ಇದ್ದೂ ಇಲ್ಲದಾದ ಕ್ಷಕಿರಣ ಯಂತ್ರ
ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಕಿರಣ ತಂತ್ರಜ್ಞರಿಲ್ಲದೆ ಲಕ್ಷಾಂತರ ರು ಯಂತ್ರಗಳು ಇದ್ದೂ ಇಲ್ಲದಂತಾಗಿದೆ. ಜತೆಗೆ ರೋಗಿಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸಹಾಯ ಪಡೆಯಬೇಕಾದ ಫಲಾನುಭವಿಗಳು ಪರದಾಡುವಂತಾಗಿದ್ದು, ಜಿಲ್ಲಾಡಳಿತ ಕೂಡಲೆ ಅಗತ್ಯ ಕ್ರಮ ಕೈಗೊಂಡು ತಂತ್ರಜ್ಞರನ್ನು ನಿಯೋಜಿಸಲು ನಾಗರಿಕರು ಆಗ್ರಹಿಸಿದ್ದಾರೆ.
ತಾಲೂಕಿನಾದ್ಯಂತ ಸುಮಾರು 34 ಕೀ.ಮೀ. ಉದ್ದ ಅಪಘಾತಗಳ ತಾಣವೆಂದು ಕುಖ್ಯಾತಿ ಹೊಂದಿರುವ ರಾಷ್ಟೀಯ ಹೆದ್ದಾರಿ 75 ಮತ್ತು 40 ಕೀ.ಮೀ.ಗೂ ಹೆಚ್ಚು ರಾಜ್ಯ ಹೆದ್ದಾರಿ 33 ಜತೆಯಲ್ಲಿ ನೂರಾರು ಕಿ.ಮೀ. ಜಿಲ್ಲಾ ಸಂಪರ್ಕ ಹೆದ್ದಾರಿ ಹಾದು ಹೋಗಿದೆ.
ಇತ್ತೀಚೆಗಂತೂ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತಗಳ ಸರಮಾಲೆ ಹೆಚ್ಚಿದ್ದು ಗಾಯಾಳುಗಳಿಗೆ ಕ್ಷಕಿರಣ ಮೂಲಕ ಹೆಚ್ಚಿನ ಚಿಕಿತ್ಸೆ ಕಲ್ಪಿಸಲು ಸಹಕಾರಿಯಾಗಿದೆ. ದುರಂತ ಎಂದರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವ ಕ್ಷಕಿರಣ ತಂತ್ರಜ್ಞರು ಮಾರ್ಚ್ ಕೊನೆವಾರದಲ್ಲಿ ನಿವೃತ್ತಿ ಹೊಂದಿದ ನಂತರ ಅವರ ಸ್ಥಳಕ್ಕೆ ಬೇರೊಬ್ಬ ತಂತ್ರಜ್ಞರ ನಿಯೋಜನೆಯಾಗದ ಕಾರಣ, ಇಪ್ಪತ್ತೆಂಟು ದಿನಗಳಿಂದಲೂ ಲಕ್ಷಾಂತರ ರು. ಮೌಲ್ಯದ ಕ್ಷಕಿರಣ ಯಂತ್ರಗಳು ಇದ್ದೂ ಇಲ್ಲದಂತಾಗಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಬೈಕ್ ಸವಾರರು ಅಪಘಾತಗಳು ಹೆಚ್ಚಾಗುತ್ತಿರುವ ಜೊತೆಯಲ್ಲಿ, ಗ್ರಾಮಾಂತರ ಪ್ರದೇಶದಿಂದ ವಿವಿಧ ಕಾರಣಕ್ಕೆ ಗಾಯಗೊಳ್ಳುವ ಜನತೆಯ ಮೂಳೆಮುರಿತ ಪತ್ತೆಹಚ್ಚಲು, ಸರ್ಕಾರದ ವಿವಿಧ ಮಾಸಾಶನ ಯೋಜನೆಗೂ ಕ್ಷಕಿರಣ ದಾಖಲೆ ಬೇಕಾಗಿರುವುದರಿಂದ ತಂತ್ರಜ್ಞರಿಲ್ಲದೆ ಸೇವೆ ದೊರಕುತ್ತಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಕಿರಣಕ್ಕೆ ಹೈಟೆಕ್, ಅದೂ ಇದು ಎಂತಲೂ ಗಾಯಾಳುಗಳಿಂದ, ರೋಗಿಗಳಿಂದ ಸರ್ಕಾರಿ ಆಸ್ಪತ್ರೆ ದರಕ್ಕಿಂತಲೂ ಒಂದಕ್ಕಿಂತಲೂ ಹತ್ತರಷ್ಟು ಹಣ ಪೀಕುತ್ತಾ ಶೋಷಣೆ ಮಾಡುತ್ತಾರೆ. ಜೊತೆಯಲ್ಲಿ ಖಾಸಗಿ ಆಸ್ಪತ್ರೆಯಂತೆ ಷರತ್ತು ಹಾಕುತ್ತಾರೆ. ಹೆದ್ದಾರಿಗಳಲ್ಲಿ ಸಣ್ಣ, ಪುಟ್ಟ ಗಾಯಗಳಾದರೂ ವಿಧಿ ಇಲ್ಲದೆ ಬೆಂಗಳೂರಿಗೆ ರವಾನಿಸುವ ಅನಿವಾರ್ಯತೆ ಸರ್ಕಾರಿ ಆಸ್ಪತ್ರೆಯಲ್ಲಿ ಎದುರಾಗಿದೆ.
ತಾಲೂಕು ಕೇಂದ್ರದ ನೂರು ಹಾಸಿಗೆ ಆಸ್ಪತ್ರೆಯೆಂದು ಹೆಗ್ಗಳಿಕೆ ಹೊಂದಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಕಿರಣದ ಉತ್ತಮ ಯಂತ್ರಗಳಿದ್ದರೂ ಕ್ಷಕಿರಣ ತಂತ್ರಜ್ಞರಿಲ್ಲದಿರುವುದು, ಹಾಗೂ ಸ್ಕ್ಯಾನಿಂಗ್ ಯಂತ್ರಗಳಿಲ್ಲದಿದ್ದರೂ ಸಂಬಂಧಪಟ್ಟ ವಿಭಾಗದ ವೈದ್ಯರಿದ್ದಾರೆ. ಇದು ಆಸ್ಪತ್ರೆಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಭಾಗ್ಯ, ಆಸ್ಪತ್ರೆಯಲ್ಲಿ ಕ್ಷಕಿರಣ ತಂತ್ರಜ್ಞರಿಲ್ಲದಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲೆ ನಿಯೋಜಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, 28 ದಿನ ಕಳೆದರೂ ಇನ್ನು ತಂತ್ರಜ್ಞರು ನಿಯೋಜನೆಯಾಗದಿರುವುದು ನೋಡಿದರೆ ಆರೋಗ್ಯ ಇಲಾಖೆ ಕಾರ್ಯವೈಖರಿ ಪ್ರಶ್ನಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೆ ಈ ಬಗ್ಗೆ ಗಮನಹರಿಸಿ ಕ್ಷಕಿರಣ ತಂತ್ರಜ್ಞರನ್ನು ನಿಯೋಜಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

