ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಕುಣಿಗಲ್: ತಾಪಂ ಅಧ್ಯಕ್ಷರಾಗಿ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ಹನುಮಾನಾಯಕ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. 21 ಸದಸ್ಯ ಬಲದ ತಾಪಂನಲ್ಲಿ ಜೆಡಿಎಸ್ 17, ಕಾಂಗ್ರೆಸ್-2, ಬಿಜೆಪಿ-2 ಸಂಖ್ಯಾಬಲ ಹೊಂದಿದೆ. ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮಂಗಳವಾರ ನಡೆದು ಅಧ್ಯಕ್ಷ ಸ್ಥಾನಕ್ಕೆ ನಿಡಸಾಲೆ ಕ್ಷೇತ್ರದ ನರಸಿಂಹಮೂರ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಹುತ್ರಿದುರ್ಗ ಕ್ಷೇತ್ರದ ಹನುಮಾನಾಯಕ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಸದಸ್ಯರು ಗೈರಾಗಿದ್ದರು. ಎರಡೂ ಸ್ಥಾನಗಳಿಗೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನವಣಾಧಿಕಾರಿಗಳಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿ ಆನಂದ, ಅವಿರೋಧ ಆಯ್ಕೆ ಘೋಷಿಸಿದರು. ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಗ್ರಾಪಂಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರ್ವಹಣೆ, ಬೀದಿದೀಪ ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು. ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್, ಶಾಸಕ ಡಿ. ನಾಗರಾಜಯ್ಯ, ಜಿಪಂ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಹರೀಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಬಸ್ ಸಂಚಾರ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ
ಕುಣಿಗಲ್: ಇಡಗೂರು ಗ್ರಾಮಕ್ಕೆ ಕುಣಿಗಲ್ ಸಾರಿಗೆ ಘಟಕದಿಂದ ತೆರಳುತ್ತಿದ್ದ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಘಟಕ ವ್ಯವಸ್ಥಾಪಕರಿಗೆ ಘೇರಾವ್ ಮಾಡಿ ಪ್ರತಿಭಟನೆ ನಡೆಸಿದರು. ಕುಣಿಗಲ್ ಸಾರಿಗೆ ಘಟಕದಿಂದ ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿಯ ಇಡಗೂರು ಗ್ರಾಮದಿಂದ ತಾಲೂಕಿನ ವಿವಿಧಡೆಗೆ ಎರಡು ಗ್ರಾಮಾಂತರ ಸಾರಿಗೆ ಬಸ್ ಸಂಚರಿಸುತ್ತಿತ್ತು. ಆದರೆ ಏಕಾಏಕಿ ಬಸ್ ಸಂಚಾರ ನಿಂತ ಕಾರಣ ವಿದ್ಯಾರ್ಥಿಗಳು ಪರದಾಡುಂತಾಗಿದೆ. ಹಲವು ಬಾರಿ ಸಾರಿಗೆ ಸಂಸ್ಥೆ ವಿಭಾಗ, ಘಟಕಕ್ಕೆ ಮನವಿ ಮಾಡಿದರೂ ಸ್ಪಂದಿಸದ ಕಾರಣ ಗ್ರಾಮಸ್ಥರು, ವಿದ್ಯಾರ್ಥಿಗಳು ಮಂಗಳವಾರ ಘಟಕ ವ್ಯವಸ್ಥಾಪಕ ನರೇಂದ್ರರನ್ನು ತರಾಟೆಗೆ ತೆಗೆದುಕೊಂಡರು. ಘಟಕ ವ್ಯವಸ್ಥಾಪಕರು ಪೊಲೀಸರನ್ನು ಕರೆಸಿ ಬಂಧಿಸುವ ಬೆದರಿಕೆ ಹಾಕಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಘಟಕದ ಬಾಗಿಲು ಮುಚ್ಚಿ ಧರಣಿ ನಡೆಸಲು ಮುಂದಾದರು. ಇದರಿಂದ ಸಂಚಾರ ನಿರೀಕ್ಷಕ ಸತೀಶ್, ಗ್ರಾಮಸ್ಥರ ಮನವೊಲಿಸಿ, ಬಸ್ ಸಂಚಾರ ಪುನರಾರಂಭಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದರು. ಗ್ರಾಮದ ನಾರಾಯಣಪ್ಪ, ಶಂಕರಪ್ಪ, ರಮೇಶ್, ಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

