ತುಮಕೂರು

ಇಂದಿನಿಂದ ರಾಷ್ಟ್ರೀಯ ಸೇವಾ ಯೋಜನೆ

Published On :

ತುಮಕೂರು: ಇಲ್ಲಿನ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಿಂದ ಫೆ. 9 ರಿಂದ 15 ರವರೆಗೆ ರಾಷ್ಟ್ರೀಯ ಸೇವಾ ಯೋಜನೆಯಡಿ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕ ನೈರ್ಮಲ್ಯ ಮತ್ತು ವ್ಯಕ್ತಿಗತ ಆರೋಗ್ಯ ಕುರಿತ ಕಾರ್ಯಕ್ರಮವನ್ನು ತಾಲೂಕಿನ ನರಸಾಪುರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ನಿರ್ದೇಶಕರಾಗಿ ಬಿ.ಎಲ್. ವೈದ್ಯೇಶ್ವರ್, ಶಿಬಿರದ ಮಾರ್ಗದರ್ಶಕರಾಗಿ ಡಾ. ಬಸವರಾಜು ಜಿ, ಶಿಬಿರಾಧಿಕಾರಿಯಾಗಿ ಪ್ರೊ. ಆರ್.ಎಸ್. ಸುರೇಶ್, ಪ್ರೊ. ಎಚ್.ಜಿ. ಸರ್ವಮಂಗಳ, ಪ್ರೊ. ಕೆ.ಟಿ. ಮಂಜುನಾಥ್, ಪ್ರೊ. ವಸಂತಕುಮಾರ್ ಆಗಮಿಸಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಜಿ.ಪಂ. ಸದಸ್ಯ ರವಿಶಂಕರ್ ನೆರವೇರಿಸುವರು. ಅಧ್ಯಕ್ಷತೆಯನ್ನು ಬಿ.ಎಲ್. ವೈದ್ಯೇಶ್ವರ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಜಿ. ಬಸವರಾಜು ಆಗಮಿಸಲಿದ್ದಾರೆ. ಊರುಕೆರೆ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಗ್ರಾ.ಪಂ. ಸದಸ್ಯ ಎಚ್.ಎನ್. ಮಲ್ಲೇಶ್ ಆಗಮಿಸುವರು.

ನಾನೂ ಟಿಕೆಟ್ ಆಕಾಂಕ್ಷಿ
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ತುಮಕೂರಿನಿಂದ ತಾವು ಕೂಡ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ತಿಳಿಸಿದರು. ಅವರು ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಕಾಂಕ್ಷಿಯಾಗುವುದು ತಪ್ಪಲ್ಲ. ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತೋ ಅಂಥವರ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು. ಮೈಸೂರಿನಲ್ಲಿ ನಡೆಯಲಿರುವ ಹಿಂದುಳಿದ ವರ್ಗದ ಸಮಾವೇಶಕ್ಕೆ ತುಮಕೂರು ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತೆರಳುತ್ತಿದ್ದಾರೆ ಎಂದರು. ಅಹಿಂದ ವರ್ಗಗಳ ಪರ ಜೆಡಿಎಸ್ ಯಾವತ್ತೂ ಇದೆ ಎಂದು ಸ್ಪಷ್ಟಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಈ ಬಾರಿ ಪಕ್ಷ ಯುವಕರಿಗೂ ಆದ್ಯತೆ ನೀಡಲಿದೆ ಎಂದ ಅವರು ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು. ತುಮಕೂರು ಸೇರಿದಂತೆ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಯಾರೂ ಸ್ಪರ್ಧಿಯಾಗುತ್ತಾರೆ ಎಂಬುದನ್ನು ಜೆಡಿಎಸ್ ವರಿಷ್ಠರು ನಿರ್ಧರಿಸುತ್ತಾರೆ ಎಂದರು.

