ಕಾಡಾನೆಗಳಿಗೆ ಕಾನನದ ದಾರಿ ತೋರಿ
ಕನ್ನಡಪ್ರಭ ವಾರ್ತೆ, ತುಮಕೂರು, ಫೆ.4
ಕಳೆದ 25 ಕ್ಕೂ ಹೆಚ್ಚು ದಿನಗಳಿಂದ ನಗರ ಸುತ್ತಮುತ್ತಲ ಕೆರೆಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಇತ್ತೀಚಗೆ ನಗರಕ್ಕೆ ಲಗ್ಗೆಯಿಟ್ಟ ಜನರನ್ನು ಭೀತಿಗೊಳಿಸಿದ ಹಿನ್ನೆಲೆಯಲ್ಲಿ ಶಾಸಕ ಡಾ.ರಫೀಕ್ ಅಹಮದ್ ಮಂಗಳವಾರ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನರಸಿಂಹಮೂರ್ತಿ, ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬೈರಾರೆಡ್ಡಿ, ಜಲಾನಯನ ಸಂರಕ್ಷಣಾಧಿಕಾರಿ ಹೆಗಡೆ ಮತ್ತು ಉಪವಲಯ ಅರಣಾಧಿಕಾರಿ ರಬ್ಬಾನಿ ಅವರೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಶಾಸಕರು, ಜಿಲ್ಲೆಯ ನಾಗರಿಕರಿಗೆ ತೊಂದರೆಯಾಗದ ರೀತಿ ಬೀಡು ಬಿಟ್ಟಿರುವ ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಮರಳಿಸುವಂತೆ ಸೂಚಿಸಿದರು.
ಶಾಸಕರಿಗೆ ಮಾಹಿತಿ ನೀಡಿದ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನರಸಿಂಹಮೂರ್ತಿ, ಕಳೆದ 22 ದಿನಗಳಿಂದ ತುಮಕೂರು ನಗರದ ಸುತ್ತಮುತ್ತ ಆನೆಗಳು ಬೀಡುಬಿಟ್ಟಿದ್ದು, ಇಲ್ಲಿನ ಕೆರೆಗಳಲ್ಲಿ ಸಂವೃದ್ದವಾಗಿ ನೀರು ಇದೆ. ಜೊತೆಗೆ ತಕ್ಕಮಟ್ಟಿಗೆ ಆಹಾರ ಪದಾರ್ಥಗಳು ದೊರೆಯುವುದರಿಂದ ತಿಂಗಳು ಗಟ್ಟಲೆ ವಾಸ್ತವ್ಯ ಹೂಡಿದ್ದು, ಅವುಗಳನ್ನು ಕಾಡಿಗೆ ಓಡಿಸುವುದು ಕಷ್ಟವಾಗಿವೆ ಎಂದರು.
ಮೊದಲು ವರ್ಷದಲ್ಲಿ ಒಂದೋ ಅಥವಾ ಎರಡು ಬಾರಿಗೆ ಬಂದು ಹೋಗುತ್ತಿದ್ದ ಆನೆಗಳು ಕಳೆದ ನಾಲ್ಕು ತಿಂಗಳಲ್ಲಿ ಒಂದೆರಡು ವಾರಗಳನ್ನು ಹೊರತು ಪಡಿಸಿ ಉಳಿದಂತೆ ಜಿಲ್ಲೆಯಲ್ಲಿಯೇ ಇವೆ. ಅರಣ್ಯ ಇಲಾಖೆಯಿಂದ ಆನೆಗಳನ್ನು ಕಾಡಿಗೆ ಕಳುಹಿಸಲು ಎಲ್ಲಾ ರೀತಿಯ ಕಾರ್ಯಾಚರಣೆ ನಡೆಸಿದರೂ ಸ್ವಲ್ಪ ಮಟ್ಟಿನ ಯಶಸ್ಸು ಕಾಣಲು ಸಾಧ್ಯವಾಗಿದೆ. ನೆಲಮಂಗಲ, ಸಾವನ್ ದುರ್ಗ ಕಾಡಿನವರೆಗೆ ಹೋಗುವ ಆನೆಗಳು