ತುಮಕೂರು

ತಂದೆ ತಾಯಿಯರನ್ನು ಅನಾಥರಾಗಿಸಬೇಡಿ

Published On :

ಕ.ಪ್ರ.ವಾರ್ತೆ , ತಿಪಟೂರು , ಫೆ.6
ಹತ್ತಾರು ವರ್ಷಗಳ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿಕೊಂಡು ನಿಮ್ಮನ್ನು ಹೆತ್ತು ಹೊತ್ತು ಸಾಕಿ ದೊಡ್ಡವರಾಗಿಸಿದ ನಿಮ್ಮ ತಂದೆ ತಾಯಿಗಳನ್ನು ಅವರ ಇಳಿ ವಯಸ್ಸಿನಲ್ಲಿ ಅನಾಥರಾಗಿಸಿ ನೀವು ಯಾವುದೇ ಸುಖಭೋಗಗಳನ್ನು ಅನುಭವಿಸಬೇಡಿ ಎಂದು ಕೆರೆಗೋಡಿ-ರಂಗಾಪು ಪೀಠಾಧ್ಯಕ್ಷರಾದ  ಗುರುಪರದೇಶಿ ಕೇಂದ್ರ ಸ್ವಾಮೀಜಿಯವರು ಯುವಪೀಳಿಗೆಯನ್ನು ಎಚ್ಚರಿಸಿದರು.
ತಾಲೂಕಿನ-ರಂಗಾಪುರ ಸುಕ್ಷೇತ್ರದಲ್ಲಿ ಗುರುಸಪ್ತಾಹ ಅಂಗವಾಗಿ ಏರ್ಪಡಿಸಿದ್ದ 6ನೇ ಗುರುಗಳ ಹದಿಮೂರನೆ ವರ್ಷದ ದೇವಾಲಯ ಪ್ರವೇಶ ಹಾಗೂ ಅವರ ಶಿಲಾಮೂರ್ತಿ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ ಸಮಾರಂಭ ಮತ್ತು ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯುವಕರೇ ಹೆತ್ತ ತಂದೆ ತಾಯಿಗಳೇ ಮೊದಲ ಗುರು. ಮೊದಲು ಅವರನ್ನು ನೆನೆದು ವಂದಿಸಿ ನಂತರ ಗುರುಗಳ ಬಳಿ ಬನ್ನಿ ಎಂದರು.
ಶ್ರೀ ಮಠದ ಅಭಿವೃದ್ಧಿ ಮತ್ತು ಮಕ್ಕಳ ವಿದ್ಯೆ-ಅನ್ನದಾನಕ್ಕೆ ಭಕ್ತರ ಸಹಕಾರವೇ ಕಾರಣವಾಗಿದೆ. ಕಲ್ಪತರು ನಾಡಿವಲ್ಲಿ ತೀವ್ರ ಬರಗಾಲವಿದ್ದು ತೆಂಗು ಮತ್ತು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಸೂಕ್ತ ಪರಿಹಾರ ಒದಗಿಸಿ ತೆಂಗಿನ ಉಳಿವು ಮತ್ತು ರೈತರಿಗೆ ನೆರವಾಗಬೇಕು. ಮುಂದಿನ ಬೇಸಿಗೆ ವೇಳೆಗೆ ಅಂತರ್ಜಲ ಮತ್ತಷ್ಟು ಬತ್ತಲಿದ್ದು ಸರ್ಕಾರ ಸಾಕಷ್ಟು ಮುಂಜಾಗ್ರತೆ ವಹಿಸಿಬೇಕೆಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಚನ್ನಗಿರಿ ತಾಲೂಕಿನ ಪಾಂಡುಮಟ್ಟಿ ಶ್ರೀಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಕೆರೆಗೋಡಿ-ರಂಗಾಪುರ ಕ್ಷೇತ್ರ ಶಕ್ತಿ ಪೀಠವಾಗಿದೆ. ಹಿಂದಿನ ಶ್ರೀಗಳವರ ಪವಾಡ ಶಕ್ತಿ ಮತ್ತು ಕೃಪೆ ಪ್ರಭಾವದಿಂದ ಈಗಿನ ಶ್ರೀಗಳು ಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಶಾಸಕರ ಭರವಸೆ: ಶಾಸಕ ಕೆ.