ಇಂದು ಪುಸ್ತಕ ಬಿಡುಗಡೆ
ತುಮಕೂರು: ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಫೆ.9 ರಂದು ಬೆಳಿಗ್ಗೆ 10.30 ಕ್ಕೆ ಭಾನುವಾರ ಅಂಚೆ ರಾಮಣ್ಣ ಅವರ ಶಂಖ  ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಕ್ಯಾತ್ಸಂದ್ರದ ಚಂದ್ರಮೌಳೇಶ್ವರ ಬಡಾವಣೆಯ  ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಸಾಹಿತ್ಯ ಕೂಟದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾನಿಧ್ಯವನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ. ಕೃತಿ ಬಿಡುಗಡೆಗೊಳಿಸಿ  ಪದ್ಮಕೃಷ್ಣಮೂರ್ತಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಲೇಖಕರು ಪೌಳಿ ಶಂಕರಾನಂದಪ್ಪ, ಆರ್. ಕಾಮರಾಜ್, ಚಿದಂಬರಾಶ್ರಮಯ ಅಳಿಲುಘಟ್ಟದ ಎ.ಆರ್. ರಾಜು, ಗೋವಾ ಎಂಜಿನಿಯರ್ ಮೈನ್ಸ್ ವಿ. ನಾಗರಾಜ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ಮಕ್ಕಳ ಕೂಟದ ಅಧ್ಯಕ್ಷೆ ಕಮಲಾ ಬಡ್ಡಿಹಳ್ಳಿ ವಹಿಸಲಿದ್ದಾರೆ. ಸಾಹಿತ್ಯಾಸಕ್ತರು ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.

ನಾಗರಾಜಯ್ಯ ಮೇಲೆ ಆರೋಪ
ಕುಣಿಗಲ್: ಶಾಸಕ ಡಿ.ನಾಗರಾಜಯ್ಯ ಆಯ್ಕೆಯಾದ ಮೇಲೆ ಸರ್ಕಾರದಿಂದ ಯಾವುದೇ ಅನುದಾನ ಮಂಜೂರು ಮಾಡಿಸದೆ, ಹಿಂದಿನ ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಕಾಲದಲ್ಲಿ ಮಂಜೂರಾದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಆರೋಪಿಸಿದರು. ಶುಕ್ರವಾರ ಎಡೆಯೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿಗೆ ಹೇಮಾವತಿ ನೀರು ತರಲು, ಗುಬ್ಬಿ, ತುರುವೆಕೆರೆ ಶಾಸಕರು ತಾಲೂಕು ಬಂದ್, ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುತ್ತಿದ್ದಾರೆ. ಆದರೆ ಕುಣಿಗಲ್ ಶಾಸಕರು ನೀರು ಹರಿಸುವ ಬಗ್ಗೆ ಬದ್ಧತೆ, ಕಾಳಜಿ ತೋರದೆ ತಾಲೂಕಿಗೆ ಹೇಮಾವತಿ ನೀರು ಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ತಾಲೂಕಿನಾದ್ಯಂತ ನರೇಗ, ಜಿಪಂನ ವಿವಿಧ ಅನುದಾನದಡಿಯಲ್ಲಿ ಕೆಲಸ ನಡೆಯುತ್ತಿದೆ ಹೊರತು ಶಾಸಕರ ಅನುದಾನದಿಂದ ಯಾವುದೂ ನಡೆಯುತ್ತಿಲ್ಲ. ಶಾಸಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಮಿತಿ
ತುಮಕೂರು: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ದೂರು ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯು ಕಾಲಕಾಲಕ್ಕೆ ಸಭೆ ಸೇರಿ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಅವರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯುವಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ವ್ಯಾಪ್ತಿಗೊಳಪಟ್ಟ ಇಲಾಖೆಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟುವ ದೂರು ನಿವಾರಣಾ ಸಮಿತಿಯನ್ನು ರಚಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿ.ಪಂ.ವ್ಯಾಪ್ತಿಯಲ್ಲಿ ಬರುವ ಇಲಾಖೆಗಳಿಗೆ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಒಂದು ದೂರು ಸಮಿತಿ ಮತ್ತು ಜಿಲ್ಲಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಮತ್ತೊಂದು ದೂರು ಸಮಿತಿಯನ್ನು ರಚಿಸಲಾಗಿದೆ ಎಂದರು.