ಮತ್ತೆ ಜಿಲ್ಲೆಯತ್ತ ವಾಪಸ್ಸಾಗುತ್ತವೆ. ಆದ್ದರಿಂದ ಈ ಬಾರಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆನೆಗಳನ್ನು ಕಾಡಿಗೆ ಓಡಿಸಲು ಮಡಿಕೇರಿಯ ದುಬಾರೆಯಿಂದ ಹರ್ಷ, ಪ್ರಶಾಂತ್ ಮತ್ತು ವಿಕ್ರಂ ಎಂಬ ಮೂರು ಆನೆಗಳನ್ನು ಕರೆಸಲಾಗಿದೆ. ಭಾನುವಾರದಿಂದ ಸಾಕು ಆನೆಗಳ ಸಹಾಯದಿಂದ ಕಾಡಾನೆಗಳನ್ನು ಸ್ವಸ್ಥಾನಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ನಗರಕ್ಕೆ ನುಗ್ಗಿದ 3 ಕಾಡಾನೆಗಳನ್ನು ಸಾವನದುರ್ಗ ಕಾಡಿಗೆ ಕಳುಹಿಸಲಾಗಿದೆ. ಮಲ್ಲಸಂದ್ರ ಕೆರೆಯಲ್ಲಿ ಬೀಡುಬಿಟ್ಟಿರುವ ಆನೆಗಳು ಸೋಮವಾರ ಲಕ್ಷ್ಮಣ್ಸಂದ್ರ ಕೆರೆಗೆ ಸ್ಥಳಾಂತರಗೊಂಡಿವೆ. ಅಲ್ಲಿಂದ ಜಿಲ್ಲೆಯಿಂದ ಹೊರ ಕಳುಹಿಸಲು ಎಲ್ಲಾ ರೀತಿ ಕ್ರಮ ಕೈಗೊಂಡಿದ್ದೇವೆ ಎಂದರು.
ಪಟಾಕಿ ಸಿಡಿಸಿ, ತಮಟೆ ಬಡಿಯುವ ಮೂಲಕ ರಾತ್ರಿಯಿಂದಲೇ ಅರಣ್ಯಕ್ಕೆ ಅಟ್ಟುವ ಕೆಲಸ ಆರಂಭವಾಗಲಿದೆ. ಕಾರ್ಯಾಚರಣೆಗೆ ಪರಿಕರಗಳ ಕೊರತೆಯಿಲ್ಲ ಎಂದು ನರಸಿಂಹಮೂರ್ತಿ ನುಡಿದರು.
ಬೆಳೆ ಪರಿಹಾರಕ್ಕೆ 308 ಅರ್ಜಿ: ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಆನೆಗಳಿಂದ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಬೆಳೆ ಪರಿಹಾರಕ್ಕಾಗಿ ಇದುವರೆಗೂ 308 ಅರ್ಜಿಗಳು ಬಂದಿದ್ದು, ಇನ್ನೂ ಅರ್ಜಿಗಳು ಬರುವ ನಿರೀಕ್ಷೆಯಿದೆ. ಅವುಗಳನ್ನು ಪಡೆದು, ಬೆಳೆ ಹಾನಿ ಅಂದಾಜು ಮಾಡಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಸೂಕ್ತ ಪರಿಹಾರಕ್ಕೆ ಸೂಚನೆ
ಆನೆಗಳ ಹಾವಳಿಯಿಂದ ಪ್ರಾಣ, ಸರ್ಕಾರಿ ಆಸ್ತಿ-ಪಾಸ್ತಿ ಹಾನಿಯಾಗದಿದ್ದರೂ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆ ಕಳೆದುಕೊಂಡಿರುವ ರೈತರಿಗೆ ಮಾನವೀಯ ದೃಷ್ಟಿಯಿಂದ ಸೂಕ್ತ ಪರಿಹಾರವನ್ನು ಶೀಘ್ರವಾಗಿ ದೊರೆಕಿಸಿಕೊಡುವಂತೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