ಷಡಕ್ಷರಿ ಮಾತನಾಡಿ ಮನುಷ್ಯ ಜೀವನ ಜಂಜಾಟದಲ್ಲಿ ಶಾಂತಿ ನೆಮ್ಮದಿಗಾಗಿ ಇಂತಹ ಮಠಗಳ ಸಂಪರ್ಕ ಇಟ್ಟುಕೊಳ್ಳಬೇಕು. ತಾವು ದುಡಿದ ಸ್ವಲ್ಪ ಭಾಗವನ್ನು ಅನ್ನದಾಸೋಹದಂತೆ ಕಾರ್ಯಕ್ರಮಗಳಿಗೆ ನೀಡಬೇಕೆಂದರು. ಇಂದು ಸುಕ್ಷೇತ್ರದಲ್ಲಿ ಶಂಖುಸ್ಥಾಪನೆ ನಡೆದ ಗ್ರಂಥಾಲಯ ಕಟ್ಟಡಕ್ಕೆ 5ಲಕ್ಷ ನಿಧಿಯನ್ನು ನೀಡುವುದಾಗಿ ಭರವಸೆ ನೀಡಿದರು.  
ಸಹಕಾರ ದೊಡ್ಡದು: ಸಿರಿಗುರು ಸಂಪಾದಿತ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಮುಖಂಡ ಲೋಕೇಶ್ವರ ಕಳೆದ 40ವರ್ಷಗಳ ನಿರಂತರ ಸಂಪರ್ಕ ಶ್ರೀ ಮಠಕ್ಕಿದ್ದು, ಶ್ರೀ ಮಠದಲ್ಲಿ ನಡೆದ 839ನೇ ಶ್ರೀ ಸಿದ್ಧರಾಮ ಜಯಂತಿ ಗೌರವಾಧ್ಯಕ್ಷನಾಗಿ ನೆರವೇರಿಸಿದ ಜಯಂತಿ ಯಶಸ್ಸನ್ನು ನಾನೆಂದೂ ಮರೆಯಲಾಗಲ್ಲ. ಇದಕ್ಕೆ ಸಂಪೂರ್ಣ ಆಶೀರ್ವದಿಸಿದ ಶ್ರೀಗಳ ಮತ್ತು ಭಕ್ತರ ಸಹಕಾರ ದೊಡ್ಡದು ಎಂದರು. ಶ್ರೀ ಮಠದ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ನನ್ನ ಸಂಪೂರ್ಣ ಸಹಕಾರ ಇರಲಿದ್ದು ಭಕ್ತರೂ ಸಹ ಎಲ್ಲಾ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಬೇಕೆಂದರು.
ಮಾಜಿ ಶಾಸಕ ಬಿ.ಸಿ. ನಾಗೇಶ್ ಸುಕ್ಷೇತ್ರದಲ್ಲಿ ಅಂತರ್ಜಾಲದ ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಸಂಸ್ಕಾರಯುತ ಬದುಕನ್ನು ತಂದೆ ತಾಯಿಗಳು ಕಲಿಸಬೇಕೆಂದು ಕರೆ ನೀಡಿದರು.  ಸಾಹಿತಿಗಳು ಹಾಗೂ ವಿಧಾನಪರಿಷತ್ ಸದಸ್ಯರೂ ಆದ ದೊಡ್ಡರಂಗೇಗೌಡರು ಉಪನ್ಯಾಸ ನೀಡಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಭಾರತೀಯರ ಕ್ರಮ ನೋವಿನ ಸಂಗತಿ. ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು ಎಂದರು.
ಗೋಡೇಕೆರೆ ಶ್ರೀ ಮೃತ್ಯುಂಜಯಸ್ವಾಮಿಗಳು ಆಶೀರ್ವಚನ ನೀಡಿದರು. ಹೊಸದುರ್ಗ ಶಾಸಕ ಗೋವಿಂದೇ ಗೌಡರು ಮಾತನಾಡಿ ಮಠದ ಅಭಿವೃದ್ಧಿಗೆ 2ಲಕ್ಷ ದೇಣಿಗೆ ಘೋಷಿಸಿದರು. ತಹಸೀಲ್ದಾರ್ ಮಂಜುನಾಥ್ ಭಾಗವಹಿಸಿದ್ದರು.
ಶಿಕ್ಷಕ ಪರಮೇಶ್ವರಯ್ಯ ಕವನ ಸಂಕಲನ ಪರಿಚಯಿಸಿದರು. ಶಿವಪ್ಪ ಸ್ವಾಗತಿಸಿ, ಗಂಗಣ್ಣ ನಿರೂಪಿಸಿ ಬಸವರಾಜು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.