ಧಾರ್ಮಿಕ ಕೇಂದ್ರವಾಗಿಸುವೆ
ತುಮಕೂರು: ಹೆಬ್ಬೂರಿನ ಕೋದಂಡಾಶ್ರಮ ಮಠವನ್ನು ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ, ಲೌಕಿಕವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಕೋದಂಡಾಶ್ರಮ ಮಠದ ನೂತನ ಪೀಠಾಧ್ಯಕ್ಷ ಮಾಧವಾಶ್ರಮ ಸ್ವಾಮೀಜಿ ತಿಳಿಸಿದರು. ಅವರು ಹೆಬ್ಬೂರಿನ ಕೋದಂಡಾಶ್ರಮ ಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಶೃಂಗೇರಿ ಜಗದ್ಗುರುಗಳ ಆಜ್ಞೆಯಂತೆ ಮಠಕ್ಕೆ ಬಂದಿದ್ದೇನೆ. ಇದು ಬಯಸದೇ ಬಂದ ದೊಡ್ಡ ಜವಾಬ್ದಾರಿ ಎಂದರು. ಕೋದಂಡಾಶ್ರಮ ಮಠದ ಟ್ರಸ್ಟಿ ವಿ. ವೆಂಕಟಸುಬ್ಬಾ ಜೋಯಿಸ್ ಮಾತನಾಡಿ ಈಗಾಗಲೇ ಗೋಧೂಳಿ ಲಗ್ನದಲ್ಲಿ ಶ್ರೀಗಳ ಪುರ ಪ್ರವೇಶವಾಗಿದೆ. ಶ್ರೀ ಮಠದಲ್ಲಿ ಗಣಪತಿ ಹೋಮ, ನಾರಾಯಣವನದಲ್ಲಿ ಮೂಲ ಗುರುಗಳ ಅಧಿಷ್ಠಾನದರ್ಶನ, ಕಾಮಾಕ್ಷಿ ಸನ್ನಿಧಿಯಲ್ಲಿ ಚಂಡಿಕಾ ಹೋಮ, ನವಗ್ರಹ ಪುರಸ್ಸರ ಪವಮಾನ ಹೋಮ ನಡೆದಿದೆ. ಫೆ.9 ರಂದು ಬೆಳಿಗ್ಗೆ 8-30 ರಿಂದ 8-45 ರವರೆಗೆ ಶ್ರೀಮಾಧವಾಶ್ರಮ ಸ್ವಾಮಿಗಳಿಗೆ ಮಠಾಧಿಪತಿಗಳಾಗಿ ಪೀಠಾರೋಹಣ, ಸುವರ್ಣ ರತ್ನಾಭಿಷೇಕ ಕಾರ್ಯಕ್ರಮ ಜರುಗುವುದಾಗಿ ಮಾಹಿತಿ ನೀಡಿದರು. ಮಠದ ಆಡಳಿತಾಧಿಕಾರಿ ಬಿ.ಕೆ.ಶ್ರೀಧರ್, ಮುರಳೀಧರ ಉಪಸ್ಥಿತರಿದ್ದರು.

ಅಂಗವಾಡಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ತಿಪಟೂರು: ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮ ವಿರೋಧಿಸಿ ಹಾಗೂ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ಹಾಗೂ ಸಿಐಟಿಯು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು.  ಈ ವೇಳೆ ಅಂಗನವಾಡಿ ನೌಕರರ ಸಂಘ ತಾ.ಅಧ್ಯಕ್ಷೆ ಅನುಸೂಯಮ್ಮ ಮಾತನಾಡಿ ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಖಾಸಗೀಕರಣ ಗೊಳಿಸಬಾರದು. ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಬೇಕೆಂದು ಆಗ್ರಹಿಸಿದರು.

