ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವ ಜೊತೆಯಲ್ಲಿ ಸಂವಾದ
.ಪ್ರ. ವಾರ್ತೆ ಕುಣಿಗಲ್ ಫೆ.19
ತಾಲೂಕಿನ ಇತಿಹಾಸದಲ್ಲೆ ಮೊದಲ ಬಾರಿಗೆ ನ್ಯಾಯಾಧೀಶರು, ವಕೀಲರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳೊಂದಿಗೆ ಸೇರಿಕೊಂಡು, ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವ ಜೊತೆಯಲ್ಲಿ ಅವರ ಜೊತೆ ಸಂವಾದ ನಡೆಸಿ ಹಲವು ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಜಿಲ್ಲಾ ಕಾನೂನು ಸೇವಾಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಇತರೆ ಸಂಘ, ಸಂಸ್ಥೆಗಳ ಅಶ್ರಯದಲ್ಲಿ ಸೂರ್ಯಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾದ ಕಾನೂನು ಸಂವಾದ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಆರ್. ಶಾರದ ಉದ್ಘಾಟಿಸಿ ನೇರವಾಗಿ ಸಂವಾದಕ್ಕೆ ಮುಂದಾದರು. ಜಯಮ್ಮ ಎಂಬಾಕೆ, ಪತಿಯೊಬ್ಬ ಮೊದಲ ಹೆಂಡತಿ ಇದ್ದರೂ ಮತ್ತೊಂದು ಮದುವೆಯಾಗಿದ್ದಾನೆ. ಮೊದಲ ಪತ್ನಿ ಮತ್ತೊಬ್ಬನೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದಾರೆ. ಆಕೆಗೆ ಗಂಡನ ಆಸ್ತಿಯಲ್ಲಿ ಪಾಲುಬರುತ್ತದೆಯೆ ಎಂದು ಪ್ರಶ್ನಿಸಿದರು.
ಸ್ವಲ್ಪಗೊಂದಲಮಯವಾದ ಪ್ರಶ್ನೆಗೆ ನೇರವಾಗಿ ನ್ಯಾಯಾಧೀಶೆ ಉತ್ತರಿಸಿ ಹಿಂದೂ ವಿವಾಹ ಕಾನೂನಿನಡಿಯಲ್ಲಿ ಮೊದಲ ಹೆಂಡತಿ ಇದ್ದಾಗ, ಎರಡನೇ ಹೆಂಡತಿಗೆ ಅವಕಾಶವಿಲ್ಲ. ಇಲ್ಲಿ ಅಕ್ರಮ ಸಂಬಂಧ ಎಂಬುದು ಗಣನೆಗೆ ಬರೊಲ್ಲವಾದ್ದರಿಂದ ಮೊದಲ ಪತ್ನಿ ಗಂಡನ ಆಸ್ತಿಗೆ ಹಕ್ಕುದಾರಳಾಗುತ್ತಾಳೆ ಎಂದರು.
ಭಾಗ್ಯಮ್ಮ ಎಂಬಾಕೆ, ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಸಂಬಂಧಿಕರ ಮಗುವೊಂದನ್ನು ದತ್ತಕ ಪಡೆದಿದ್ದರು. ನಂತರ ಅವರಿಗೆ ಮಗುವಾಗಿದೆ. ಈಗ ಕಾನೂನಿನಡಿಯಲ್ಲಿ ಆಸ್ತಿ ಹಂಚಿಕೆ ಹೇಗೆಂದು ಪ್ರಶ್ನಿಸಿದರು. ವಕೀಲ ವೆಂಕಟಕೃಷ್ಣರಾವ್, ದತ್ತಕ ಕಾಯಿದೆ ಪ್ರಕಾರ ಯಾವುದೇ ಮಗುವನ್ನು ದತ್ತು ಪಡೆದಲ್ಲಿ ಆಮಗುವಿಗೆ ಕುಟುಂಬದವಾರಸುದಾರನ ಹಕ್ಕುಲಭಿಸುವ ಕಾರಣ ಇಬ್ಬರೂ ಮಕ್ಕಳಿಗೂ ಸಮಾನ ಹಕ್ಕಿರುತ್ತದೆ ಎಂದರು. ವಕೀಲರು, ಅಧಿಕಾರಿಗಳು ಹಲವು ಮಹಿಳೆಯರು ವೈಯುಕ್ತಿ, ಸಾಮಾನ್ಯ ಕಾನೂನಾತ್ಮಕ ಸಮಸ್ಯೆಗಳಿಗೆ ಉತ್ತರಿಸುವ ಮೂಲಕ ಅವಶ್ಯಕ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು.
