದ ರಾಜ್ಯ ಮಟ್ಟದ ಸಂಸ್ಕಾರ ಜಾಗೃತಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಕ್ಷೇತ್ರದ ಆಡಳಿತಾಧಿಕಾರಿ ಜವರಪ್ಪ ತಿಳಿಸಿದ್ದಾರೆ.  ಬೆಳೆಯುವ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಸೂಕ್ತ ತಿಳುವಳಿಕೆ ನೀಡುವಲ್ಲಿ ವಿಫಲವಾಗಿರುವುದರಿಂದ ಇಂತಹ ಶಿಬಿರಗಳನ್ನು ಏರ್ಪಡಿಸುವುದು ತಮ್ಮ
ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದರು. ಮಕ್ಕಳಿಗೆ ಸೂಕ್ತ ತಿಳಿವಳಿಕೆಯ ಕೊರತೆ ಎದುರಾಗುತ್ತಿದೆ. ನಮ್ಮ ಸಂಸ್ಥೆಯ ವತಿಯಿಂದ ಮೇ ತಿಂಗಳ 3 ರಿಂದ 18 ರವರೆಗೆ ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ಬಿಂಬಿಸುವುದು, ಗುರುಹಿರಿಯರು, ಮಾತಾ ಪಿತೃಗಳ ಬಗ್ಗೆ ಗೌರವಭಾವನೆ ಮೂಡಿಸುವುದು, ದೈವತ್ವದಲ್ಲಿ ನಂಬಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸುವುದು, ಗ್ರಾಮಾಂತರ ಪ್ರದೇಶದಲ್ಲಿನ ದೇವಾಲಯಗಳಲ್ಲಿ ಶಾಸ್ತ್ರೋಕ್ತವಾಗಿ ಮಂತ್ರ ಪಠಣ ಮಾಡುವುದು, ಪೂಜಾ ಕಾರ್ಯಗಳನ್ನು ಮಾಡುವುದು ಮುಂತಾದ ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುವುದು ಎಂದು ಜವರಪ್ಪ ತಿಳಿಸಿದ್ದಾರೆ.
ರಾಜ್ಯಾದ್ಯಂತ ಮಕ್ಕಳ ಆಗಮನ: ರಾಜ್ಯದ ವಿವಿದೆಡೆಯಿಂದ 500 ಕ್ಕೂ ಹೆಚ್ಚು ಮಕ್ಕಳು ಆಗಮಿಸಲಿದ್ದು  ಈ ಶಿಬಿರದ ಲಾಭ ಪಡೆಯಲಿದ್ದಾರೆ. ಕಳೆದ ಮೂರು ಶಿಬಿರಗಳಲ್ಲಿಯೂ ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. 10 ವರ್ಷ ಮೇಲ್ಪಟ್ಟ ಮಕ್ಕಳು, ಲಿಂಗಭೇದವಿಲ್ಲದೆ ಸೇರ್ಪಡೆಯಾಗಬಹುದು. ಶಿಬಿರದಲ್ಲಿ ಮಕ್ಕಳಿಗೆ ಯೋಗ, ಪ್ರಾಣಾಯಾಮ ತರಬೇತಿ, ಪ್ರಾರ್ಥನೆ, ಸಮಯ ಸ್ತೋತ್ರ, ಸುಭಾಷಿತ, ಭಜನೆ, ಅಷ್ಟಕಗಳು, ಸಂಕೀರ್ತನೆಗಳ ಕಲಿಕೆ, ಸಂಕಲ್ಪ, ಪ್ರಾಯೋಗಿಕ  ಪೌರೋಹಿತ್ಯ, ಪಂಚಾಂಗ ಪರಿಚಯ, ದಿನ ಶುದ್ಧಿ, ಸ್ಪೋಕನ್ ಇಂಗ್ಲಿಷ್, ಮೊದಲಾದ ಧಾರ್ಮಿಕ ಆಚರಣೆಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಜವರಪ್ಪ ತಿಳಿಸಿದರು. ಭಾಗವಹಿಸುವ ಎಲ್ಲಾ ಮಕ್ಕಳಿಗೆ ಉಚಿತ ವಸತಿ, ಊಟ, ಪಠ್ಯ ಪುಸ್ತಕಗಳು, ಲೇಖನ ಸಾಮಗ್ರಿಗಳನ್ನು ಒದಗಿಸಲಾಗುವುದು. ಶಿಬಿರದ ಅಂತಿಮ ದಿನದಂದು ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಶಿಬಿರದ ವೇಳೆ ತಾವು ಕಲಿತ ಎಲ್ಲಾ ವಿದ್ಯೆಗಳನ್ನು ಸಾರ್ವಜನಿಕರ ಎದುರು ಪ್ರದರ್ಶಿಸುವರು ಎಂದು ಜವರಪ್ಪ ಹೇಳಿದರು. ಈ ಎಲ್ಲಾ ಶಿಬಿರದ ನೇತೃತ್ವವನ್ನು ವಿದ್ವಾನ್ ಮೈಸೂರು ಶ್ರೀನಿವಾಸ್ ಮೂರ್ತಿ ಅವರು ವಹಿಸಲಿದ್ದಾರೆ.
ಗೋಶಾಲೆ: ತಮ್ಮ ಧಾರ್ಮಿಕ ಟ್ರಸ್ಟ್ ವತಿಯಿಂದ ಈಗಾಗಲೇ ವೃದ್ಧಾಶ್ರಮ, ಗೋಶಾಲೆ ತೆರೆಯಲಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲೆಂದು ಎಲ್‌ಕೆಜೆಯಿಂದ 5 ನೇ ತರಗತಿಯವರೆಗೂ ಶಾಲೆಯನ್ನು ತೆರೆಯಲಾಗಿದೆ. ಶಾಲೆಗೆ ಸೇರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನೂ  ಕಲ್ಪಿಸಲಾಗಿದೆ ಎಂದು ಜವರಪ್ಪ ಹೇಳಿದರು.
ಶಿಬಿರದ ಬಗ್ಗೆ ಹೆಚ್ಚಿನ ವಿವರ ಪಡೆಯಲು 9632954715 ಗೆ ಸಂಪರ್ಕಿಸಲು ಕೋರಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಧನಲಕ್ಷ್ಮಿ, ವ್ಯವಸ್ಥಾಪಕರಾದ ಚನ್ನಪ್ಪ, ಕೆ.ಎಸ್. ಕೃಷ್ಣಕುಮಾರ್, ಶಿಕ್ಷಕರಾದ ಶಿವನಂಜಪ್ಪ,  ಅರ್ಚಕರಾದ ರಂಗಸ್ವಾಮಿ, ಎಸ್‌ಬಿಎಂ ಶ್ರೀನಿವಾಸ್, ಟ್ರಸ್ಟಿ ವೆಂಕಟೇಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.