11 ರಂದು ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ
ತುಮಕೂರು: ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಗರಗದಕುಪ್ಪೆಯ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಫೆ. 11 ರಂದು ಸಂಜೆ 6.30 ಕ್ಕೆ ನಡೆಯಲಿದೆ. ಅಂದು ಕೇರಳದ ಪ್ರಸಿದ್ಧ ಕಲಾ ತಂಡಗಳಿಂದ ಸಿಂಗಾರಿ ಕಾವಡಿ, ಸಿಂಗಾರಿ ಮೇಳಂ, ಥೈಯ್ಯಂ ಕಾವಡಿ, ನಾದಸ್ವರ ಮುಂತಾದ ಜಾನಪದ ಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೇ ಕೇರಳದ ಕಲಾವಿದರಿಂದ ಗಾಡ್ ಗ್ಯಾಲರಿ ಶೋ ಸುಂದರಲೋಕವನ್ನು ಸೃಷ್ಟಿ ಮಾಡಲಿದೆ ಹಾಗೂ ಅದ್ಧೂರಿ ಬಾಣ ಬಿರುಸು ಪ್ರದರ್ಶನ ಏರ್ಪಡಿಸಲಾಗಿದೆ. ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವದ ಪ್ರಾಯೋಜಕತ್ವವನ್ನು ಬೆಂಗಳೂರಿನ ಸೀರಾಕ್ ಪ್ರಾಪರ್ಟೀಸ್‌ನ ಮಾಲೀಕ ಸೀರಾಕ್ ರವೀಶ್ ಅವರು ವಹಿಸಿಕೊಂಡಿದ್ದಾರೆ. ಊರವರು, ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವೈಭವದ ಬ್ರಹ್ಮ ರಥೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಇಂದು ಜಿಎಸ್‌ಎಸ್ ಜಯಂತಿ
ತುಮಕೂರು: ಇಲ್ಲಿನ ಖಾಸಗಿ ಬಸ್ ನಿಲ್ದಾಣ ಪಕ್ಕ ಇರುವ ರೇಣುಕ ವಿದ್ಯಾಪೀಠದಲ್ಲಿ ಫೆ. 9 ರಂದು ಬೆಳಗ್ಗೆ 10.30 ಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಡಾ. ಜಿ.ಎಸ್. ಶಿವರುದ್ರಪ್ಪ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭ ಸಿ.ವಿ. ಮಹದೇವಯ್ಯ ವಹಿಸಲಿದ್ದಾರೆ. ಸಿದ್ಧಗಂಗಾ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಸುಮಂಗಳಮ್ಮ ಅವರು ಡಾ. ಜಿ.ಎಸ್‌ಎಸ್. ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಡಿ.ಎನ್.ಯೋಗೀಶ್ ಆಗಮಿಸಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಸಾಗರಹಳ್ಳಿ ನಟರಾಜು ಅವರು ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ್, ಕೋಶಾಧ್ಯಕ್ಷ ಮೋಹನಕುಮಾರ್ ಪಟೇಲ್, ಚಿಕ್ಕಬೆಳ್ಳಾವಿ ಶಿವಕುಮಾರ್ ತಿಳಿಸಿದ್ದಾರೆ.

ಪದಾಧಿಕಾರಿಗಳ ಆಯ್ಕೆ
ತುರುವೇಕೆರೆ: ತಾಲೂಕಿನ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘದ ಪ್ರಾಥಮಿಕ ಸಮಿತಿಯ  ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಸಣ್ಣರಂಗೇಗೌಡ, ಬಿ.ಕೆಂಪೇಗೌಡ, ಡಿ.ಮಹಂತೇಶ್, ಆರ್.ಶಿವಕುಮಾರ್, ಟಿ,ಗಂಗಾಧರ್, ಟಿ.ಬಿ.ಶಂಕರಲಿಂಗಪ್ಪ, ಆನಂದ ಕುಮಾರ್ ರವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ವೇಳೆ ತಿಪಟೂರು ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಲಿಂಗದೇವರು, ಮರಿಯಪ್ಪ, ತೇಜುಮೂರ್ತಿ, ಜಿ.ಎನ್. ನರಸಿಂಹಮೂರ್ತಿ, ಬಸವರಾಜು ಹಾಗೂ ಪ್ರಾಥಮಿಕ ಸಮಿತಿಯ ಸದಸ್ಯರು ಹಾಜರಿದ್ದರು. ಸಹಾಯಕ ಎಂಜಿನಿಯರ್ ಪಿ.ಎಸ್. ಗಿರೀಶ್ ಕುಮಾರ್ ಚುನಾವಣಾಧಿಕಾರಿಯಾಗಿದ್ದರು.