ನ್ಯಾಯಾಧೀಶೆ ದಾಕ್ಷಾಯಿಣಿ, ತಹಸೀಲ್ದಾರ್ ಪುಟ್ಟನರಸಯ್ಯ, ವಕೀಲ ಸಂಘದ ಅಧ್ಯಕ್ಷ ದಯಾನಂದ, ಎಪಿಪಿ ಸುರೇಖಾ ಹಿರೇಮಠ, ಸಿಡಿಪಿಒ ಅಕ್ರ್ರಂ ಅಲಿಖಾನ್, ವಕೀಲರಾದ ರಂಗಸ್ವಾಮಿ, ಗುಡ್ಡಪ್ಪ, ನರಸಿಂಹಯ್ಯ, ವೆಂಕಟಕೃಷ್ಣರಾವ್, ಸತ್ಯನಾರಾಯಣ ಒಡೆಯರ್, ಸುರೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಸಿದ್ದಲಿಂಗೇಶ್ವರ ದೇವಸ್ಥಾನ: ಹೈ ಸೂಚನೆ
ಬೆಂಗಳೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನವನ್ನು ಮಠ ಎಂದು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. ಗದಗದ ತೋಂಟದ ಸಿದ್ದಲಿಂಗ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಸಿದ್ದಲಿಂಗೇಶ್ವರ ದೇವಸ್ಥಾನವನ್ನು ಧಾರ್ಮಿಕ ಸಂಸ್ಥೆಗಳು ದತ್ತಿ ಕಾಯ್ದೆಯ ವ್ಯಾಪ್ತಿಗೆ ಸೇರಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಅಲ್ಲಿ ಭಗವಂತನ ವಿಗ್ರಹವೇ ಇಲ್ಲ. ಹಿಂದಿನಿಂದ ಅಲ್ಲಿ ಗದ್ದುಗೆ ಮಾತ್ರ ಇದೆ. ಆದ್ದರಿಂದ ಅದನ್ನು ದೇವಸ್ಥಾನ ಎಂದು ವ್ಯಾಖ್ಯಾನಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಲಾಗಿತ್ತು. ಆದರೆ, ಗದ್ದುಗೆ ಕೂಡ ಧಾರ್ಮಿಕ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂಬ ಸರ್ಕಾರದ ಸ್ವಷ್ಟನೆ ಹಿನ್ನೆಲೆಯಲ್ಲಿ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ಸಾಮಾನ್ಯ ಸಭೆ
ತುಮಕೂರು: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸಾಕಮ್ಮನಾಗರಾಜು ಅವರ ಅಧ್ಯಕ್ಷತೆಯಲ್ಲಿ ಫೆ. 24 ರಂದು ಬೆಳಿಗ್ಗೆ 11 ಗಂಟೆಗೆ ಜಿ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ.
ಅಂತರ ಶಾಲಾ ಮಕ್ಕಳ ನಾಟಕೋತ್ಸವ
ತಿಪಟೂರು: ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಉಪವಿಭಾಗಾಧಿಕಾರಿ ಬಿ. ಸಿಂಧು ಕರೆ ನೀಡಿದರು. ಪಟ್ಟಣದ ಸ್ಟೆಲ್ಲಾ ಮೆರಿಸ್ ಪ್ರೌಢಶಾಲೆಯಲ್ಲಿ ಬಾಲ ಭವನ ಸೊಸೈಟಿ ಬೆಂಗಳೂರು, ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂತರ ಶಾಲಾ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಬಿಇಓ ಪ್ರಭುಸ್ವಾಮಿ ಮಾತನಾಡಿ ಬಾಲಭವನ ಸೊಸೈಟಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತಾಗುತ್ತಿದ್ದು, ಈ ಕಾರ್ಯ ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ದಿಬ್ಬದಮುನಿ ವಹಿಸಿ ಮಾತನಾಡಿದರು. ಸಿಡಿಪಿಓ ಓಂಕಾರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕಿನ ವಿವಿಧ ಶಾಲೆಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳ 5 ತಂಡಗಳು ನಾಟಕವನ್ನು ಪ್ರದರ್ಶಿಸಿದರು. ಅತ್ಯುತ್ತಮ ಪ್ರದರ್ಶನ ನೀಡಿದ ಒಂದು ತಂಡವನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ನಾಟಕ ಪ್ರದರ್ಶನದ ನಂತರ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜ್ಞಾನ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೂರ್ಥ್, ಶಿಕ್ಷಣ ಇಲಾಖೆಯ ಈರೇಗೌಡರು ಮತ್ತಿತರರಿದ್ದರು. ಸ್ನೇಹ ಪ್ರಾರ್ಥಿಸಿ, ಗೋಪಾಲಪ್ಪ ನಿರೂಪಿಸಿ, ದೀಪಾ ಕಮತೆ ವಂದಿಸಿದರು.
ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆ
ತಿಪಟೂರು: ತಿಪಟೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆರ್.ಬಿ. ರೇಣುಕಪ್ಪನವರು ಸರ್ವಾಮತದಿಂದ ಆಯ್ಕೆಯಾಗಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ. ಅವರ ಆಯ್ಕೆಯನ್ನು ಸಂಘದ ಭೈಲಾ ಪ್ರಕಾರ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಅನುಮೋದನೆ ಮಾಡಿದೆ. ಇನ್ನು ಮುಂದೆ ಶಿಕ್ಷಕರು ಯಾವುದೇ ಗೊಂದಲಕ್ಕೀಡಾಗದೆ, ತಮ್ಮ ಕುಂದು ಕೊರತೆಗಳಿಗೆ ತಮ್ಮನ್ನೇ ಸಂಪರ್ಕಿಸಬೇಕೆಂದು ರೇಣುಕಪ್ಪನವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