16ರಂದು ಬೇಟೇರಾಯಸ್ವಾಮಿ ರಾಜಗೋಪುರ ಕುಂಭಾಭಿಷೇಕ
ತುರುವೇಕೆರೆ: ತಾಲೂಕಿನ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಬೇಟೇರಾಯಸ್ವಾಮಿಯವರ ರಾಜಗೋಪುರ ಕುಂಭಾಭಿಷೇಕ ಮಹೋತ್ಸವ ಫೆಬ್ರವರಿ 16 ರಂದು ನಡೆಯಲಿದೆ. ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಫೆಬ್ರವರಿ 14 ರಿಂದ 16 ರವರೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 14 ರಂದು ಬೆಳಗ್ಗೆ ವಿರಕ್ತ ಮಠದ ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾಗಣಪತಿ ಪೂಜೆ, ಅಭಿಷೇಕ, ಸಾಮೂಹಿಕ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ. 15 ರಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಬೆಳಗ್ಗೆ ಶಾಂತಿ ಹೋಮ, ಪಾರಾಯಣ, ಧಾನ್ಯಾಧಿವಾಸ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ಪ್ರಗತಿಪರರ ವಿರುದ್ಧ ಮರಿದೇವರು ಆಕ್ರೋಶ
ತುಮಕೂರು: ಪ್ರಗತಿಪರ ಲೇಖಕರ ಪಟ್ಟಿಯಲ್ಲಿರುವ ಕೆ.ಬಿ. ಸಿದ್ದಯ್ಯ, ಕೆ.ಪಿ. ನಟರಾಜು, ಗಂಗಾಧರಮೂರ್ತಿ, ನಾಗಾರ್ಜುನ ಸಾಗ್ಗರೆ, ಡಾ. ಬಸವರಾಜು, ಗಂಗಾಧರ ಬೀಚನಹಳ್ಳಿ ಮುಂತಾದವರು ಪ್ರಗತಿಪರ ಲೇಖಕರೆಂದು ತಮಗೆ ತಾವೇ ಹಣ ಪಟ್ಟಿಕಟ್ಟುಕೊಂಡಿರುವ ಇವರಿಗೆ ಪ್ರಗತಿ  ಎಂಬ ಪದದ ಅರ್ಥವೇ ಗೊತ್ತಿಲ್ಲ ಎಂದು ಪ್ರೊ. ಸಿ.ಎಚ್. ಮರಿದೇವರು ವ್ಯಂಗ್ಯವಾಡಿದ್ದಾರೆ. ಮೋದಿ ಇರುವ ದೇಶದಲ್ಲಿ ನಾನಿರುವುದಿಲ್ಲ. ದೇಶಬಿಟ್ಟು ಹೋಗುತ್ತೇನೆಂದು ಹೇಳಿಕೆ ನೀಡಿದ ಅನಂತಮೂರ್ತಿ ಭಾರತ ದೇಶವನ್ನು ಬಿಟ್ಟು ಹೋಗದೆ ಮೋದಿ ಇರುವ ದೇಶದಲ್ಲಿ ಇನ್ನೂ ಏಕೆ ಇದ್ದಾರೆ. ಇದಕ್ಕೆ ಮೇಲ್ಕಂಡ ಪ್ರಗತಿಪರರೆಲ್ಲಾ ಉತ್ತರಿಸಬೇಕು ಎಂದರು. ಅನಂತಮೂರ್ತಿ ನೇತೃತ್ವದ ಆಯ್ಕೆ ಸಮಿತಿ ಕಳುಹಿಸಿದ ಮೂರು ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿ ರಾಜ್ಯಪಾಲರು ನೇಮಕಾತಿ ಆಜ್ಞೆ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯಪಾಲರದ್ದೇನೂ ತಪ್ಪಿಲ್ಲ. ಆದರೂ ಅನಂತಮೂರ್ತಿ, ನೇಮಕಾತಿ ಬಗ್ಗೆ ಅಪಸ್ವರ ಎತ್ತಿದ್ದಾರೆ ಎಂದಿದ್ದಾರೆ.

ಅನಿಲ್‌ಕುಮಾರ್ ಅಧ್ಯಕ್ಷರ ಆಯ್ಕೆ
ಶಿರಾ: ಕನ್ನಡಸೇನೆ ಕರ್ನಾಟಕ ನಾಡು ನುಡಿ ಸೇವೆಯನ್ನು ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದು, ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಘಟಕಗಳನ್ನು ತೆರೆಯುತ್ತಿದ್ದು, ಶಿರಾ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಎಸ್.ಎನ್. ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿಯನ್ನಾಗಿ ಎನ್.ದಾಸಪ್ಪ, ಕಾರ್ಯದರ್ಶಿಯನ್ನಾಗಿ ಮಹೇಶ್, ಸಹ ಸಂಘಟನಾ ಕಾರ್ಯದರ್ಶಿಯಾಗಿ ರಂಗನಾಥ್.ಎನ್.ಕೆ., ಸಂಚಾಲಕರನ್ನಾಗಿ ಭರತ್ ಎಸ್.ಎಂ., ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ತಮ್ಮ ತಿಳಿಸಿದ್ದಾರೆ.

ರೈತನ ಮೇಲೆ ಕರಡಿ ದಾಳಿ: ತೀವ್ರ ಗಾಯ
ತುಮಕೂರು: ಬೆಳ್ಳಂಬೆಳಿಗ್ಗೆ ತೋಟಕ್ಕೆ ದನ ಕಟ್ಟಲು ಹೋದ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ತಾಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಶೇಖರಯ್ಯ (55) ಎಂಬುವವರೇ ಕರಡಿ ದಾಳಿಗೊಳಗಾಗಿರುವ ವ್ಯಕ್ತಿ. ಕೃಷಿಕರಾಗಿರುವ ಇವರು ಮೆಳೇಹಳ್ಳಿ ಗ್ರಾಮಕ್ಕೊಳಪಡುವ ತೋಟದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಶನಿವಾರ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ಮನೆಯ ಹಿಂಭಾಗದಲ್ಲಿರುವ ಜಮೀನಿಗೆ ದನಗಳನ್ನು ಕಟ್ಟಿ ಹಾಕಲು ತೆರಳಿದ್ದ ಅವರ ಮೇಲೆ ಸಮೀಪದ ಪೊದೆಯಲ್ಲಿ ಅಡಗಿ ಕುಳಿತಿದ್ದ ಕರಡಿ ಏಕಾಏಕಿ ಇವರ ಮೇಲೆರಗಿ ಹೊಟ್ಟೆಯ ಭಾಗಕ್ಕೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಕರಡಿ ದಾಳಿಗೊಳಗಾಗಿ ಕಿರುಚಾಡಿದಾಗ ಮನೆಯವರು ಹಾಗೂ ಅಕ್ಕಪಕ್ಕದ ನೆರೆಹೊರೆಯವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕರಡಿ ಅಲ್ಲಿಂದ ಪರಾರಿಯಾಗಿದೆ. ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಶೇಖರಯ್ಯ ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.

ಆಂಜನೇಯಸ್ವಾಮಿ ದೇಗುಲ ಪ್ರಾರಂಭೋತ್ಸವ, ಹೋಮಕಾರ್ಯ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಶ್ರೀ ಅಂಜನೇಯಸ್ವಾಮಿ ದೇವಸ್ಥಾನ ಪ್ರಾರಂಭೋತ್ಸವದ ಅಂಗವಾಗಿ ಶನಿವಾರದಂದು ಗ್ರಾಮದೇವತೆ ಶ್ರೀಕಾಳಿಕಾಂಬದೇವಿಯ ಸಮ್ಮುಖದಲ್ಲಿ  ವಿವಿಧ ಧಾರ್ಮಿಕ ಕೈಂಕರ್ಯಗಳು ಸೇರಿದಂತೆ ಹೋಮಕಾರ್ಯವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಮುಂಜಾನೆಯಿಂದಲೇ ಅರ್ಚಕರಾದ ಮಲ್ಲಿಕಾರ್ಜುನಯ್ಯ, ಈಶ್ವರಯ್ಯ, ಚನ್ನಬಸವಯ್ಯ, ಯತೀಶ್, ವೀರೇಶ್ ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಸ್ವಾಮಿಗೆ ಅಭಿಷೇಕ, ನೇತ್ರೋನ್ಮಿಲನ, ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ದಿಗ್ಬಲಿಹರಣ ಸೇರಿದಂತೆ ಪೂಜಾ ವಿಧಿವಿಧಾನಗಳನ್ನು ನಡೆಸಿ ನಂತರ ಹೋಮಕಾರ್ಯಕ್ಕೆ ಪೂರ್ಣಾಹುತಿ ಅರ್ಪಿಸುವುದರ ಜೊತೆಗೆ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಕಾರ್ಯ ಜರುಗಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಟರಾಜು, ಮಲ್ಲಿಕಾರ್ಜುನಯ್ಯ,  ಚನ್ನಬಸವಯ್ಯ, ಸ್ವಾಮಿ, ಸುರೇಶ್, ಸತೀಶ್, ಉಮಾಪತಿ ದಂಪತಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಹೋಮಕಾರ್ಯದಲ್ಲಿ ಪಾಲ್ಗೊಂಡಿದ್ದು ಸ್ವಾಮಿಯ ಅಶೀರ್ವಾದ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.